ರಾಜ್ಯದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿರುವ ವಕ್ಫ್‌ ಆಸ್ತಿ ವಿವಾದ : ಪರಿಷತ್ತಲ್ಲಿ ಮೊದಲ ದಿನವೇ ಜಟಾಪಟಿ

| Published : Dec 10 2024, 12:33 AM IST / Updated: Dec 10 2024, 08:56 AM IST

ರಾಜ್ಯದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿರುವ ವಕ್ಫ್‌ ಆಸ್ತಿ ವಿವಾದ : ಪರಿಷತ್ತಲ್ಲಿ ಮೊದಲ ದಿನವೇ ಜಟಾಪಟಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿರುವ ವಕ್ಫ್‌ ಆಸ್ತಿ ವಿವಾದ ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷದವರ ನಡುವೆ ತೀವ್ರ ವಾಗ್ವಾದ, ರಾಜೀನಾಮೆ ಸವಾಲು-ಪ್ರತಿಸವಾಲಿಗೆ ಕಾರಣವಾಗಿ ಕಲಾಪವನ್ನೇ ಬಲಿ ಪಡೆಯಿತು.

 ಸುವರ್ಣ ವಿಧಾನ ಪರಿಷತ್ತು : ರಾಜ್ಯದಲ್ಲಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿರುವ ವಕ್ಫ್‌ ಆಸ್ತಿ ವಿವಾದ ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷದವರ ನಡುವೆ ತೀವ್ರ ವಾಗ್ವಾದ, ರಾಜೀನಾಮೆ ಸವಾಲು-ಪ್ರತಿಸವಾಲಿಗೆ ಕಾರಣವಾಗಿ ಅಂತಿಮವಾಗಿ ಪ್ರಶ್ನೋತ್ತರ ನಂತರದ ಅವಧಿಯ ಕಲಾಪವನ್ನೇ ಬಲಿ ಪಡೆಯಿತು.

ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ವಕ್ಫ್‌ ಕುರಿತು ನಿಲುವಳಿ ಮಂಡನೆಗೆ ಆಗ್ರಹಿಸಿದರು. ಇದಕ್ಕೆ ಸಭಾಪತಿ ಅವರು ನಿಲುವಳಿಯನ್ನು ನಿಯಮ 68ಕ್ಕೆ ಬದಲಾಯಿಸಿ ಮಧ್ಯಾಹ್ನದ ನಂತರ ಚರ್ಚೆಗೆ ಅವಕಾಶ ನೀಡಿದರು. ಆದರೆ, ಚರ್ಚೆಯು ಗದ್ದಲದ ಸ್ವರೂಪ ಪಡೆಯಿತು. ಉಭಯ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ಆರಂಭಗೊಂಡು ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಬಿಜೆಪಿಯ ಸಿ.ಟಿ. ರವಿ ಮತ್ತು ಕಾಂಗ್ರೆಸ್‌ನ ನಜೀರ್‌ ಅಹಮದ್‌ ನಡುವೆ ಪರಸ್ಪರ ರಾಜೀನಾಮೆ ಸವಾಲಿಗೂ ಸಾಕ್ಷಿಯಾಯಿತು. ಅಲ್ಲದೆ, ವಕ್ಫ್‌ ಆಸ್ತಿ ಕುರಿತು ರಾಜ್ಯದ ವಿವಿಧೆಡೆ ರೈತರು, ಮಠ ಮಾನ್ಯಗಳ ಆಸ್ತಿಗಳಿಗೆ ವಕ್ಫ್‌ ಮಂಡಳಿ ನೋಟಿಸ್‌ ನೀಡಿರುವುದನ್ನು ಬೊಟ್ಟು ಮಾಡಿದ ಬಿಜೆಪಿಗೆ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ಅವಧಿಯಲ್ಲೂ ನೀಡಿರುವ ನೋಟಿಸ್‌ ಪ್ರಸ್ತಾಪಿಸಿ ತಿರುಗೇಟು ನೀಡಿದರು.

ಕೊನೆಗೆ ಬಿಜೆಪಿ ಸದಸ್ಯರು ತಾಕತ್ತಿದ್ದರೆ ವಕ್ಫ್‌ ಬೋರ್ಡ್‌ ಅನ್ನೇ ರದ್ದು ಮಾಡುವಂತೆ ಆಗ್ರಹಿಸಿದ್ದು ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಎಷ್ಟೇ ಮನವಿ ಮಾಡಿದರೂ ಪ್ರಯೋಜನಕ್ಕೆ ಬಾರದಿದ್ದಕ್ಕೆ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಪ್ರಾಣೇಶ್‌ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ರೈತ  ಸಾಯುತ್ತಿದ್ದಾರೆ:

