ಸೂರಿಲ್ಲದೆ ಅಲೇಮಾರಿಗಳಂತೆ ಅಲೆದಾಟ:

| Published : Aug 29 2024, 12:47 AM IST

ಸಾರಾಂಶ

ನಿವೇಶನಕ್ಕೆ ಆಗ್ರಹಿಸಿ ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಸಿಪಿಐ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ನಗರದಲ್ಲಿರುವ ಸಾವಿರಾರು ನಿವೇಶನ ರಹಿತರಿಗೆ ನಿವೇಶನ ಹಂಚಿ ಶೀಘ್ರವಾಗಿ ಸೂರು ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ನಗರ ಘಟಕದಿಂದ ಆಜಾದ್‍ ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ವೇಳೆ ಮಾತನಾಡಿದ ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಅವರು, ಚಿಕ್ಕಮಗಳೂರು ನಗರ ಸೇರಿ ತಾಲೂಕಿನಾದ್ಯಂತ ಸಾವಿರಾರು ಬಡ ಕೂಲಿ ಕಾರ್ಮಿಕರಿಗೆ ಸ್ವಂತ ಸೂರಿಲ್ಲದೇ ಅಲೆಮಾರಿಗಳಂತೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.ಸಾವಿರಾರು ಕುಟುಂಬಗಳು ಸೂರಿಲ್ಲದೆ ವಂಚಿತರಾಗಿದ್ದಾರೆ. ನಿವೇಶನ ಮತ್ತು ವಸತಿ ರಹಿತರ ಸಮಸ್ಯೆ ವಿಪರೀತವಾಗಿದೆ. ಅಲ್ಲದೇ ನಾಗರೀಕ ಸೌಲಭ್ಯದ ಹಕ್ಕಿನಿಂದ ವಂಚಿತರಾಗಿದ್ದು, ಬದುಕು ದುಸ್ತರವಾಗಿದೆ. ಈ ಕುರಿತು ಹಲವು ಬಾರಿ ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಕುಟುಂಬಕ್ಕೆಒಂದು ಮನೆಯ ವ್ಯವಸ್ಥೆ ಕಲ್ಪಿಸುವುದಾಗಿ ಚುಣಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಆದರೆ ಇದೀಗ ಸರ್ಕಾರ ಒಂದೂವರೆ ವರ್ಷ ಕಲೇದರೂ ನಿವೇಶನ ರಹಿತರ ಸಮಸ್ಯೆಗಳನ್ನು ಇಂದಿಗೂ ಆಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಹಲವು ಬಡಾವಣೆಗಳಲ್ಲಿ ನಿವೇಶನ, ಸೂರುಗಳಿದ್ದು, ಆದರೆ ಅವುಗಳಿಗೆ ಹಕ್ಕುಪತ್ರ ವಿತರಿಸಿಲ್ಲ. ಫ್ಲಾಟ್ ಕೊಡುವುದಾಗಿ ಹೇಳಿ ಜನರಿಂದ ಹಣ ವಸೂಲಿ ಮಾಡಿ ಫ್ಲಾಟ್‍ಗಳನ್ನು ನೀಡುತ್ತಿಲ್ಲ. ನಗರದ ರಸ್ತೆ ಮತ್ತು ಅಡ್ಡ ರಸ್ತೆಗಳಿಗೆ ವಾರ್ಡ್‌ನಂಬರ್‌ ಹಾಗೂ ಫಲಕಗಳನ್ನು ಅಳವಡಿಸಿಲ್ಲ ಎಂದು ಹೇಳಿದರು.

ನಗರ ಕಾರ್ಯದರ್ಶಿ ತಂಪಿತಗೌಡ ಮಾತನಾಡಿ, ನಗರದ ಸುತ್ತಲಿರುವ ಜಾಗ ಖರೀದಿಸಲು ರಾಜೀವ್‍ಗಾಂಧಿ ವಸತಿ ನಿಗಮದಿಂದ ಮಾರ್ಕೆಟ್ ಬೆಲೆಗಿಂತ ಮೂರುಪಟ್ಟು ಹಣಕೊಟ್ಟು ಕೊಂಡುಕೊಳ್ಳುವ ಅವಕಾಶ ವಿರುವುದರಿಂದ ನಗರಕ್ಕೆ ಹತ್ತಿರವಿರುವ ಪ್ರದೇಶದಲ್ಲಿ ಜಾಗ ಖರೀದಿಸಿ ಮನೆಗಳನ್ನು ನಿರ್ಮಿಸಿ ಹಂಚಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರತಿಭಟನೆ ಬಳಿಕ ನಗರಸಭೆ ಕಚೇರಿಗೆ ಮನವಿ ಸಲ್ಲಿಸಿ ನಿವೇಶನಕ್ಕೆ ಒತ್ತಾಯಿಸಲಾಯಿತು.

ಈ ವೇಳೆ ಸಿಪಿಐ ರಾಜ್ಯ ಮಂಡಳಿ ಸದಸ್ಯ ರೇಣುಕಾರಾಧ್ಯ, ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದ್ರೇಶ್, ಸದಸ್ಯ ವಿಜಯ್‍ಕುಮಾರ್, ನಗರ ಸಹ ಕಾರ್ಯದರ್ಶಿಗಳಾದ ಜ್ಯೋತಿ, ಎಚ್.ಕೆ.ಸೋಮೇಗೌಡ, ಹಮೀದ ಬಾನು, ಖಜಾಂಚಿ ಸಿ.ವಸಂತ್‍ಕುಮಾರ್ ಹಾಜರಿದ್ದರು.