ಸಾರಾಂಶ
ಯಲಬುರ್ಗಾ:
ವಕ್ಫ್ ಕಾಯ್ದೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಪಟ್ಟಣದ ಜಾಮಿಯಾ ಮಸೀದಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಮುಸ್ಲಿಂ ಸಮುದಾಯದ ತಾಲೂಕು ಅಧ್ಯಕ್ಷ ಅಖ್ತರ್‌ಸಾಬ್ ಖಾಜಿ ಮಾತನಾಡಿ, ವಕ್ಫ್ ಕಾಯ್ದೆ ಜಾರಿಯಾದರೆ ಇದು ಅಲ್ಪಸಂಖ್ಯಾತರಿಗೆ ಮರಣ ಶಾಸನವಾಗಲಿದೆ. ಇದನ್ನು ವಾಪಸ್ ಪಡೆಯಬೇಕು. ವಕ್ಫ್ ಕಾಯ್ದೆಗೆ ಶತಮಾನದ ಇತಿಹಾಸವಿದೆ. ಮುಸ್ಲಿಂ ಸಮುದಾಯದ ಬಡವರ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಅಲ್ಲಾಹನ ಹೆಸರಿನಲ್ಲಿ ದಾನ ಮಾಡುವ ಆಸ್ತಿಗಳೇ ವಕ್ಫ್ ಆಸ್ತಿಗಳಾಗಿವೆ. ಕಾಯ್ದೆ ತಿದ್ದುಪಡಿಯ ಹೆಸರಿನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ವಕ್ಫ್ ಆಸ್ತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ವ್ಯವಸ್ಥಿತ ಪಿತೂರಿ ನಡೆಸಿದೆ ಎಂದು ದೂರಿದರು.ಹತ್ತು ವರ್ಷಗಳಲ್ಲಿ ದೇಶದ ಮುಸ್ಲಿಮರ ಅಭಿವೃದ್ಧಿಗೆ ಚಿಂತಿಸದ ಕೇಂದ್ರ ಸರ್ಕಾರ ಪೌರತ್ವ ಕಾಯಿದೆ, ಹಿಜಾಬ್, ಹಲಾಲ್ ಹೆಸರಿನಲ್ಲಿ ಮುಸ್ಲಿಮರನ್ನು ಸಮಾಜದಿಂದ ದೂರ ತಳ್ಳುವ ಪ್ರಯತ್ನ ಮಾಡುತ್ತಿದೆ. ಮುಸಲ್ಮಾನರ ಮೂಲಭೂತ ಹಕ್ಕು ಮೊಟುಕುಗೊಳಿಸುವ ಮತ್ತು ಧಾರ್ಮಿಕ ಆಚರಣೆಗಳಿಗೆ ಧಕ್ಕೆ ತರುವ ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸಿದ್ದಾರೆ. ಈ ಹೋರಾಟ ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷದ ವಿರುದ್ಧ ಅಲ್ಲ. ಇದು ಕೇವಲ ಒಂದು ಕಾನೂನಿನ ವಿರುದ್ಧವಾಗಿದೆ ಎಂದರು.ಈ ವೇಳೆ ಪ್ರಮುಖರಾದ ಮೈಬುಸಾಬ್ ಮಕುಂದಾರ್. ಎಚ್.ಎಚ್. ಹಿರೇಮನಿ, ಮೈನುದ್ದೀನ್ ಎಲಿಗಾರ, ಮುನಾಫ್ ಮಕಾಂದಾರ, ಬಾಬುಸಾಬ್ ಕುಂದಗೋಳ, ದಾದು ಎಲಿಗಾರ, ಶಾಮಿದಸಾಬ್ ಮುಲ್ಲಾ ಇದ್ದರು.