ವಿಜಯಪುರದಲ್ಲಿ ಮೊಳಗಿತು ವಕ್ಫ್‌ ಹಠಾವೋ ಹೋರಾಟ

| Published : Nov 05 2024, 12:36 AM IST

ವಿಜಯಪುರದಲ್ಲಿ ಮೊಳಗಿತು ವಕ್ಫ್‌ ಹಠಾವೋ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಕ್ಫ್‌ ಹಠಾವೋ ದೇಶ ಬಚಾವೋ... ಮಾರಕ ವಕ್ಫ್‌ ಕಾಯ್ದೆ ನಿರ್ಮೂಲನೆಯೇ ನಮ್ಮೆಲ್ಲರ ಗುರಿ ಎಂಬ ಧ್ಯೇಯದೊಂದಿಗೆ ಭಾರತೀಯ ಕಿಸಾನ ಸಂಘ, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಕನ್ಹೇರಿ ಶ್ರೀಗಳು ಸೇರಿದಂತೆ ರೈತರು ಹಾಗೂ ಹಲವು ಮಠಾಧೀಶರ ನೇತೃತ್ವದಲ್ಲಿ ನಗರದಲ್ಲಿ ಇಂದಿನಿಂದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭವಾಗಿದೆ. ಹೋರಾಟಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಬಲ ಸೂಚಿಸಿದ್ದು ಹೋರಾಟ ತೀವ್ರತೆ ಪಡೆದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಕ್ಫ್‌ ಹಠಾವೋ ದೇಶ ಬಚಾವೋ... ಮಾರಕ ವಕ್ಫ್‌ ಕಾಯ್ದೆ ನಿರ್ಮೂಲನೆಯೇ ನಮ್ಮೆಲ್ಲರ ಗುರಿ ಎಂಬ ಧ್ಯೇಯದೊಂದಿಗೆ ಭಾರತೀಯ ಕಿಸಾನ ಸಂಘ, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಕನ್ಹೇರಿ ಶ್ರೀಗಳು ಸೇರಿದಂತೆ ರೈತರು ಹಾಗೂ ಹಲವು ಮಠಾಧೀಶರ ನೇತೃತ್ವದಲ್ಲಿ ನಗರದಲ್ಲಿ ಇಂದಿನಿಂದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭವಾಗಿದೆ. ಹೋರಾಟಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬೆಂಬಲ ಸೂಚಿಸಿದ್ದು ಹೋರಾಟ ತೀವ್ರತೆ ಪಡೆದಿದೆ.

ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ರ್‍ಯಾಲಿಯಲ್ಲಿ ರೈತಶಕ್ತಿ ದೇಶಶಕ್ತಿ, ವಕ್ಫ್ ರಾಕ್ಷಸ ತೊಲಗಲಿ ತೊಲಗಲಿ, ವಕ್ಫ್ ಸಚಿವರನ್ನು ವಜಾ ಗೊಳಿಸಿ... ರೈತ ಉಳಿದರೆ ದೇಶ ಉಳಿದೀತು... ವಕ್ಫ್‌ನಿಂದ ದೇವಾಲಯಗಳನ್ನು, ಮಠ ಮಂದಿರಗಳನ್ನು ಕಾಪಾಡಿ... ದೇಶದ್ರೋಹಿ ವಕ್ಫ್ ಮಂಡಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿಚೌಕ್‌ ಮಾರ್ಗವಾಗಿ, ಬಸವೇಶ್ವರ ಸರ್ಕಲ್, ಡಾ.