ಪಿತ್ರಾರ್ಜಿತ ಆಸ್ತಿ ವಿವಾದ ಸಂಬಂಧ ಕಿರುತೆರೆ ನಟಿ ಕಾವ್ಯಗೌಡ ಪರಿವಾರದ ಕೌಟುಂಬಿಕ ಕಲಹ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಾಮಮೂರ್ತಿ ನಗರ ಠಾಣೆಯಲ್ಲಿ ವಾರಗಿತ್ತಿಯರ ವಿರುದ್ಧ ದೂರು-ಪ್ರತಿದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪಿತ್ರಾರ್ಜಿತ ಆಸ್ತಿ ವಿವಾದ ಸಂಬಂಧ ಕಿರುತೆರೆ ನಟಿ ಕಾವ್ಯಗೌಡ ಪರಿವಾರದ ಕೌಟುಂಬಿಕ ಕಲಹ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ರಾಮಮೂರ್ತಿ ನಗರ ಠಾಣೆಯಲ್ಲಿ ವಾರಗಿತ್ತಿಯರ ವಿರುದ್ಧ ದೂರು-ಪ್ರತಿದೂರು ದಾಖಲಾಗಿದೆ.ಕಲ್ಕೆರೆ ಸಮೀಪ ಎನ್‌ಆರ್‌ಐ ಲೇಔಟ್‌ನಲ್ಲಿರುವ ಗ್ರಾಪಂ ಮಾಜಿ ಅಧ್ಯಕ್ಷ ರೇವಣ್ಣ ಅವರ ಕೋಟ್ಯಂತರ ರು. ಮೌಲ್ಯದ ವೈಭವೋಪೇತ ಮನೆ ವಿಚಾರವಾಗಿ ಅವರ ಇಬ್ಬರು ಮಕ್ಕಳ ಮಧ್ಯೆ ಕದನ ಶುರುವಾಗಿದೆ. ಇದೇ ವಿಚಾರವಾಗಿ ರೇವಣ್ಣ ಅವರ ಸೊಸೆಯರಾದ ಕಾವ್ಯಗೌಡ ಮತ್ತು ಪ್ರೇಮಾ ಪರಸ್ಪರ ಬೈದಾದಿಕೊಂಡು ಕೈ-ಕೈ ಮಿಲಾಯಿಸಿದ್ದಾರೆ. ಕೊನೆಗೆ ಹಲ್ಲೆ ನಡೆಸಿದ್ದಾರೆ ಎಂದು ಒಬ್ಬರಿಗೊಬ್ಬರು ದೂಷಿಸಿಕೊಂಡು ಪೊಲೀಸರಿಗೆ ತಮ್ಮ ಪರಿವಾರದ ಜತೆ ಬಂದು ದೂರು ನೀಡಿದ್ದಾರೆ.ಈ ದೂರಿನ ಮೇರೆಗೆ ಕಾವ್ಯ ಹಾಗೂ ಆಕೆಯ ವಾರಗಿತ್ತಿ ಪ್ರೇಮಾ ಅವರನ್ನು ಮಂಗಳವಾರ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ. ಗಲಾಟೆ ಮಾಡಿಕೊಳ್ಳದೆ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ಬಗೆಹರಿಸಿಕೊಳ್ಳುವಂತೆ ಇಬ್ಬರಿಗೆ ಪೊಲೀಸರು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಗಲಾಟೆ?:ಕಲ್ಕೆರೆಯ ರೇವಣ್ಣ ಅವರು ಜಮೀನ್ದಾರ್ ಮನೆತನದವರಾಗಿದ್ದು, ಕಲ್ಕೆರೆ ಸುತ್ತಮುತ್ತ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕಲ್ಕೆರೆಯ ಎನ್‌ಆರ್‌ಐ ಲೇಔಟ್‌ನಲ್ಲಿ ಸುವಿಶಾಲವಾದ ಮೂರು ಅಂತಸ್ತಿನ ಮನೆಯನ್ನು ರೇವಣ್ಣ ಹೊಂದಿದ್ದು, ಇದೇ ಮನೆಯಲ್ಲೇ ಮೊದಲು ತಮ್ಮ ಇಬ್ಬರು ಮಕ್ಕಳ ಜತೆ ಅವರು ವಾಸವಾಗಿದ್ದರು. ಆದರೆ ಇತ್ತೀಚೆಗೆ ಮದುವೆ ನಂತರ ಆಸ್ತಿ ವಿಚಾರವಾಗಿ ರೇವಣ್ಣ ಮಕ್ಕಳಾದ ಸೋಮಶೇಖರ್ ಹಾಗೂ ನಂದೀಶ್ ಮಧ್ಯೆ ದಾಯಾದಿ ಕದನ ಶುರುವಾಗಿದೆ. ಈ ಗಲಾಟೆಯಿಂದ ಬೇಸತ್ತ ಅವರು, ಮೂರು ಅಂತಸ್ತಿನ ಮನೆಯಲ್ಲಿ ಮೊದಲ ಮಹಡಿಯಲ್ಲಿ ಕಿರಿಯ ಪುತ್ರ ನಂದೀಶ್ ಹಾಗೂ ಎರಡನೇ ಮಹಡಿಯನ್ನು ಹಿರಿಯ ಪುತ್ರ ಸೋಮಶೇಖರ್‌ಗೆ ಹಂಚಿಕೆ ಮಾಡಿದ್ದರು. ನೆಲಮಹಡಿಯಲ್ಲಿ ಮಕ್ಕಳಿಂದ ಪ್ರತ್ಯೇಕವಾಗಿ ತಮ್ಮ ಪತ್ನಿ ಜತೆ ರೇವಣ್ಣ ವಾಸವಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.ಕೆಲ ದಿನಗಳಿಂದ ಇದೇ ಮನೆ ವಿಚಾರವಾಗಿ ಮತ್ತೆ ಅವರ ಮಕ್ಕಳ ಮಧ್ಯೆ ಗಲಾಟೆ ಶುರುವಾಗಿದೆ. ಮನೆ ತಮಗೆ ಸೇರಬೇಕು ಎಂದು ಪರಸ್ಪರ ವಾರಗಿತ್ತಿಯರು ಸಮರಕ್ಕಿಳಿದರು. ಸಣ್ಣ-ಪುಟ್ಟ ಸಂಗತಿ ಮುಂದಿಟ್ಟುಕೊಂಡು ಎರಡೂ ಕುಟುಂಬಗಳು ಜಗಳ ಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ಸೋಮವಾರ ಮಧ್ಯಾಹ್ನ ಸಹ ಸೋಮಶೇಖರ್ ಪತ್ನಿ ಹಾಗೂ ಕಿರುತೆರೆ ನಟಿ ಕಾವ್ಯ ಹಾಗೂ ನಂದೀಶ್ ಪತ್ನಿ ಪ್ರೇಮಾ ಮಧ್ಯೆ ಗಲಾಟೆ ನಡೆದಿದೆ ಎಂದು ಹೇಳಿದ್ದಾರೆ.