ಸಾರಾಂಶ
ಹುಬ್ಬಳ್ಳಿ: ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಬಳಗ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕನಕದಾಸ ಶಿಕ್ಷಣ ಸಮಿತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ "ಭಯಮುಕ್ತ ಪರೀಕ್ಷೆಗೆ ಸಿದ್ಧರಾಗಿ " ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಹೇಶ ದೇಸಾಯಿ ಮತ್ತು ಕಾವ್ಯಾ ಅವರಿಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ.
ಸರ್ " ಓದಿದ್ದನ್ನು ಹೇಗೆ ನೆನಪಿಟ್ಟುಕೊಳ್ಳಬೇಕು? " ನಮಗೆ ವಿಜ್ಞಾನ ಮತ್ತು ಗಣಿತ ವಿಷಯ ತುಂಬಾ ಕಠಿಣವಾಗುತ್ತವೆ. ಇವೆರಡು ವಿಷಯಗಳನ್ನು ನೆನಪಿನಲ್ಲಿ ಉಳಿಯುವ ಹಾಗೆ ಹೇಗೆ ಓದಿಕೊಳ್ಳುವುದು? ನಮಗೆ ಪರೀಕ್ಷೆ ಕೋಣೆಯಲ್ಲಿ ತುಂಬಾ ಭಯವಾಗುತ್ತದೆ, ಆ ಭಯವನ್ನು ಹೇಗೆ ನಿವಾರಿಸಿಕೊಳ್ಳಬೇಕು? ಸಮಯ ನಿರ್ವಹಣೆ ಹೇಗೆ? ಸೇರಿದಂತೆ ಅನೇಕ ಪ್ರಶ್ನೆಗಳು ಕೇಳಿಬಂದವು.ಸುಮಾರು 3 ಗಂಟೆಗಳ ಕಾಲ ಕಾರ್ಯಾಗಾರದಲ್ಲಿ ಮಾತನಾಡಿದ ಡಾ.ಮಹೇಶ ದೇಸಾಯಿ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳೆಲ್ಲರೂ ಅಷ್ಟೇ ಸಮಾಧಾನಚಿತ್ತದಿಂದ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.
ಉಣಕಲ್‌ನ ಧನಶ್ರೀ ಗುರಾನ್ ಪರೀಕ್ಷೆಯಲ್ಲಿ ಸಮಯ ಪಾಲನೆ ಹೇಗೆ ಮಾಡುವುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಪನ್ಮೂಲ ವ್ಯಕ್ತಿಗಳು, ಪ್ರಶ್ನೆಗಳಿಗೆ ಇರುವ ಅಂಕಗಳನ್ನು ನೋಡಿ ಉತ್ತರಿಸಿ, ಮುಖ್ಯವಾಗಿದ್ದಲ್ಲಿ ಅಂಡರ್‌ಲೈನ್ ಮಾಡಿ. ಗೊಂದಲವಿಲ್ಲದಂತೆ ಉತ್ತರಿಸಿ ಎಂದರು.ಬಿವಿಕೆವಿಸಿಬಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಒಳ್ಳೆಯದೋ? ಸ್ಮಾರ್ಟ್ ವರ್ಕ್ ಒಳ್ಳೆಯದೋ ಎಂದು ಕೇಳಿದ ಪ್ರಶ್ನೆಗೆ, ವಿಷಯಗಳನ್ನು ಅರ್ಥವಾಗುವ ಹಾಗೆ ಓದಿಕೊಳ್ಳಿ, ಅದರ ಸಾರಾಂಶ ಅರ್ಥ ಮಾಡಿಕೊಂಡು ಬರೆದಿಟ್ಟುಕೊಂಡರೆ ಪ್ರಶ್ನೆಗೆ ಉತ್ತರಿಸುವುದು ಸರಳವಾಗುತ್ತದೆ ಎಂದರು.
ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಧಾನದ ಕುರಿತು, ಒಂದೇ ಬಾರಿ ಅಧ್ಯಯನ ಬೇಡ. ಪದೇಪದೇ ಓದುವುದರಿಂದ ವಿಷಯ ನೆನಪಿನಲ್ಲುಳಿಯುತ್ತದೆ. ಹೀಗೆ ಮಾಡುವುದರಿಂದ ಓದಿದ ವಿಷಯ ಶಾರ್ಟ್ ಟೈಂ ಮೆಮೋರಿಯಿಂದ ಲಾಂಗ್ ಮೆಮೋರಿಗೆ ಹೋಗುತ್ತದೆ. ಇದರಿಂದ ವಿಷಯ ನೆನಪಿನಲ್ಲುಳಿಯುತ್ತದೆ.ರಿವಿಷನ್ ಮಾಡಿಕೊಳ್ಳಲು ಯಾವ ಸಮಯ ಸೂಕ್ತ ಎಂದು ಕೇಳಿದ ಪ್ರಶ್ನೆಗೆ ಕಠಿಣ ವಿಷಯಗಳನ್ನು ಬೆಳಗ್ಗೆ ಎದ್ದು ಓದಿ, ಸಂಜೆ ನಿಮಗೆ ಸರಳವೆನಿಸಿದ ವಿಷಯಗಳನ್ನು ಓದಿಕೊಳ್ಳಿ.
ಜೀವ್ಹೇಶ್ವರ ಶಾಲೆ ಮಕ್ಕಳು ಕೇಳಿದ ಪರೀಕ್ಷೆ ಕೋಣೆಯಲ್ಲಿ ತುಂಬಾ ಭಯವಾಗುತ್ತದೆ ಎಂದಾಗ ಕೇಂದ್ರಕ್ಕೆ 10ರಿಂದ 15 ನಿಮಿಷ ಮೊದಲೇ ಹೋಗಿ, ಕೊನೆ ಸಮಯದಲ್ಲಿ ರಿವಿಷನ್ ಬೇಡ. 10ರಿಂದ 15ನಿಮಿಷ ಪ್ರಶ್ನೆ ಪತ್ರಿಕೆ ಓದಿಕೊಳ್ಳಿ, ಬಳಿಕ ಅದರಲ್ಲಿ ನಿಮಗೆ ಉತ್ತರ ಗೊತ್ತಿರುವ ವಿಷಯ, ಸುಮಾರು ಗೊತ್ತಿರುವ ಪ್ರಶ್ನೆ ಮತ್ತು ಕಷ್ಟದ ಪ್ರಶ್ನೆಗಳನ್ನು ವಿಂಗಡಿಸಿಕೊಳ್ಳಿ. ಮೊದಲು ಗೊತ್ತಿರುವ ವಿಷಯಗಳಿಗೆ ಉತ್ತರಿಸಿ. ನಂತರ ಸುಮಾರು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ. ಕೊನೆಯದಾಗಿ ಕಠಿಣ ಪ್ರಶ್ನೆಗಳಿಗೆ ಉತ್ತರಿಸಿದರೆ. ನಿಮ್ಮ ಭಯ ದೂರವಾಗಿ ಗೊತ್ತಿರದೇ ಇರುವ ವಿಷಯಗಳೂ ಆಗ ನೆನಪಾಗಿ ಉತ್ತಮವಾಗಿ ಪರೀಕ್ಷೆ ಬರೆಯಬಹುದು. ಪರೀಕ್ಷೆ ವೇಳೆಯ ಕೊನೆಯ 15 ನಿಮಿಷ ಬರೆದಿರುವ ಉತ್ತರಗಳನ್ನು ಮತ್ತೊಮ್ಮೆ ಓದಿ, ಅಕ್ಷರ ದೋಷಗಳಿದ್ದರೆ ಸರಿಪಡಿಸಿ ಎಂದು ವಿದ್ಯಾರ್ಥಿಗಳಲ್ಲಿದ್ದ ಭಯ ನಿವಾರಿಸಿದರು.