ಶೂನ್ಯ ವೇಳೆ ಬಳಿಕ ವಕ್ಫ್‌ ವಿವಾದ ವಿಷಯವನ್ನು ಪ್ರಸ್ತಾಪಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿದರು. ಇದಕ್ಕೆ ಒಪ್ಪದ ಸಭಾಪತಿ ಬಸವರಾಜ ಹೊರಟ್ಟಿ ಭೋಜನ ವಿರಾಮದ ಬಳಿಕ ಈ ವಿಷಯವನ್ನು ನಿಯಮ 68ರ ಸಾರ್ವಜನಿಕ ಜರೂರು ವಿಷಯದಡಿ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡಿದರು. ಈ ವೇಳೆ ನಾರಾಯಣಸ್ವಾಮಿ ಮಾತು ಮುಂದುವರಿಸಿ, ನೂರಾರು ವರ್ಷಗಳ ಇತಿಹಾಸ ಇರುವ ಮಠಮಾನ್ಯಗಳು, ಐದಾರು ತಲೆಮಾರುಗಳಿಂದ ಉಳುಮೆ ಮಾಡಿಕೊಂಡಿದ್ದ ರೈತರ ಜಮೀನುಗಳನ್ನು ರಾತ್ರೋರಾತ್ರಿ ವಕ್ಫ್‌ ಮಂಡಳಿಗೆ ದಾನ ಕೊಟ್ಟವರು ಯಾರು? ರೈತರು ಎದೆ ಹೊಡೆದುಕೊಂಡು ಸಾಯುವಂತಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ರಾಜೀನಾಮೆ ಸವಾಲು- ಕ್ರಿಯಾಲೋಪ:

ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ವಕ್ಫ್‌ ಆಸ್ತಿಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಅಧಿಕಾರ ನೀಡಿದವರು ಯಾರು? ಇದರಿಂದಲೇ ವಿವಾದ ಸೃಷ್ಟಿಯಾಗಿದ್ದು. ಅಲ್ಲದೆ, 2013ರಲ್ಲಿ ಯುಪಿಎ 2 ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್‌ ಮಂಡಳಿ ಯಾವುದೇ ಆಸ್ತಿಯನ್ನು ತನ್ನದೆಂದು ನೋಟಿಫೈ ಮಾಡುವ ಅಧಿಕಾರ ಕೊಟ್ಟಿದೆ. ವಕ್ಫ್‌ ಆಸ್ತಿ ವಿಚಾರದಲ್ಲಿ ವಕ್ಫ್‌ ನ್ಯಾಯಾಧಿಕರಣದ ನಿರ್ಧಾರವೇ ಅಂತಿಮ ಎಂದು ನ್ಯಾಯಾಲಯಗಳಲ್ಲೂ ಪ್ರಶ್ನಿಸಲಾಗದಂತಹ ಪರಮಾಧಿಕಾರವನ್ನು ನೀಡಲಾಗಿದೆ. ಇದರಿಂದ ನೂರಾರು ವರ್ಷಗಳಿಂದ ರೈತರು, ಮಠ ಮಾನ್ಯಗಳ ಹೆಸರಿನಲ್ಲಿದ್ದ ಜಮೀನುಗಳಿಗೆ ವಕ್ಫ್‌ ಬೋರ್ಡ್‌ ಆಸ್ತಿ ಎಂದು ನೋಟಿಸ್‌ ನೀಡುವ, ತಿದ್ದುಪಡಿ ಮಾಡುವ ಕೆಲಸ ಆಗಿದೆ ಎಂದು ದೂರಿದರು.

ಇದಕ್ಕೆ ಸಚಿವರಾದ ಪ್ರಿಯಾಂಕ್‌ ಖರ್ಗೆ, ಡಾ.ಎಂ.ಸಿ.ಸುಧಾಕರ್‌, ಕೆ.ಜೆ.ಜಾರ್ಜ್‌ ಆಕ್ಷೇಪ ವ್ಯಕ್ತಪಡಿಸಿ, ಸುಳ್ಳು ಹೇಳಿಕೆ ನೀಡಿ ಸದನವನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು. ಕಾಂಗ್ರೆಸ್‌ನ ಮತ್ತೊಬ್ಬ ಸದಸ್ಯ ನಜೀರ್‌ ಅಹಮದ್‌, ವಕ್ಫ್‌ ಬೋರ್ಡ್‌ಗೆ ಯಾವುದೇ ಭೂಮಿ ನೋಟಿಫೈ ಮಾಡುವ ಅಧಿಕಾರ ಇಲ್ಲ, ಆ ರೀತಿ ಯಾವುದೇ ಭೂಮಿ ವಶಪಡಿಸಿಕೊಂಡಿರುವುದನ್ನು ತೋರಿಸಿದರೆ ರಾಜೀನಾಮೆ ನೀಡುತ್ತೇನೆ. ನಿಮ್ಮ ಹೇಳಿಕೆ ಸಾಬೀತುಪಡಿಸದಿದ್ದರೆ ನೀವೂ ನೀಡುತ್ತೀರಾ ಎಂದು ಸಿ.ಟಿ.ರವಿ ಅವರನ್ನು ಪ್ರಶ್ನಿಸಿದರು.

