ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಸಮಯಕ್ಕೆ ಬೆಲೆ ಕೊಡುವವರು ಸಾಧಕರಾಗಿ ಬೆಳೆಯಲು ಸಾಧ್ಯ, ವಿದ್ಯಾರ್ಥಿಗಳು ಪಠ್ಯಪುಸ್ತಕದ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಕೂಡ ತಮ್ಮನ್ನು ತೊಡಗಿಸಿಕೊಂಡಾಗ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪಿಯು ವಿಭಾಗದ ಉಪನಿರ್ದೇಶಕ ಪಿ.ಐ. ಭಂಡಾರಿ ಹೇಳಿದರು.ಅಥಣಿ ಪಟ್ಟಣದ ಜಾದವಜಿ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿ ಇಟ್ಟುಕೊಂಡು, ಅದರ ಸಾಧನೆಗಾಗಿ ಸತತ ಪ್ರಯತ್ನ ಮಾಡಬೇಕು. ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಎಲ್ಲ ವಿಷಯಗಳ ಜ್ಞಾನವನ್ನು ಸಂಪಾದಿಸಬೇಕು. ಜ್ಞಾನದ ಮಾರ್ಗದಲ್ಲಿ ನಡೆದವರು ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯಪುಸ್ತಕದ ವಿಷಯಗಳ ಜೊತೆಗೆ ಇನ್ನಿತರ ಸಾಮಾನ್ಯ ಜ್ಞಾನ ಅಧ್ಯಯನ ಮಾಡುವುದು ಅಗತ್ಯ. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢತೆ ಹೊಂದಲು ಮತ್ತು ತಮ್ಮ ಪ್ರತಿಭೆ ಪ್ರದರ್ಶಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಒಳ್ಳೆಯ ಅವಕಾಶವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ರಾಮಕೃಷ್ಣ ಆಶ್ರಮದ ಮೋಕ್ಷಾತ್ಮಾನಂದಜಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಮುಖ್ಯ, ಗುರಿ ಸಾಧನೆಗೆ ಆಸಕ್ತಿ ಇರಬೇಕು ಸಮಯ ಅರಿತಿರಬೇಕು, ಸುಸಂಸ್ಕೃತರಾಗಬೇಕಾದರೆ ಮೊಬೈಲ್ ಗೀಳಿನಿಂದ ದೂರವಿರಬೇಕು, ಇಂದು ವಿದ್ಯಾರ್ಥಿಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಮೊಬೈಲ್. ಬ್ರಹ್ಮಚರ್ಯ ಪಾಲನೆ ಸಾಧನ ವಿದ್ಯಾರ್ಥಿಗಳ ಬದುಕಿನ ಮಾರ್ಗವನ್ನು ಉನ್ನತಕ್ಕೆ ಏರಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ದೈಹಿಕ ಆಕರ್ಷಣೆಯಿಂದ ದೂರ ಇರಬೇಕು ಎಂದು ಅರ್ಥಪೂರ್ಣ ಹಿತೋಪದೇಶ ನೀಡಿದರು.ಜಾಧವಜಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಡಾ ರಾಮ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಉಜ್ವಲ್ ಸಿಂಗ್ ಪವಾರ ದೇಸಾಯಿ, ಎಸ್.ಎಸ್.ಸಂಗೋರಾಮ, ಅನಿಲ ದೇಶಪಾಂಡೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಎಂ.ಪಿ.ಮೇತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಮನೋಹರಿ ಪಾಟೀಲ ನಿರೂಪಿಸಿದರು. ಬಿ.ಎಸ್.ಲೋಕೂರ ವಂದಿಸಿದರು.