ವಕ್ಫ್‌ ಅಧ್ವಾನ: ಸರ್ಕಾರ ಅಧಿಕಾರಿಗಳನ್ನು ವಜಾಗೊಳಿಸಲಿ

| Published : Nov 10 2024, 01:36 AM IST

ವಕ್ಫ್‌ ಅಧ್ವಾನ: ಸರ್ಕಾರ ಅಧಿಕಾರಿಗಳನ್ನು ವಜಾಗೊಳಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮಠ, ಮಂದಿರ ಜಮೀನು, ಖಾಲಿ ಜಾಗವನ್ನು ವಕ್ಫ್‌ಗೆ ವಶಪಡಿಸಿಕೊಳ್ಳಲು‌ ಅಧಿಕಾರಿಗಳಿಗೆ ಅಘೋಷಿತ ಆದೇಶವಾಗಿದೆ. ವಕ್ಫ್ ಹೆಸರಲ್ಲಿ ಗೋಮಾಳ ಜಾಗವನ್ನೂ ಬಿಟ್ಟಿಲ್ಲ.

ಹುಬ್ಬಳ್ಳಿ:

ಯಾವುದೇ ನೋಟಿಸ್‌ ನೀಡದೇ ರೈತರ ಜಮೀನು ವಶಪಡಿಸಿಕೊಂಡ ಅಧಿಕಾರಿಗಳನ್ನು ಸರ್ಕಾರ ಈ ಕೂಡಲೇ ಕೆಲಸದಿಂದ ವಜಾಗೊಳಿಸಲಿ. ಅದನ್ನೆಲ್ಲ ಬಿಟ್ಟು ಈ ಕುರಿತು ಮಾತನಾಡಿದ ನಮ್ಮ ಸಂಸದರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನಾರ್ಹ ಎಂದು ವಿಪ ಸದಸ್ಯ ಎನ್‌. ರವಿಕುಮಾರ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಾವೇರಿ ಜಿಲ್ಲೆಯ ರೈತನ ಜಮೀನನ್ನು ನೋಟಿಸ್ ಕೊಡದೆ ವಕ್ಫ್ ಎಂದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಶ್ನಿಸಿದ ನಮ್ಮ ಸಂಸದರ ಮೇಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾವೇರಿಯಲ್ಲಿ ಎಫ್‌ಐಆರ್ ಆಗಬೇಕಿರುವುದು ನೋಟಿಸ್ ಕೊಡದೆ ವಕ್ಫ್ ಆಗಿ‌ ಪರಿವರ್ತನೆ ಮಾಡಿದವರ ಮೇಲೆ. ಇವರಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.

ಮಠ, ಮಂದಿರ ಜಮೀನು, ಖಾಲಿ ಜಾಗವನ್ನು ವಕ್ಫ್‌ಗೆ ವಶಪಡಿಸಿಕೊಳ್ಳಲು‌ ಅಧಿಕಾರಿಗಳಿಗೆ ಅಘೋಷಿತ ಆದೇಶವಾಗಿದೆ. ವಕ್ಫ್ ಹೆಸರಲ್ಲಿ ಗೋಮಾಳ ಜಾಗವನ್ನೂ ಬಿಟ್ಟಿಲ್ಲ. ಸರ್ಕಾರ ಕೂಡಲೇ ರೈತರ ಜಮೀನು ವಶಪಡಿಸಿಕೊಳ್ಳಲು ಆದೇಶ ಮಾಡಿರುವ ಅಧಿಕಾರಿಗಳ ವಜಾ ಮಾಡಬೇಕು. ಅಲ್ಲದೆ ಇದಕ್ಕೆ ಕಾರಣವಾಗಿರುವ ಸಚಿವ ಜಮೀರ ಅಹಮದ್‌ ಖಾನ್‌ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.