ಹಗರಿಬೊಮ್ಮನಹಳ್ಳಿ: ಎಸ್‌ಎಲ್‌ಆರ್ ಕಾರ್ಖಾನೆಯ ಮಾಲಿನ್ಯದಿಂದ ಲೋಕಪ್ಪನಹೊಲ ಗ್ರಾಮದ ರೈತರ ಕೃಷಿ ಜಮೀನುಗಳು ಬರಡಾಗುತ್ತಿವೆ. ಏತ ನೀರಾವರಿ ಯೋಜನೆ ಅತಂತ್ರವಾಗಿದೆ. ಕುಡಿಯುವ ನೀರಿಗೂ ತತ್ವಾರವಿದೆ. ಸ್ಥಳೀಯ, ತಾಲೂಕು, ಜಿಲ್ಲಾಡಳಿತ ಗ್ರಾಮದ ಬೇಡಿಕೆಗಳಿಗೆ ಸ್ಪಂದಿಸದೇ ಮೌನಕ್ಕೆ ಜಾರಿದೆ ಎಂದು ರಾಜ್ಯ ಅಂಗವಿಕಲ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್ ಖೇದ ವ್ಯಕ್ತಪಡಿಸಿದರು.
ತಾಲೂಕಿನ ಲೋಕಪ್ಪನಹೊಲ ಗ್ರಾಮದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮದ ಜನತೆ ಬುಧವಾರ ಇಲ್ಲಿನ ಬಸವೇಶ್ವರ ವೃತ್ತದಿಂದ ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿವರೆಗೂ ಆಯೋಜಿಸಿರುವ ಎರಡು ದಿನಗಳ ಪಾದಯಾತ್ರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ಗ್ರಾಮದ ಕೂಗಳತೆ ದೂರದಲ್ಲಿರುವ ಎಸ್.ಎಲ್.ಆರ್. ಕಾರ್ಖಾನೆಯು ಗ್ರಾಮದ ಜಾನುವಾರುಗಳಿಗೆ ಮೇವು ಹಾಗೂ ನೀರಿಗೆ ಆಸರೆಯಾಗಿದ್ದ ನೂರಾರು ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ. ಗ್ರಾಮದ ಹುಲಿಗುಡ್ಡ- ವೆಂಕಟಾಪುರ ಬಂಡಿ ರಸ್ತೆಯನ್ನು ಅತಿಕ್ರಮಿಸಿಕೊಂಡಿದೆ. ವ್ಯಾಸನಕೇರಿ ಏತ ನೀರಾವರಿಯ ಯೋಜನೆಯ ಕಾಲುವೆಗಳನ್ನು ಅಪೋಷನಗೈದ ಪರಿಣಾಮ ರೈತರ ಕೃಷಿ ಚಟುವಟಕಿಗಳಿಗೆ ನೀರಿಲ್ಲದಂತಾಗಿದೆ ಎಂದು ಆರೋಪಗಳ ಸುರಿಮಳೆಗೈದರು.
ಲೋಕಪ್ಪನಹೊಲ ಗ್ರಾಮದ ಜನತೆಯ ಬೇಡಿಕೆಗಳು ಅರಣ್ಯರೋದನವಾಗಿವೆ. ಗ್ರಾಪಂ ಸಹಿತ ತಾಲೂಕು ಮತ್ತು ಜಿಲ್ಲಾ ಆಡಳಿತ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡದೇ ನಿರ್ಲಕ್ಷಿಸಿವೆ. ಕಾರ್ಖಾನೆ ಒತ್ತುವರಿ ಮಾಡಿರುವ ಸರ್ಕಾರಿ ಜಮೀನು, ಬಂಡಿ ರಸ್ತೆ ಮತ್ತು ಏತ ನೀರಾವರಿ ಕಾಲುವೆಗಳ ಒತ್ತುವರಿಯನ್ನು ತೆರವು ಮಾಡಿಸಬೇಕು ಎಂದು ಜನವಾದಿ ಸಂಘಟನೆಯ ಸರ್ದಾರ್ ಹುಲಿಗೆಮ್ಮ ಒತ್ತಾಯಿಸಿದರು.ಭೂಮಿ ಕೊಟ್ಟ ರೈತರ ಕುಟುಂಬಗಳಿಗೆ ಉದ್ಯೋಗ ಒದಗಿಸಿ ಗ್ರಾಮಾಭಿವೃದ್ಧಿಗೆ ಕಾರ್ಖಾನೆಯ ಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಾಂತ ರೈತ ಸಂಘದ ಕೊಟಗಿ ಮಲ್ಲಿಕಾರ್ಜುನ ಆಗ್ರಹಿಸಿದರು.
ಕರ್ನಾಟಕ ಮಹಾ ಜನಸೇನೆಯ ತಾಲೂಕು ಸಮಿತಿ, ಲೋಕಪ್ಪನಹೊಲ ಗ್ರಾಮ ಸಮಿತಿ, ಕರ್ನಾಟಕ ಪ್ರಾಂತ ರೈತ ಸಂಘದ ಗ್ರಾಮ ಸಮಿತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಗ್ರಾಮ ಸಮಿತಿಯ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ಬ್ಯಾಡಗಿ ಕನಕಪ್ಪ, ಕಾಳಿ ಬಸಪ್ಪ, ಮಲ್ ಶಿವಕುಮಾರ್, ತಂಬ್ರಹಳ್ಳಿ ನಾರಾಯಣ್, ಪಿ.ದೊಡ್ಡ ಹನಮಂತಪ್ಪ, ಕೆ.ಲಕ್ಷ್ಮಣ, ಪಿ.ಹನಮಂತ, ಚೌಟ್ಗಿ ನಾಗರಾಜ್, ಬಂಗ್ಲಿ ಬಸಪ್ಪ, ಚೌಟ್ಗಿ ಪಾರ್ವತಿ, ಎಂ.ಅಭಿಲಾಷ, ಸಿ.ಮಂಜುಳಾ, ಕಾಳಿ ಅಂಬಿಕಾ, ಯು.ಜೈನಾಬಿ ಹಾಗೂ ಸಿ.ಲಕ್ಷ್ಮೀದೇವಿ ಸಹಿತ ನೂರಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.