ಈ ಮಧ್ಯೆ, ಸಿ.ಟಿ.ರವಿ ಆರೋಪಕ್ಕೆ ಕ್ರಿಯಾಲೋಪ ಎತ್ತಿದ ಆಡಳಿತ ಪಕ್ಷದ ನಾಗರಾಜ್‌ ಯಾದವ್‌, ವಕ್ಫ್‌ ಮಂಡಳಿಗೆ ಯಾವುದೇ ಪರಮಾಧಿಕಾರ ನೀಡಿಲ್ಲ ಎಂದು ಸರ್ಕಾರದ ಗೆಜೆಟ್‌ ನೋಟಿಫಿಕೇಷನ್‌ ಅನ್ನು ಸದನದಲ್ಲಿ ಪ್ರಸ್ತಾಪಿಸಿದರು. ಆದರೆ, ಸಭಾಪತಿ ಅವರು ಇದು ಕ್ರಿಯಾಲೋಪದ ಅಡಿ ಬರುವುದಿಲ್ಲ ಎಂದು ತಿರಸ್ಕರಿಸಿದರು.

ಬಳಿಕ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ಸರ್ಕಾರದ ಅವಧಿಯಲ್ಲೂ ವಕ್ಫ್‌ ಮಂಡಳಿಯಿಂದ ರೈತರಿಗೆ ನೋಟಿಸ್‌ ನೀಡಿರುವುದನ್ನು ಪ್ರಸ್ತಾಪಿಸಿದಾಗ ಕೆರಳಿದ ಬಿಜೆಪಿ ಸದಸ್ಯರು ತಾಕತ್ತಿದ್ದರೆ ವಕ್ಫ್‌ ಕಾಯ್ದೆಗೆ 2013ರಲ್ಲಿ ತಂದಿರುವ ತಿದ್ದುಪಡಿ ವಾಪಸ್‌ ಪಡೆದು ವಕ್ಫ್‌ ಬೋರ್ಡ್‌ ರದ್ದು ಮಾಡಿ ಎಂದರು. ಇದರಿಂದ ಸದನದಲ್ಲಿ ಉಭಯ ಸದಸ್ಯರ ನಡುವೆ ಗದ್ದಲ, ವಾಗ್ವಾದ ತೀವ್ರಗೊಂಡು ಸದನ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ಅವರು ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

 

ಯುಪಿಎ 2 ಸರ್ಕಾರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್‌ ಮಂಡಳಿ ಯಾವುದೇ ಆಸ್ತಿ ತನ್ನದೆಂದು ನೋಟಿಫೈ ಮಾಡುವ ಅಧಿಕಾರ ಕೊಟ್ಟಿದೆ. ವಕ್ಫ್‌ ಆಸ್ತಿ ವಿಚಾರದಲ್ಲಿ ವಕ್ಫ್‌ ನ್ಯಾಯಾಧಿಕರಣದ ನಿರ್ಧಾರವೇ ಅಂತಿಮ ಎಂದು ಕೋರ್ಟಲ್ಲೂ ಪ್ರಶ್ನಿಸಲಾಗ ಪರಮಾಧಿಕಾರ ನೀಡಲಾಗಿದೆ.

ಸಿ.ಟಿ.ರವಿ, ಬಿಜೆಪಿ ನಾಯಕ

==

ವಕ್ಫ್‌ ಬೋರ್ಡ್‌ಗೆ ಯಾವುದೇ ಭೂಮಿ ನೋಟಿಫೈ ಮಾಡುವ ಅಧಿಕಾರ ಇಲ್ಲ, ಆ ರೀತಿ ಯಾವುದೇ ಭೂಮಿ ವಶಪಡಿಸಿಕೊಂಡಿರುವುದನ್ನು ತೋರಿಸಿದರೆ ರಾಜೀನಾಮೆ ನೀಡುತ್ತೇನೆ. ನಿಮ್ಮ ಹೇಳಿಕೆ ಸಾಬೀತುಪಡಿಸದಿದ್ದರೆ ನೀವೂ ನೀಡುತ್ತೀರಾ?

ನಜೀರ್‌ ಅಹಮದ್‌, ಕಾಂಗ್ರೆಸ್ ಶಾಸಕ