ಅಂಬೇಡ್ಕರ್ ಸರ್ಕಲ್ ಮುಖಾಂತರ ಜಿಲ್ಲಾಡಳಿತ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ರೈತರು, ಮುಖಂಡರು, ಪಕ್ಷಾತೀತ ನಾಯಕರು, ಮಠಾಧೀಶರು, ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದರು. ಅಲ್ಲಿಂದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಡಿಸಿ ಕಚೇರಿ ಎದುರಿಗಿನ ರಸ್ತೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಲಾಯಿತು.ಈ ವೇಳೆ ಕನ್ಹೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ವಕ್ಫ್‌ ಎಂಬ ಪೆಡಂಭೂತ ಆವರಸುತ್ತಿದ್ದು, ನಾವು ಹೀಗೆ ಬಿಟ್ಟರೆ ಇದು ಎಲ್ಲೆಡೆ ಆವರಿಸಲಿದೆ. ಎಲ್ಲರೂ ನಮ್ಮೂರಿಗೆ ಬಂದಿಲ್ಲ, ನಮ್ಮ ಮನೆಗೆ ಬಂದಿಲ್ಲ‌ ಎಂದು ಸುಮ್ಮನಿದ್ದರು. ಆದರೆ ಇದು ಆವರಿಸಿದರೆ ಯಾರೂ ಉಳಿಯುವುದಿಲ್ಲ. ಇಂತಹ ಪರಿಸ್ಥಿತಿ ಬರಬಾರದು ಎಂದು ಹೋರಾಟಕ್ಕೆ ಇಳಿದಿದ್ದೇವೆ. ಇದನ್ನು ಸಂಪೂರ್ಣ ತೆಗೆದು ಹಾಕುವವರೆಗೆ ಬಿಡಬಾರದು. ನಿಮ್ಮ ಜೊತೆಗೆ ನಾವೆಲ್ಲ ಮಠಾಧೀಶರು ಇದ್ದೇವೆ. ಆಮರಣ ಉಪವಾಸ ಮಾಡುವ ಪ್ರಸಂಗ ಬಂದರೂ ನಾವು ಮೊದಲು ಇರುತ್ತೇವೆ. ಮಠಗಳು ಇರೋದೆ ರೈತರಿಂದ, ರೈತ ಸಂಕಷ್ಟಕ್ಕೆ ಸಿಲುಕಿದಾಗ ಮಠಗಳು ಹೇಗೆ ಸುಮ್ಮನಿರೋಕೆ ಸಾಧ್ಯ. ಇದೆಲ್ಲ ಸಂಪೂರ್ಣ ಬಗೆಹರಿಯುವವರೆಗೂ ಜೊತೆಗಿರುವ ಭರವಸೆ ನೀಡಿದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಭಾರತೀಯ ಕಿಸಾನ ಸಂಘ ಪಕ್ಷಾತೀತವಾಗಿ ಎಲ್ಲರನ್ನೂ ಹಾಗೂ ಎಲ್ಲ ಮಠಾಧೀಶರನ್ನು ಒಂದೆಡೆ ಸೇರಿಸಿ ಹೋರಾಟ ನಡೆಸುತ್ತಿರುವುದು ಸಂತೊಷದ ವಿಚಾರ. ವಕ್ಫ್‌ ವಿರುದ್ಧದ ಹೋರಾಟದಲ್ಲಿ ಸ್ವಾಮೀಜಿಗಳು ಭಾಗಿಯಾಗಿದ್ದು ಜವಾಬ್ದಾರಿ ಹೆಚ್ಚಿಸಿದೆ. ಸರ್ಕಾರಗಳು ಜನವಿರೋಧಿ, ರೈತ ವಿರೋಧಿ ನಿರ್ಣಯ ತೆಗೆದುಕೊಂಡಾಗ ಪ್ರಜೆಗಳು ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು. ಈ ರಾಜ್ಯ ಸರ್ಕಾರ ವಕ್ಫ್ ಕಾಯ್ದೆ ಮೂಲಕ ರೈತರ, ನಾಡಿನ ಜನರಿಗೆ ಅನ್ಯಾಯ ಮಾಡುತ್ತಿದೆ. ಹೀಗಾಗಿ ನಾವು ಧ್ವನಿ ಎತ್ತುವುದು ಅಗತ್ಯವಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ಜಾಗೃತವಾಗಿದೆ ಎಂಬುದನ್ನು ತಿಳಿಸಬೇಕಿದೆ. ಪ್ರಧಾನಿ ಮೋದಿ ವಕ್ಫ್‌ ವಿರುದ್ಧ ತಿದ್ದುಪಡಿ ಕಾಯ್ದೆ ತರಲು ಹೊರಟಿದ್ದು, ಅಷ್ಟರಲ್ಲಿ ಎಲ್ಲ ಆಸ್ತಿಗಳನ್ನು ವಕ್ಫ್‌ಗೆ ತೆಗೆದುಕೊಳ್ಳಬೇಕು ಎಂಬ ತರಾತುರಿಯಲ್ಲಿ ಸರ್ಕಾರ ರೈತರ ಪಹಣಿಗಳಲ್ಲಿನ 11ನೇ ಕಾಲಂಗೆ ವಕ್ಫ್‌ ಹೆಸರು ಸೇರಿಸುತ್ತಿದೆ. ಆದರೆ, ರಾಜ್ಯದ ರೈತರ ಭೂಮಿ ಮುಟ್ಟಲು ಹೋದರೆ ನಿಮಗೆ ಭವಿಷ್ಯವಿಲ್ಲ ಎಂಬುದನ್ನು ಜಮೀರ್ ಅಹಮ್ಮದ ಖಾನ ನೆನಪಿಟ್ಟುಕೊಳ್ಳಬೇಕು. 2013ರಲ್ಲಿನ ವಕ್ಫ್‌ ಕಾಯ್ದೆಗೆ ತಿದ್ದುಪಡಿ ಆಗಬೇಕು. ಜೊತೆಗೆ 1974ರ ಗೆಜೆಟ್ ರದ್ದಾಗುವ ವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದರು.ಕೇಂದ್ರ ಸಚಿವೆ ಕರಂದ್ಲಾಜೆ ಮಾತನಾಡಿ, ಯಾವ ಯಾವ ರೈತರ, ಮಠಗಳ ಪಹಣಿಗಳಲ್ಲಿ ವಕ್ಫ್ ಎಂದು ಹೆಸರು ಸೇರಿಸಲಾಗಿದೆ ಅದನ್ನು ತೆಗೆಯಬೇಕು. 1974ರ ಗೆಜೆಟ್ ರದ್ದು ಮಾಡಬೇಕು. ಮತಾಂಧ ಜಮೀರ್ ಅಹಮ್ಮದ ಖಾನ್ ರಾಜೀನಾಮೆ ಪಡೆಯಬೇಕು. ಹಿಂದೂ ಮುಸ್ಲಿಂ ಎತ್ತಿಕಟ್ಟುವ ಕೆಲಸವನ್ನು ಸಚಿವ ಜಮೀರ್ ಅಹಮ್ಮದ ಮಾಡುತ್ತಿದ್ದಾರೆ. ಎಲ್ಲಿಯ ವರೆಗೆ ರೈತರ ಭೂಮಿಗೆ ನ್ಯಾಯ ಸಿಗುವುದಿಲ್ಲವೋ ಅಲ್ಲಿವರೆಗೆ ನಾವು ವಿಶ್ರಮಿಸುವುದಿಲ್ಲ. ರಾಜ್ಯ ಸರ್ಕಾರ ರೈತರಿಗೆ ಮಾಡುತ್ತಿರುವ ಅನ್ಯಾಯವನ್ನು ನಿಲ್ಲಿಸಬೇಕು. ಕೇವಲ ಒಂದು ವರ್ಗವನ್ನು ಓಲೈಸಲು ಮಾಡಿದ ವಕ್ಫ್ ಕಾಯ್ದೆ ಎಂದರು. ವಕ್ಫ್‌ನಿಂದ ಆಗಿರುವ ಎಲ್ಲ ಸಮಸ್ಯೆಗಳು ಸರಿಯಾಗುವವರೆಗೂ ನಾವು ಅಹೋರಾತ್ರಿ ಧರಣಿಯನ್ನು ಮುಂದುವರೆಸಲಿದ್ದೇವೆ ಎಂದು ಎಚ್ಚರಿಸಿದರು.ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ದೇಶದ ಕರಾಳ ವಕ್ಫ್ ಕಾನೂನು ತೊಲಗಿಸಬೇಕು ಎಂದು ಭಾರತೀಯ ಕಿಸಾನ ಸಂಘ ಹಾಗೂ ವಿಜಯಪುರ- ಬಾಗಲಕೋಟೆ ಜಿಲ್ಲೆಗಳ ಮಠಾಧೀಶರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ. ನಿನ್ನೆ ಮುಸ್ಲಿಂ ಸಂಘಟನೆಗಳು ಸೇರಿ ದೆಹಲಿಯಲ್ಲಿ ಮೋದಿ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮೋದಿಗೆ ಬೆಂಬಲ ಕೊಟ್ಟರೆ ಐದು ಲಕ್ಷ ಜನ ಮುಸ್ಲಿಂ ಸೇರಿ ಹೋರಾಟ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು, ನಿತೀಶಕುಮಾರ ಅವರಿಗೆ ಬೆದರಿಕೆ ಹಾಕುತ್ತಾರೆ ಎಂದರು.

