ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ2024ರಲ್ಲಿ ಸಾಕಷ್ಟು ಸಿಹಿ-ಕಹಿ ಘಟನೆಗಳು ನಡೆದಿದ್ದು ಈ ಪೈಕಿ ಅತ್ಯಂತ ಹೆಚ್ಚು ಸುದ್ದಿಯಲ್ಲಿ ಇದ್ದಿದ್ದು, ಸಂಚಲನ ಮೂಡಿಸಿ ಗೊಂದಲಕ್ಕೆ ಕಾರಣವಾಗಿದ್ದು ವಕ್ಫ್ ಮಂಡಳಿ ಪ್ರಕರಣ.
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ವಿಜಯಪುರದಲ್ಲಿ ಈ ಪ್ರಕರಣ ಸುದ್ದಿ ಮಾಡಿದರೂ ಮರು ದಿನವೇ ಧಾರವಾಡಲ್ಲೂ ವಕ್ಫ್ ಮಂಡಳಿ ಹೆಸರು ಎಲ್ಲೆಡೆ ಗೊಂದಲ ಸೃಷ್ಟಿಸಿತು. ಸಮೀಪದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ರೈತರ ಹೊಲಗಳ ಆಸ್ತಿಯ ಉತಾರದಲ್ಲಿ 11ನೇ ಕಾಲಂನಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿದ್ದು ಗೊಂದಲಕ್ಕೆ ಕಾರಣವಾಯಿತು. ನಂತರ ಅರ್ಧ ಊರಿನ ಮನೆ ಆಸ್ತಿಯಲ್ಲೂ ವಕ್ಫ್ ಹೆಸರು ಸೇರ್ಪಡೆಯಾಯಿತು. ಕೆಲವೇ ದಿನಗಳಲ್ಲಿ ಅದು ಜಿಲ್ಲೆಯ ಬೇರೆ ಬೇರೆ ರೈತರ ಹೊಲಗಳ, ಮಠ-ಮಂದಿರ ಆಸ್ತಿಯಲ್ಲಿ ವಕ್ಫ್ ಮಂಡಳಿ ಹೆಸರು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಧಾರವಾಡ ಹಾಗೂ ಇತರೆಡೆ ರೈತರು, ರೈತ ಮುಖಂಡರು ಶ್ರೀರಾಮಸೇನೆ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದರು. ಇದು ರಾಜ್ಯಮಟ್ಟದಲ್ಲಿ ತೀವ್ರ ಸಂಚಲನ ಮೂಡಿದ ಕಾರಣ ಸರ್ಕಾರದ ನಿರ್ದೇಶನದಂತೆ ವಕ್ಫ್ ಮಂಡಳಿ ಹೆಸರನ್ನು ಹಂತ-ಹಂತವಾಗಿ ತೆಗೆಯಲಾಗುತ್ತಿದೆ.ಟೋಲ್ ಸಂಗ್ರಹ ಸ್ಥಗಿತ:
ಕಿಲ್ಲರ್ ಬೈಪಾಸ್ ಎಂದೇ ಕರೆಯುವ ಹು-ಧಾ ಮಧ್ಯೆದ ಬೈಪಾಸ್ ರಸ್ತೆಯಲ್ಲಿ ಕಳೆದ 25 ವರ್ಷಗಳಿಂದ ಸಂಗ್ರಹಿಸುತ್ತಿದ್ದ ಟೋಲ್ ಸಂಗ್ರಹಣೆಯನ್ನು ನಂದಿ ಹೈವೇ ಕಂಪನಿಯು ಸೆ. 7ರಿಂದ ಸ್ಥಗಿತಗೊಳಿಸಿತು. ಇನ್ನು, ಕೆಲಗೇರಿ ರಸ್ತೆಯ ಸಂಪಿಗೆ ನಗರ ಬಳಿ ರಸ್ತೆಯಲ್ಲಿ ಮಲಗಿದ್ದ ದನ ತಪ್ಪಿಸಲು ನಡೆದ ಆಟೋ-ಲಾರಿ ದುರ್ಘಟನೆಯಲ್ಲಿ ಮೂವರ ಸಾವು ದೊಡ್ಡ ಹೋರಾಟಕ್ಕೆ ಕಾರಣವಾಯಿತು. ಬಿಡಾಡಿ ದಿನಗಳ ತೆರವು, ಹೊಸ ಬಸ್ ನಿಲ್ದಾಣದಿಂದ ಕೆಲಗೇರಿ ಮೂಲಕ ಸಂಚರಿಸುವ ಬಸ್‌ಗಳನ್ನು ನರೇಂದ್ರ ಕ್ರಾಸ್ ಮೂಲಕ ಕಾರ್ಯಾಚರಣೆಗೆ ಹೋರಾಟ ಮಾಡಲಾಯಿತು. ಒತ್ತಡದ ಹಿನ್ನೆಲೆಯಲ್ಲಿ ಜ. 1ರಿಂದ ಬಸ್ ಕಾರ್ಯಾಚರಣೆ ಬದಲು ಮಾಡಲು ವಾಕರಸಾ ಸಂಸ್ಥೆ ಹಸಿರು ನಿಶಾನೆ ತೋರಿದೆ.ಪ್ರಜಾಪ್ರಭುತ್ವ ದಿನದ ನಿಮಿತ್ತ ಸೆ. 15ರಂದು ರಾಜ್ಯಾದ್ಯಂತ 2500 ಕಿಮೀ ಮಾನವ ಸರಪಳಿ ನಿಮಿತ್ತ ಧಾರವಾಡದಲ್ಲಿ 55 ಕಿಮೀ ಉದ್ದದ ಸರಪಳಿ ನಿರ್ಮಿಸಲಾಯಿತು. ರಾಜ್ಯದಲ್ಲಿಯೇ ಅತೀ ಹೆಚ್ಚು ಜನರು ನೋಂದಣಿಯಾದ ಹಿನ್ನಲೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವೂ ದೊರೆಯಿತು.
