ವಕ್ಫ್ ಅಕ್ರಮ ಕಾಂಗ್ರೆಸ್ ಪ್ರಾಯೋಜಿತ: ಬಿಜೆಪಿ ಆಕ್ರೋಶ

| Published : Nov 23 2024, 12:31 AM IST

ಸಾರಾಂಶ

ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶವನ್ನು ಹೊರಡಿಸಬೇಕು. ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರ ಭೂಮಿ, ಮಠ, ಮಾನ್ಯಗಳ ಹಾಗೂ ಜನಸಾಮಾನ್ಯರ ಆಸ್ತಿಗಳನ್ನು ಕಬಳಿಸುತ್ತಿರುವ ಕಾಂಗ್ರೆಸ್ ಪ್ರಾಯೋಜಿತ ವಕ್ಫ್ ಅಕ್ರಮ ವಿರೋಧಿಸಿ ಹಾಗೂ ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಧರಣಿ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಜಮೀನು, ಮಠ ಮಾನ್ಯ ಹಾಗೂ ದೇವಾಲಯಗಳಿಗೆ ಸೇರಿದ ಆಸ್ತಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದಿಸುವ ಮೂಲಕ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ. ವಕ್ಫ್ ಬೋರ್ಡ್ ಅಕ್ರಮಕ್ಕೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಆ ಪಕ್ಷದ ಹಿಂದೂ ಮತ್ತು ರೈತ ವಿರೋಧಿ ಧೋರಣೆಯನ್ನು ಪ್ರತಿಯೊಬ್ಬರೂ ವಿರೋಧಿಸಬೇಕು ಎಂದು ಒತ್ತಾಯಿಸಿದರು.

ವಕ್ಫ್ ಆಸ್ತಿಗೆ ಸಂಬಂಧಿಸಿದ 1974 ರ ಗೆಜೆಟ್ ಅಧಿಸೂಚನೆಯನ್ನು ಹಿಂಪಡೆಯಬೇಕು, ರೈತರ ಪಹಣಿಯಲ್ಲಿ ಆಸ್ತಿ ನಮೂದು ಮಾಡಿದ ವಕ್ಫ್ ಬೋರ್ಡ್‌ನ್ನು ರದ್ದುಪಡಿಸಬೇಕು, ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ತುರ್ತಾಗಿ ತೆಗೆಯಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಪಿಎಲ್ ಪಡಿತರ ಚೀಟಿ ಹಾಗೂ ಎಪಿಎಲ್ ಕಾರ್ಡ್ ರದ್ಧತಿಯಿಂದ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಪಡಿತರದಾರರಿಗೆ ಅಕ್ಕಿ ನೀಡುತ್ತಿದ್ದು, ಕಾರ್ಡ್ ರದ್ಧತಿಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಆಯುಷ್ಮಾನ್ ಯೋಜನೆ ಸಂಬಂಧಿತ ನೆರವು ಸಿಗದಿರುವ ಆತಂಕ ಜನರನ್ನು ಕಾಡುತ್ತಿದೆ ಎಂದು ದೂರಿದರು.

ಬಡವರಿಗೆ ಮೊದಲು ನೋಟಿಸ್ ಕೊಟ್ಟು ಅವರ ಪಡಿತರ ಚೀಟಿಯನ್ನು ಬಿಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸುವ ಕಾರ್ಯ ನಡೆಸಬೇಕಿತ್ತು. ಆದರೆ ಎಪಿಎಲ್ ಮಾಡಿರುವುದು ತೀವ್ರ ಖಂಡನೀಯ. ರೈತರು ಮತ್ತು ಬಡವರ ಜಮೀನನ್ನು ಏಕಾಏಕಿ ಪಹಣಿಯಲ್ಲಿ ವಕ್ಫ್ ಎಂದು ಬದಲಿಸಿದ ಮಾದರಿಯಲ್ಲಿ ಬಡಜನರ ಅನ್ನ ಕಸಿಯುವ ಕಾರ್ಯ ಕಾಂಗ್ರೆಸ್‌ನಿಂದ ನಡೆದಿದೆ. ಇಂತಹ ಜನವಿರೋಧಿ, ಬಡವರ ವಿರೋಧಿ ನೀತಿಯನ್ನು ಖಂಡಿಸಿದರು.

ಒತ್ತಾಯಗಳು :

ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶವನ್ನು ಹೊರಡಿಸಬೇಕು. ಇದಕ್ಕೆ ಸಂಬಂಧಿಸಿದ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು. ಕೇಂದ್ರ ಸರ್ಕಾರ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರ್ಕಾರ ಮುಂದಿನ

ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡನ್ನು ಎಪಿಎಲ್ ಕಾರ್ಡ್ ಎಂದು ಘೋಷಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಡಾ. ಸಿದ್ದರಾಮಯ್ಯ, ವಿದ್ಯಾ ನಾಗೇಂದ್ರ, ವಿವೇಕ್, ಎಚ್.ಆರ್.ಅರವಿಂದ್, ಸಿ.ಟಿ. ಮಂಜುನಾಥ, ನಾಗಾನಂದ್, ವಸಂತ್, ಹೊಸಹಳ್ಳಿ ಶಿವು, ಕೆಂಪುಬೋರಯ್ಯ, ಪ್ರಸನ್ನಕುಮಾರ್, ಜೋಗೀಗೌಡ, ಕೇಶವ, ಶ್ರೀಧರ್, ಎಚ್.ಕೆ. ಮಂಜುನಾಥ್, ಶಿವಣ್ಣ, ಬಾಲಕೃಷ್ಣ, ಯೋಗೇಶ್ ಇತರರಿದ್ದರು.