ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾಮಹೋತ್ಸವ ಹಾಗೂ ಶ್ರಾವಣ ಮಾಸದಂಗವಾಗಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಬಸವಾದಿ ಪ್ರಥಮರ ವಚನ ಚಿಂತನ ಪ್ರವಚನವನ್ನು ಜನರು ಸದುಪಯೋಗಪಡಿಸಿಕೊಳ್ಳುವಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಬಸಪ್ಪ ಪೂಜಾರಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯದ ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿನ ನಂದೀಶ್ವರ ರಂಗಮಂದಿರದಲ್ಲಿ ಮೂಲನಂದೀಶ್ವರ ಜಾತ್ರಾಮಹೋತ್ಸವ ಹಾಗೂ ಶ್ರಾವಣ ಮಾಸದಂಗವಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ, ಬಸವೇಶ್ವರ ಜಾತ್ರಾಮಹೋತ್ಸವ ಸಮಿತಿ, ಬಸವೇಶ್ವರ ಸೇವಾ ಸಮಿತಿಯಿಂದ ನಡೆದ ಬಸವಾದಿ ಪ್ರಥಮರ ವಚನ ಚಿಂತನ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.೧೨ನೇ ಶತಮಾನದ ಬಸವಾದಿ ಶರಣರು ಬದುಕಿನ ಮೌಲ್ಯಗಳನ್ನು ವಚನಗಳ ಮೂಲಕ ನಮಗೆ ಸಂದೇಶ ನೀಡಿದ್ದಾರೆ. ವಚನಗಳಲ್ಲಿನ ಮೌಲ್ಯವನ್ನು ಅರಿತು ಸನ್ಮಾರ್ಗದಲ್ಲಿ ನಡೆದು ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.ಪ್ರವಚನಕಾರ ಬಳೂಟಗಿಯ ಶಿವಕುಮಾರ ಸ್ವಾಮೀಜಿ ಮಾತನಾಡಿ, ಹನ್ನೆರಡು ಮಾಸಗಳಲ್ಲಿ ಶ್ರಾವಣ ಮಾಸ ಪಾವಿತ್ರ್ಯತೆಯಿಂದ ಕೂಡಿದೆ. ಈ ಮಾಸದಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ಶ್ರವಣ ಮಾಡುವುದರಿಂದ ಜೀವನ ಪಾವನವಾಗಲಿದೆ. ನಿತ್ಯ ವಚನ ಸಾಹಿತ್ಯ ಓದಿದರೆ ಮನಸ್ಸು ಪ್ರಪುಲ್ಲಿತವಾಗುತ್ತದೆ. ಪಟ್ಟಣ ಸೇರಿ ಎಲ್ಲರೂ ಸರಿಯಾದ ಸಮಯಕ್ಕೆ ಬಂದು ವಚನ ಚಿಂತನ ಪ್ರವಚನ ಆಲಿಸುವಂತೆ ಹೇಳಿದರು.ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬಸವನಬಾಗೇವಾಡಿಯಲ್ಲಿ ಪ್ರತಿವರ್ಷ ನಾಡಿನ ಶ್ರೇಷ್ಠ ಪ್ರವಚನಕಾರರಿಂದ ಒಂದು ತಿಂಗಳು ಪ್ರವಚನ ನಡೆಯುತ್ತದೆ. ಈಗಾಗಲೇ ಸರ್ಕಾರ ಬಸವಜನ್ಮ ಸ್ಥಳ ಅಭಿವೃದ್ಧಿಗಾಗಿ ಪ್ರತ್ಯೇಕ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಘೋಷಣೆ ಮಾಡಿದೆ. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಕ್ಷೇತ್ರದ ಸಚಿವ ಶಿವಾನಂದ ಪಾಟೀಲ ಸೇರಿ ಎಲ್ಲ ಮುಖಂಡರು ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವಂತೆ ಮಾಡಬೇಕೆಂದರು.ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಬಸವಾದಿ ಪ್ರಥಮರ ವಚನದ ಸಂದೇಶಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಬಳೂಟಗಿಯ ಶಿವಕುಮಾರ ಸ್ವಾಮೀಜಿಗಳನ್ನು ಪ್ರವಚನಕ್ಕೆ ಆಹ್ವಾನಿಸಲಾಗಿದೆ. ನಿತ್ಯ ಪ್ರವಚನ ಆಲಿಸಿ ಜನರು ಜೀವನ ಪಾವನ ಮಾಡಿಕೊಳ್ಳಬೇಕು. ಬಸವೇಶ್ವರ ಜಾತ್ರಾಮಹೋತ್ಸವ ಆ.೨೬ರಿಂದ ಐದು ದಿನಗಳ ಕಾಲ ಜರುಗಲಿದೆ. ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಆ.೨೯,೩೦ ರಂದು ಕೃಷಿ ಮೇಳ ಆಯೋಜನೆ ಮಾಡಲಾಗುತ್ತಿದೆ. ರೈತರು ಇದನ್ನುಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಮುಖಂಡ ಸಂಗಮೇಶ ಓಲೇಕಾರ ಮಾತನಾಡಿದರು. ಶಿವಾನಂದ ಈರಕಾರ ಮುತ್ಯಾ ನೇತೃತ್ವ ವಹಿಸಿದ್ದರು. ಬಸವೇಶ್ವರ ಸೇವಾ ಸಮಿತಿ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಟಿಎಪಿಸಿಎಂಸ್ ಅಧ್ಯಕ್ಷ ಶೇಖರಗೌಡ ಪಾಟೀಲ, ಸಮಿತಿ ಅಧ್ಯಕ್ಷ ಭರತ ಅಗರವಾಲ, ಹಿರಿಯ ಸಾಹಿತಿ ಲ.ರು.ಗೊಳಸಂಗಿ, ನಿವೃತ್ತ ಪ್ರಾಚಾರ್ಯ ಸುರೇಶಗೌಡ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರವಿ ರಾಠೋಡ, ಮುಖಂಡರಾದ ಸಂಗಣ್ಣ ಕಲ್ಲೂರ, ಸಂಕನಗೌಡ ಪಾಟೀಲ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಗುರಲಿಂಗ ಬಸರಕೋಡ, ಉಪಾಧ್ಯಕ್ಷರಾದ ಸಂಗಯ್ಯ ಒಡೆಯರ, ಪ್ರವೀಣ ಪೂಜಾರಿ, ಬಸವರಾಜ ಅಳ್ಳಗಿ, ಮುತ್ತು ಪತ್ತಾರ, ಪ್ರಧಾನ ಕಾರ್ಯದರ್ಶಿ ಬಾಬು ನಿಡಗುಂದಿ ಇತರರು ಇದ್ದರು.
ಎಂ.ಜಿ.ಆದಿಗೊಂಡ ಪರಿಚಯಿಸಿದರು. ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಎಂ.ಬಿ.ತೋಟದ ಸ್ವಾಗತಿಸಿದರು. ಶಿಕ್ಷಕರಾದ ಎಚ್.ಬಿ.ಬಾರಿಕಾಯಿ, ಕೊಟ್ರೇಶ ಹೆಗ್ಡಾಳ ನಿರೂಪಿಸಿದರು.