ವಾಕರೂ ಜಾಹೀರಾತು ಫಲಕ ಹರಿದು ಪ್ರತಿಭಟನೆ
KannadaprabhaNewsNetwork | Published : Nov 02 2023, 01:00 AM IST
ವಾಕರೂ ಜಾಹೀರಾತು ಫಲಕ ಹರಿದು ಪ್ರತಿಭಟನೆ
ಸಾರಾಂಶ
ಚನ್ನಪಟ್ಟಣ: ತಾಲೂಕಿನ ಬೈರಾಪಟ್ಟಣದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಅಳವಡಿಸಿರುವ ವಾಕರೂ ಪಾದರಕ್ಷೆ ಕಂಪನಿಯ ಜಾಹೀರಾತು ಫಲಕದಲ್ಲಿ ಕರ್ನಾಟಕದ ಬಾವುಟಕ್ಕೆ ಬಳಸಲಾಗುವ ಹಳದಿ ಹಾಗೂ ಕೆಂಪು ಬಣ್ಣವನ್ನು ಬಳಸುವ ಮೂಲಕ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಚನ್ನಪಟ್ಟಣ: ತಾಲೂಕಿನ ಬೈರಾಪಟ್ಟಣದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಅಳವಡಿಸಿರುವ ವಾಕರೂ ಪಾದರಕ್ಷೆ ಕಂಪನಿಯ ಜಾಹೀರಾತು ಫಲಕದಲ್ಲಿ ಕರ್ನಾಟಕದ ಬಾವುಟಕ್ಕೆ ಬಳಸಲಾಗುವ ಹಳದಿ ಹಾಗೂ ಕೆಂಪು ಬಣ್ಣವನ್ನು ಬಳಸುವ ಮೂಲಕ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ತಾಲೂಕಿನ ಬೈರಾಪಟ್ಟಣದ ಬಳಿ ಬೆಂ-ಮೈ ಹೆದ್ದಾರಿ ಬಳಿ ತಮಿಳುನಾಡು ಮೂಲದ ವಾಕರೂ ಶೂ ಹಾಗೂ ಪಾದರಕ್ಷೆ ತಯಾರಿಕಾ ಕಂಪನಿ ಅಳವಡಿಸಿರುವ ಜಾಹೀರಾತು ಫಲಕದ ಮುಂದೆ ಕಕಜವೇ ನೇತೃತ್ವದಲ್ಲಿ ಜಮಾಯಿಸಿದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಕಂಪನಿ ವಿರುದ್ಧ ಪ್ರತಿಭಟಿಸಿ ನಾಮಫಲಕ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಪದೇಪದೇ ಖ್ಯಾತೆ ತೆಗೆಯುತ್ತಿದೆ. ಇದೀಗ ಕನ್ನಡ ರಾಜ್ಯೋತ್ಸವದ ದಿನವೇ ತಮಿಳುನಾಡು ಮೂಲಕದ ವಾಕರೂ ಶೂ ಕಂಪನಿ ತನ್ನ ಉತ್ಪನ್ನಗಳ ಜಾಹೀರಾತು ಫಲಕಕ್ಕೆ ನಮ್ಮ ನಾಡಿನ ಬಾವುಟಕ್ಕೆ ಬಳಸುವ ಹಳದಿ-ಕೆಂಪು ಬಣ್ಣ ಬಳಸಿರುವುದನ್ನು ಖಂಡಿಸಿದರು. ಕರುನಾಡ ಸೇನೆಯ ರಾಜ್ಯ ಉಪಾಧ್ಯಕ್ಷ ಜಗದೀಶ್ ಮಾತನಾಡಿ, ನಮ್ಮ ನಾಡಿನ ಬಾವುಟಕ್ಕೆ ತನ್ನದೇ ಆದ ಇತಿಹಾಸವಿದೆ. ಬಾವುಟದಲ್ಲಿರುವ ಹಳದಿ ಬಣ್ಣ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಕೆಂಪು ಬಣ್ಣ ನಾಡಿನ ಉಳಿವಿಗೆ ತ್ಯಾಗ ಬಲಿದಾನ ಮಾಡಿರುವ ಹೋರಾಟಗಾರರ ರಕ್ತದ ಪ್ರತೀಕ. ಇಂತಹ ಬಾವುಟಕ್ಕೆ ಬಳಸುವ ಬಣ್ಣವನ್ನು ಬಳಸಿ ಚಪ್ಪಲಿ ಹಾಕಿ ಜಾಹೀರಾತು ಮಾಡಿರುವ ಸಂಸ್ಥೆ ಮತ್ತು ಈ ಜಾಹೀರಾತು ಸಿದ್ದಪಡಿಸಿರುವ ಕಂಪನಿಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು. ಜೊತೆಗೆ ನಾಡಿನ ಜನತೆ ಈ ಕಂಪನಿ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ರಾಜು ಮಾತನಾಡಿ, ಹೊರ ರಾಜ್ಯದ ಕಂಪನಿಗಳು ಕನ್ನಡ ಭಾಷೆಯನ್ನು ತುಳಿಯುವ ಕೆಲಸ ಮಾಡುತ್ತಿದ್ದರೂ ಸರ್ಕಾರಕ್ಕೆ ಕಾಣುತ್ತಿಲ್ಲ. ಪಾದರಕ್ಷೆ ಕಂಪನಿಯೊಂದು ನಮ್ಮ ನಾಡಿನ ಬಾವುಟದ ಬಣ್ಣ ಬಳಸಿ ಜಾಹೀರಾತು ಫಲಕವನ್ನು ರಾಜ್ಯಾಧ್ಯಂತ ಅಳವಡಿಸಿ ಅವಮಾನ ಮಾಡುತ್ತಿದ್ದರೂ ಈವರೆಗೆ ಸರ್ಕಾರದ ಗಮನಕ್ಕೆಬಂದಿಲ್ಲ ಎಂದರೆ ಇದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು. ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಶಿವು ಮಾತನಾಡಿ, ತಮಿಳುನಾಡು ರಾಜ್ಯದಲ್ಲಿ ಒಂದೊಂದೇ ವಿಚಾರದಲ್ಲಿ ಖ್ಯಾತೆ ತೆಗೆಯುತ್ತಿದ್ದರೂ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ. ತಮಿಳುನಾಡು ಮೂಲಕ ಕಂಪನಿಗಳು ಕನ್ನಡವನ್ನು ತುಳಿಯುವ ಕೆಲಸ ಮಾಡುತ್ತಿದ್ದರೂ ಸರ್ಕಾರ ಮೌನವಾಗಿದೆ. ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಮಳೂರು ಗ್ರಾಮ ಪಂಚಾಯ್ತಿಯ ಪಿಡಿಒ ಮತ್ತು ಅಧಿಕಾರಿಗಳು ಜಾಹೀರಾತನ್ನು ತೆರವು ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಸಂಜಯ್ ಮೋಹನ್, ಮನೋಜ್, ದಿನೇಶ್, ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪೊಟೋ೧ಸಿಪಿಟಿ3,4: ಚನ್ನಪಟ್ಟಣದ ಬೈರಾಪಟ್ಟಣದ ಬಳಿ ವಾಕರೂ ಶೂ ಕಂಪನಿ ಜಾಹೀರಾತು ಫಲಕಕ್ಕೆ ಹಳದಿ ಹಾಗೂ ಕೆಂಪು ಬಣ್ಣ ಬಳಸಿರುವುದನ್ನು ಖಂಡಿಸಿ ಕಕಜವೇ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.