ಅಸ್ಥಿ ಪಂಜರ ಪತ್ತೆ:ಸೆಪ್ಟೆಂಬರ್ ತಿಂಗಳಲ್ಲಿ ಧಾರವಾಡದ ಮಾಳಮಡ್ಡಿಯ ಮನೆಯೊಂದರಲ್ಲಿ ಚಂದ್ರಶೇಖರ ಕೊಲ್ಲಾಪೂರ ಎಂಬಾತನ ಶವವು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಸಂಚಲನ ಮೂಡಿಸಿತ್ತು. ಆರಂಭದಲ್ಲಿ ಮೃತರು ಅನಾಥ ಎನ್ನಲಾಯಿತು. ಮರು ದಿನವೇ ಅವರ ತಾಯಿ ಹಾಗೂ ಸಂಬಂಧಿಕರು ಪ್ರತ್ಯಕ್ಷರಾದರು. ಆಸ್ತಿ ವಿಚಾರವಾಗಿ ಆವರ ಕೊಲೆಯಾಗಿದೆ ಎಂಬ ಆರೋಪ ಸಹ ಕೇಳಿ ಬಂದಿದ್ದು, ಪ್ರಕರಣದ ತನಿಖೆ ವಿದ್ಯಾಗಿರಿ ಪೊಲೀಸರು ಇನ್ನೂ ನಡೆಸುತ್ತಿದ್ದಾರೆ.
ಮುತ್ತಗಿ ಮಾಫಿ ಸಾಕ್ಷಿ:2016ರಲ್ಲಿ ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆಯ ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿ ನವೆಂಬರ್ ತಿಂಗಳಲ್ಲಿ ಮಾಫಿ ಸಾಕ್ಷಿಗೆ ಒಪ್ಪಿದ್ದು, ದೊಡ್ಡ ಬೆಳವಣಿಗೆ. ಇದರಿಂದ ಪ್ರಕರಣದ 9ನೇ ಆರೋಪಿ ಅಶ್ವತ್ ಎಂಬಾತನಿಂದ ಮುತ್ತಗಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮುತ್ತಗಿ ಮನೆಗೆ ಕೆಎಸ್‌ಆರ್‌ಫಿ ಬಂದೋಬಸ್ತ್ ಒದಗಿಸಲಾಗಿದೆ. ಇಷ್ಟಾಗಿಯೂ ಬೆದರಿಕೆ ಕರೆ ಬಂದ ಕಾರಣ ಮುತ್ತಗಿ ಅವರು ನ. 28ರಂದು ಉಪ ನಗರ ಪೊಲೀಸರಿಗೆ ದೂರು ದಾಖಲಿಸಿದರು.
ಪ್ರಶಸ್ತಿಗಳು:ನವೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರ ಘೋಷಿಸಿದ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಧಾರವಾಡ ಜಿಲ್ಲೆಯಿಂದ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಮಾಮಸಾಬ್ ವಲ್ಲೆಪ್ಪನವರ ಅವರಿಗೆ ಕೊಡಮಾಡಲಾಯಿತು. ಇದರೊಂದಿಗೆ ಕನ್ನಡಪ್ರಭ ಸುವರ್ಣ ಸುದ್ದಿ ವಾಹಿನಿಯ ಸುವರ್ಣ ಸಾಧಕಿ ಲೂಸಿ ಸಾಲ್ಡಾನಾ ಸೇರಿದಂತೆ ಏಳು ಜನರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಸಹ ಘೋಷಿಸಲಾಯಿತು.