ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಧಾನಸಭೆ ಉಪಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ಬಿಜೆಪಿ ವಕ್ಫ್ ಆಸ್ತಿ ವಿಚಾರವನ್ನು ಪ್ರಮುಖ ಅಸ್ತ್ರವಾಗಿಸಿದೆ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆರೋಪಿಸಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಬಿಜೆಪಿ ಮುಸ್ಲಿಂ, ಕ್ರಿಶ್ಚಿಯನ್ ಹೆಸರೆತ್ತದೆ ಯಾವುದೇ ಚುನಾವಣೆಗೆ ಹೋಗಿಲ್ಲ. ಇದೀಗ ವಕ್ಫ್ ವಿಚಾರದಲ್ಲಿ ಸುಳ್ಳು ಆರೋಪಗಳನ್ನು ಮಾಡಿ ಕೋಮು ಭಾವನೆ ಮೂಡಿಸುತ್ತಿದೆ ಎಂದು ಟೀಕಿಸಿದರು.
ವಕ್ಫ್ ಆಸ್ತಿ ಅಲ್ಲಾಹನ ಹೆಸರಿನಲ್ಲಿ ಧಾರ್ಮಿಕ ಭಾವನೆಗಳ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ದಾನ ಮಾಡಿರುವ ಜಾಗವಾಗಿದೆ. ಇದು ಸರ್ಕಾರದ ಸೊತ್ತಲ್ಲ. ರಾಜ್ಯ ವ್ಯಾಪಿ 1.25 ಲಕ್ಷ ಎಕರೆ ವಕ್ಫ್ ಆಸ್ತಿ ಇದೆ. ಇದರಲ್ಲಿ 1.02 ಲಕ್ಷ ಎಕರೆ ಒತ್ತುವರಿಯಾಗಿದ್ದು, ಇದೀಗ 23 ಸಾವಿರ ಎಕರೆಯಷ್ಟೆ ಬಾಕಿ ಉಳಿದಿದೆ. ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡಿರುವ ಬಗ್ಗೆ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದರು.ವಕ್ಫ್ ಆಸ್ತಿ ಒತ್ತುವರಿ ಮಾಡಿ ಎಷ್ಟೇ ವರ್ಷಗಳಾಗಿದ್ದರೂ ಅದನ್ನು ತಮ್ಮದೆಂದು ಸಾಧಿಸಲು ಬರುವುದಿಲ್ಲ. ಈ ಬಗ್ಗೆ ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದೆ. ವಕ್ಫ್‌ಗೆ ಬಲವಂತದ ಜಾಗವಾಗಲಿ, ತನ್ನದಲ್ಲದ ಒಂದಿಂಚು ಜಾಗವೂ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಪ್ರಸ್ತುತ ವಕ್ಫ್ ಬಗ್ಗೆ ಟೀಕಿಸುವ ಬಿಜೆಪಿ 2014ರ ಚುನಾವಣಾ ಪ್ರಣಾಳಿಕೆಯಲ್ಲೇ, ಒತ್ತುವರಿಯಾಗಿರುವ ವಕ್ಫ್ ಆಸ್ತಿ ಬಿಡಿಸುವುದಾಗಿ ತಿಳಿಸಿದೆ. ಇಂದು ವಕ್ಫ್‌ನ್ನು ಟೀಕಿಸುತ್ತಿರುವ ಯತ್ನಾಳ್, ಸೂಲಿಬೆಲೆ ಅವರು ಇದನ್ನು ಓದಿಲ್ಲವೆ ಎಂದು ಅಬ್ದುಲ್ ಮಜೀದ್ ಪಶ್ನಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯವಾಗಿದೆ, ಹಿಂದೆಂದೂ ಇಂತಹ ಪುಕ್ಕಲು ಸರ್ಕಾರವನ್ನು ನೋಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಬಾರಿ ತಮ್ಮದೇ ಹೇಳಿಕೆಗಳಿಗೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದು, ಇವರು ಯೂ ಟರ್ನ್ ಸಿದ್ದರಾಮಯ್ಯ ಎಂದು ಟೀಕಿಸಿದರು.ಪ್ರಸ್ತುತ ಜಾಗದ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ಅದು ಸರಿಯಲ್ಲವೆಂದಾದರೆ ನ್ಯಾಯಾಲಯಕ್ಕೆ ತೆರಳಿ ನ್ಯಾಯವನ್ನು ಪಡೆಯಲು ಅವಕಾಶ ಇದ್ದೇ ಇದೆ ಎಂದು ಹೇಳಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಾಷಾ ಕುಶಾಲನಗರ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶರೀಫ್ ವಿರಾಜಪೇಟೆ ಹಾಗೂ ಜಿಲ್ಲಾ ಸಮಿತಿ ಸದಸ್ಯ ಅಮಿನ್ ಮೊಹಿಸಿನ್ ಸುದ್ದಿಗೋಷ್ಠಿಯಲ್ಲಿದ್ದರು.