ಸಾರಾಂಶ
ಮಡಿಕೇರಿ ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ತಿಂಗಳ ಕಾಲ ನಡೆದ ಉಚಿತ ಬೇಸಿಗೆ ತರಬೇತಿ ಶಿಬಿರ ಶುಕ್ರವಾರ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಕ್ಕಳಿಗೆ ಶಿಕ್ಷಣ ಮುಖ್ಯ, ಓದಿ ವಿದ್ಯಾವಂತರಾಗದಿದ್ದರೂ ಗುಣವಂತರಾಗಬೇಕೆಂದು ಹಾಕಿ ಪಟು, ರಾಷ್ಟ್ರೀಯ ಹಾಕಿ ವೀಕ್ಷಕ ವಿವರಣೆಗಾರ ಚೆಪ್ಪುಡಿರ ಕಾರ್ಯಪ್ಪ ಕರೆ ನೀಡಿದ್ದಾರೆ.ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ತಿಂಗಳ ಕಾಲ ನಡೆದ ಉಚಿತ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಾಕಿ ವಿಶ್ವಮಾನ್ಯ ಆಟವಾಗಿದೆ. ಇಂತಹ ಶಿಬಿರದಲ್ಲಿ ಹಾಕಿಯನ್ನು ಕೂಡ ಕಲಿಸಿಕೊಡುತ್ತಿರುವುದು ಶ್ಲಾಘನೀಯ. ಯಾವುದೇ ಕಾರಣಕ್ಕೂ ಈ ಶಿಬಿರ ನಿಲ್ಲಬಾರದು, ಮುಂದುವರಿಸಿಕೋಡು ಹೋಗಬೇಕೆಂದು ಹೇಳೀದರು.ಶಿಲ್ಪಿ ತನ್ನಲ್ಲಿರುವ ಕಲೆಯನ್ನು ತೋರಿಸಿಕೊಳ್ಳುವುದಿಲ್ಲ. ಅದಾಗಿಯೇ ಹೊರಬರುತ್ತದೆ. ಅದೇ ರೀತಿ ಮಕ್ಕಳ ಪ್ರತಿಭೆ ಬಗ್ಗೆ ಪೋಷಕರಿಗೆ ಗೊತ್ತಿರುತ್ತದೆ. ಅದನ್ನು ಹೊರತರಲು ಪ್ರೋತ್ಸಾಹ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಮೊಬೈಲ್ ದೊಡ್ಡ ಕಾಯಿಲೆಯಾಗಿದ್ದು, ಅಪಾಯಕಾರಿಯಾಗುತ್ತಿದೆ. ಮಕ್ಕಳು ಇದರಿಂದ ದೂರವಿಎಬೇಕು. ವಿದ್ಯಾವಂತರಾಗದಿದ್ದರೂ ಗುಣವಂತರಾಗಬೇಕು. ಅಪ್ಪ, ಅಮ್ಮಂದಿರನ್ನು ವೃದ್ಧಾಶ್ರಮಕ್ಕೆ ಹಾಕುವಂತಾಗಬಾರದು. ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕ್ರೀಡಾಕೂಟಗಳು ಆಡಂಬರಕ್ಕೆ ಸೀಮಿತವಾಗಬಾರದು, ದಾಖಲೆ ಮಾಡುವದು ಮುಖ್ಯವಲ್ಲ. ಕ್ರೀಡಾಶಾಲೆ, ಖಾಸಗಿ ಶಾಲೆಗಳ ಮಕ್ಕಳಿಗೆ ಅವಕಾಶ ಹೆಚ್ಚಿಗೆ ಸಿಗುತ್ತದೆ. ಆದರೆ ಸರ್ಕಾರಿ ಶಾಲೆ ಮಕ್ಕಳಿಗೆ ತರಬೇತಿ ನೀಡಿದರೆ ಅವರ ಭವಿಷ್ಯಕ್ಕೆ ಒಳಿತಾಗಲಿದೆ. ಅದು ಬಿಟ್ಟುಮಕ್ಕಳ ಕೈಯಲ್ಲಿ ಮದ್ಯ ಬಾಟಲಿ ಹಿಡಿಸುವದು ಸರಿಯಲ್ಲ, ಈ ಬಗ್ಗೆ ಹೇಳಿದರೆ ಜನಾಂಗ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ, ಮಕ್ಕಳಿಗೆ ನೀತಿ ನಿಯಮ ಕಲಿಸಬೇಕು ಎಂದು ಹೇಳಿದರು.
ವಾಂಡರ್ಸ್ ಕ್ಲಬ್ ಕಾರ್ಯದರ್ಶಿ ಪಾರ್ಥ ಚಂಗಪ್ಪ ಮಾತನಾಡಿ, ಈ ಶಿಬಿರದಲ್ಲಿ ಕಲಿತ ಮಕ್ಕಳು ಕೂಡ ಬಾರತ ತಂಡಕ್ಕೆ ಆಡುವಂತಾಗಲಿ ಎಂದು ಆಶಿಸಿದರು.ವಾಂಡರ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಮುದ್ದಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ಕ್ರೀಡಾಪಟು ಜಿ.ಟಿ.ರಾಘವೇಂದ್ರ, ಕೋಟೇರ ನಾಣಯ್ಯ, ತರಬೇತುದಾರ ಗಣೇಶ್, ಶಿಬಿರದ ಸಂಚಾಲಕ ಬಾಬು ಸೋಮಯ್ಯ ಇದ್ದರು. ಇದೇ ಸಂದರ್ಭದಲ್ಲಿ ತರಬೇತುದಾರರಾದ ಎಸ್.ಟಿ.ವೆಂಕಟೇಶ್, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಹರೇಂದ್ರ, ಯೋಗ ಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್ ಅವರನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು. ವಿದ್ಯಾರ್ಥಿನಿ ದಾರಿಕ, ಸ್ನೇಹ, ಅನಘ ಹಾಗೂ ತಂಡದವರು ಪ್ರಾರ್ಥಿಸಿದರು. ತರಬೇತುದಾರ ವೆಂಕಟೇಶ್ ನಿರೂಪಿಸಿದರು.