ಈ ಹೋರಾಟದಲ್ಲಿ ಸಂಸದ ರಮೇಶ ಜಿಗಜಿಣಗಿ, ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀ, ಜ್ಞಾನಯೋಗಾಶ್ರಮದ

ಬಸವಲಿಂಗ ಸ್ವಾಮೀಜಿ, ಬಬಲೇಶ್ವರ ಪಂಚಮಸಾಲಿ ಗುರುಪೀಠದ ಮಹಾದೇವ ಶಿವಾಚಾರ್ಯ ಸೇರಿ ಹಲವಾರು ಸ್ವಾಮೀಜಿಗಳು, ಭಾರತೀಯ ಕಿಸಾನ ಸಂಘದ ರಾಜ್ಯಾಧ್ಯಕ್ಷ ಬಿ.ಎಂ.ಕೋಕರೆ ಸೇರಿದಂತೆ ರೈತರು, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಉಮೇಶ ಕಾರಜೋಳ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಕೋಟ್‌ಮುಖ್ಯಮಂತ್ರಿಗಳೇ ನೀವು, ವಕ್ಫ್ ಕೈ ಬಿಡದಿದ್ದರೆ, ಅದನ್ನು ರದ್ದು ಮಾಡದಿದ್ದರೆ ಜಮೀರ್ ಅಹಮ್ಮದ ಖಾನ್‌ನಿಂದ ನೀವು ಮನೆಗೆ ಹೊಗೋದು ಗ್ಯಾರಂಟಿ. ಮುಂದೆ ಧರ್ಮಯುದ್ಧ ಆಗುವುದು ನಿಶ್ಚಿತ. ನಾವೂ ಧರ್ಮಯುದ್ಧಕ್ಕೆ ತಯಾರಾಗಿದ್ದೇವೆ. ನಮ್ಮ ದೇವರುಗಳ ಕೈಯಲ್ಲಿ ಉಂಡಿ(ಲಡ್ಡು) ಕರ್ಚಿಕಾಯಿ ಕೊಟ್ಟಿಲ್ಲಾ, ಅವರ ಕೈಯಲ್ಲಿ ಏನಿವೆ ಎಲ್ಲರೂ ನೋಡಿ.ಬಸನಗೌಡ ಪಾಟೀಲ ಯತ್ನಾಳ, ನಗರ ಶಾಸಕಬಾಕ್ಸ್‌

ಬೇಡಿಕೆಗಳೇನು..?:ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸಿ, ದೇಶದ ಆಸ್ತಿ ಎಂದು ಘೋಷಿಷಬೇಕು. ವಕ್ಫ್ ಟ್ರಿಬ್ಯೂನಲ್‌ ರದ್ದುಗೊಳಿಸಬೇಕು. ಎಲ್ಲಿಯೂ ವಕ್ಫ್ ಅದಾಲತ್ ನಡೆಸಬಾರದು. ವಕ್ಫ್‌ನ ಎಲ್ಲ ಆದಾಯಗಳನ್ನು ಸರ್ಕಾರ ಹಿಂಪಡೆಯಬೇಕು. ರೈತರ ಭೂಮಿ, ಮಠಗಳ ಆಸ್ತಿ, ಸರ್ಕಾರಿ ಆಸ್ತಿಯನ್ನು ವಕ್ಫ್‌ನಿಂದ ಮುಕ್ತಗೊಳಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಮುಂದಿರಿಸಿ ಹೋರಾಟ ಆರಂಭಿಸಲಾಗಿದೆ.