ಸಾರಾಂಶ
ಧೂಮಕೇತುಗಳನ್ನು ‘ಲೆಮೆನ್’, ‘ಸ್ವಾನ್’ ಹಾಗೂ ‘ಅಟ್ಲಸ್’ ಎಂದು ಹೆಸರಿಸಲಾಗಿದೆ. ಇವುಗಳಲ್ಲಿ ಲೆಮೆನ್ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ. ಈ ಧೂಮಕೇತು ಸುಮಾರು 1350 ವರ್ಷಗಳಿಗೊಮ್ಮೆ ಸೂರ್ಯನ ಸಮೀಪ ಬಂದು ಹಿಂತಿರುಗುತ್ತದೆ.
ಕನ್ನಡಪ್ರಭ ವಾರ್ತೆ ಉಡುಪಿ
ಈ ದೀಪಾವಳಿ ಹಬ್ಬಕ್ಕೆ ವಿಶೇಷವಾಗಿ ಬಾನಂಗಳವನ್ನೇ ಶೃಂಗರಿಸುವಂತೆ 3 ಧೂಮಕೇತುಗಳು ಕಾಣಿಸಿಕೊಂಡಿವೆ. ಈ ಧೂಮಕೇತುಗಳು ಈ ತಿಂಗಳ ಅಂತ್ಯದವರೆಗೂ ದೀರ್ಘವೃತ್ತದಲ್ಲಿ ಸೂರ್ಯನನ್ನು ಸುತ್ತು ಹೊಡೆಯಲಿವೆ.ಈ ಧೂಮಕೇತುಗಳನ್ನು ‘ಲೆಮೆನ್’, ‘ಸ್ವಾನ್’ ಹಾಗೂ ‘ಅಟ್ಲಸ್’ ಎಂದು ಹೆಸರಿಸಲಾಗಿದೆ. ಇವುಗಳಲ್ಲಿ ಲೆಮೆನ್ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ. ಈ ಧೂಮಕೇತು ಸುಮಾರು 1350 ವರ್ಷಗಳಿಗೊಮ್ಮೆ ಸೂರ್ಯನ ಸಮೀಪ ಬಂದು ಹಿಂತಿರುಗುತ್ತದೆ.ಲೆಮೆನ್ ಧೂಮಕೇತು ಅ.21ರಂದು ಭೂಮಿಗೆ ಅತೀ ಸಮೀಪ ಅಂದರೆ ಸುಮಾರು 90 ಮಿಲಿಯನ್ ಕಿ.ಮೀ.ನಷ್ಟು ಹತ್ತಿರಕ್ಕೆ ಬಂದು, ಸಂಜೆಯ ಕೆಲಸಮಯ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತಋಷಿ ಆಕಾಶಪುಂಜದ ಬಾಲದಲ್ಲಿರುವ ಮರೀಚಿ ನಕ್ಷತ್ರದ ಪಕ್ಕ ಹಾದು ಸ್ವಾತಿ ನಕ್ಷತ್ರದ ಸಮೀಪ ಕಾಣಿಸಲಿದೆ. ನ.8ರಂದು ಸೂರ್ಯನ ಕಕ್ಷೆಯಿಂದ ಹಿಂತಿರುಗುತ್ತದೆ.ಉಳಿದ ಎರಡು ಧೂಮಕೇತುಗಳಲ್ಲಿ ಅಟ್ಲಸ್ ಭಾರಿ ವಿಶೇಷ. ಅದು ಉಳಿದ ಲೆಮನ್ ಹಾಗೂ ಸ್ವಾನ್ ಧೂಮಕೇತುಗಳಂತೆ ನಮ್ಮ ಸೌರವ್ಯೂಹದ ಹೊರವಲಯದಲ್ಲಿರುವ ಊರ್ಸ್ ಕ್ಲೌಡ್‌ನಿಂದ ಬಂದುದಲ್ಲ. ಈ ಅಟ್ಲಸ್ ನಮ್ಮ ಸೌರವ್ಯೂಹದ ಹೊರಗಿನಿಂದ ಅನಂತ ಆಕಾಶದಿಂದ ಬಂದಿದೆ. ಅದರ ಅಧ್ಯಯನ ಹೊಸಹೊಸ ವಿಚಾರಗಳನ್ನು ಉಸುರಿದೆ. ಅದರಲ್ಲಿರುವ ಖನಿಜಗಳು ವಿಶ್ವ ಸೃಷ್ಟಿಯ ಅಧ್ಯಯನಕ್ಕೆ ಹೊಸ ಆಯಾಮವನ್ನು ಕೊಡುತ್ತಿದೆ.ಚಂದ್ರನನ್ನ ಬಿಟ್ಟರೆ ರಾತ್ರಿಯ ಆಕಾಶದಲ್ಲಿ ಧೂಮಕೇತುಗಳೇ ಚೆಂದ. ಅವು ಸೂರ್ಯನ ಸಮೀಪದಲ್ಲಿರುವಾಗ ಉದ್ದುದ್ದ ಬಾಲ ಬೆಳೆಸಿಕೊಂಡು ಖಗೋಳ ವೀಕ್ಷಕನ ಮನ ಸೂರೆಗೊಳ್ಳುತ್ತವೆ. ಈ ಬಾರಿ ಈ ಧೂಮಕೇತುಗಳ ಜೊತೆಗೆ ಪ್ರತೀವರ್ಷ ಈ ಸಮಯದಲ್ಲಿ ಸಂಭವಿಸುವ ಹ್ಯಾಲಿ ಧೂಮಕೇತುವಿನ ಧೂಳಿನ ಉಲ್ಕಾಪಾತ ಕೂಡ ಅಮಾವಾಸ್ಯೆಯ ಕತ್ತಲ ಆಕಾಶವನ್ನು ರಂಗೇರಿಸಲಿವೆ ಎಂದು ಡಾ. ಎ.ಪಿ. ಭಟ್ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))