ವಕ್ಫ್‌ ಮಾಜಿ ಸಚಿವೆ ಕುಟುಂಬಕ್ಕೂ ವಕ್ಫ್‌ ಆಸ್ತಿ ಕಂಟಕ

| Published : Nov 01 2024, 01:16 AM IST

ಸಾರಾಂಶ

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್‌ ಆಸ್ತಿ ವಿವಾದ ಈಗ ವಕ್ಫ್‌ ಖಾತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬವನ್ನೂ ಆವರಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ್‌ ಆಸ್ತಿ ವಿವಾದ ಈಗ ವಕ್ಫ್‌ ಖಾತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬವನ್ನೂ ಆವರಿಸಿಕೊಂಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಯುವ ಉದ್ಯಮಿ, ಶಾಸಕಿ, ಮಾಜಿ ಸಚಿವೆ ಶಶಿಕಲಾ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪುತ್ರ ಬಸವಪ್ರಭು ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಸೇರಿದ ಯಕ್ಸಂಬಾದ ಸರ್ವೇ ನಂಬರ್ 337ನಲ್ಲಿರುವ 2 ಎಕರೆ 13 ಗುಂಟೆ ಜಮೀನು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಬೆಳಕಿಗೆ ಬಂದಿದೆ.

ಅಜ್ಜ ತಂದೆಯ ಕಾಲದಿಂದಲೂ ಇದೇ ಜಮೀನಿನಲ್ಲಿ ಜೊಲ್ಲೆ ಕುಟುಂಬ ಉಳುಮೆ ಮಾಡುತ್ತಾ ಬಂದಿದೆ. ಆದರೂ ಈ ಜಮೀನಿಗೆ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಆದರೆ ವಕ್ಫ್ ಬೋರ್ಡ್‌ನಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ರಾಜ್ಯಾದ್ಯಂತ ವಕ್ಫ್ ಬೋರ್ಡ್ ಹೆಸರು ರೈತರ ಜಮೀನಿನಲ್ಲಿ ಬಂದಿದೆ. ಯಕ್ಸಂಬಾದಲ್ಲೂ ಹಲವಾರು ರೈತರ ಹಾಗೂ ನನ್ನ ಮಗನ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಅಜ್ಜನ ಕಾಲದಿಂದಲೂ ನಮ್ಮ ಜಮೀನಿದೆ. ಯಾವಾಗ ಬಂತು ಹೇಗೆ ಬಂತು ಗೊತ್ತಿಲ್ಲ. ಆದರೆ, ನೇರವಾಗಿ ವಕ್ಫ್ ಆಸ್ತಿ ಎಂದು ನಿರ್ಣಯ ಮಾಡಿದ್ದು ತಪ್ಪು. ರೈತರ ಹೋರಾಟ ನಡೆದಿದೆ. ಇದು ಇನ್ನೂ ತೀವ್ರಗತಿಯಲ್ಲಿ ನಡೆಯಲಿದೆ. ಈ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ಕ್ರಮ ವಹಿಸದಿದ್ದರೆ ರೈತರು ಹೋರಾಟ ಮಾಡಬೇಕಾಗುತ್ತೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.

ಕಾಂಗ್ರೆಸ್ ಸರ್ಕಾರ ಇಂತಹ ಕೃತ್ಯ ನಿಲ್ಲಿಸಿ ರೈತರಿಗೆ ನ್ಯಾಯ ಕೊಡಿಸಬೇಕು. ನಮ್ಮ ಜಮೀನು ಪೂರ್ವಜರ ಕಾಲದಿಂದ ಬಂದಿದೆ. 2020ರ ನಂತರ ಈ ರೀತಿ ವಕ್ಫ್ ಹೆಸರು ಬಂದಿವೆ. ಏಕಾಏಕಿ ಹೆಸರು ಹೇಗೆ ಬರುತ್ತೆ ಯಾವ ಪ್ರಕಾರದ ಕಾಯ್ದೆ ಇದು. ಇದೊಂದು ಹುಚ್ಚರಾಟ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಜಮೀನಿನ ಅಕ್ಕಪಕ್ಕ ದರ್ಗಾ, ಮಸೀದಿ ಕೂಡ ಇಲ್ಲ. ಕೂಡಲೇ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ನನಗೆ ದೂರವಾಣಿ ಮೂಲಕ ಆತ್ಮೀಯರೊಬ್ಬರು ನಿಮ್ಮ ಹೊಲದ ಆಸ್ತಿಯ ಮೇಲೆ ವಕ್ಫ್ ಹೆಸರು ಬಂದಿದೆ ಎಂದು ತಿಳಿಸಿದಾಗ ಕೂಡಲೇ ಪಹಣಿ ಪರಿಶೀಲಿಸಿದಾಗ ವಕ್ಫ್‌ ಆಸ್ತಿ ನಮೂದಾಗಿರುವುದು ಗೊತ್ತಾಗಿದೆ. ಇದು ನಮ್ಮ ಪಿತ್ರಾರ್ಜಿತ ಆಸ್ತಿ. ಸರ್ಕಾರ ಈ ರೀತಿ ರೈತರ ಆಸ್ತಿಗಳ ಮೇಲೆ ವಕ್ಫ್ ಬೋರ್ಡ್‌ ಹೆಸರು ಸೇರಿಸಿರುವುದು ಖಂಡನಾರ್ಹ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ.

- ಬಸವಪ್ರಸಾದ ಅಣ್ಣಾಸಾಹೇಬ ಜೊಲ್ಲೆ, ಯುವ ಉದ್ಯಮಿ, ಯಕ್ಸಂಬಾ