ಕೆಡಿಪಿ ಸಭೆಯಲ್ಲಿ ಶಾಸಕರು - ಕಾಂಗ್ರೆಸ್ ಸದಸ್ಯರ ವಾಕ್‌ ಸಮರ

| Published : Nov 11 2025, 01:45 AM IST

ಸಾರಾಂಶ

ರೊಚ್ಚಿಗೆದ್ದ ಶಾಸಕ ಸುರೇಶ್, ಇಡಿ ರಾಜ್ಯ ಹಾಗೂ ತಾಲೂಕಿಗೆ ನಿಮ್ಮ ನಾಯಕರ ಸಾಧನೆ ಏನು ಎಂದು ಗೊತ್ತಿದೆ. ವರ್ಗಾವಣೆ ದಂಧೆಯಿಂದ ಹಿಡಿದು ಪ್ರತಿಯೊಂದಕ್ಕೂ ಲಂಚ ಪಡೆದು ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿರುವುದು ಯಾರು ಎಂದು ಗೊತ್ತು ಎಂದರು.

ಅನುದಾನ ಸಂಬಂಧ ಶಾಸಕ ಎಚ್.ಕೆ. ಸುರೇಶ್ - ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ-----------

೨೨೦ಕೆಬಿ ಸಬ್ ಸ್ಟೇಷನ್‌ಗೆ ತಾನೇ ಅನುದಾನ ತಂದಿದ್ದು ಎಂದು ಕಾಂಗ್ರೆಸ್ ನಾಯಕನಿಂದ ಸುಳ್ಳು ಮಾಹಿತಿ: ಶಾಸಕ ಸುರೇಶ್‌ ಆರೋಪ

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಆನಂದ್, ಚೇತನ್, ನಂದೀಶ್, ಜ್ಯೋತಿ , ನವೀನ್, ಪರಮೇಶ್, ಸುಹೀಲ್ ಪಾಷ ತೀವ್ರ ಆಕ್ಷೇಪ

-----------ಕನ್ನಡಪ್ರಭವಾರ್ತೆ, ಬೇಲೂರು

ಪಟ್ಟಣದ ತಾಲೂಕು ಪಂಚಾಯತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿದ್ಯುತ್ ವಿತರಣಾ ಕೇಂದ್ರ ಮಂಜೂರಾತಿಗೆ ಸಂಬಂಧಿಸಿದಂತೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ. ಸುರೇಶ್ ಹಾಗೂ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಸುರೇಶ್ ಅವರು, ಹನಿಕೆ, ಕೋಳಗುಂದ, ಬಿಕ್ಕೋಡು, ತಟ್ಟೇಹಳ್ಳಿ ಸೇರಿ ವಿವಿಧ ಭಾಗಗಳಿಗೆ ೨೨೦ ಕೆಬಿ ಸಬ್ ಸ್ಟೇಷನ್ ಗಳಿಲ್ಲದೆ ರೈತರಿಗೆ ಹಾಗೂ ವಿದ್ಯಾರ್ಥಿ ಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಬಳಿ ಅಲೆದು ಮನವರಿಕೆ ಮಾಡಿಕೊಡುತ್ತೇನೆ. ಸದನದಲ್ಲಿ ಹಾಗೂ ನೇರವಾಗಿ ಮಂತ್ರಿಗಳನ್ನು ಹಿಡಿದು ಅನುದಾನ ಹಾಕಿಸಿಕೊಂಡು ತಂದು ಹಲವು ಭಾಗಗಳಿಗೆ ಸಬ್ ಸ್ಟೇಷನ್ ಮಾಡುತ್ತಿದ್ದೇನೆ. ಆದರೆ ಇಲ್ಲಿ ಒಬ್ಬ ಕಾಂಗ್ರೆಸ್ ನಾಯಕ ತಾವೇ ಅನುದಾನ ತಂದಿದ್ದು ಎಂದು ಸುಳ್ಳು ಮಾಹಿತಿ ನೀಡಿ ರೈತರನ್ನು ಮತ್ತು ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅನುದಾನ ತಂದಿರುವರು ಯಾರು ಎಂದು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ಈ ಕೂಡಲೆ ಇದಕ್ಕೆ ಸಂಬಂಧಿಸಿದಂತೆ ಅನುಮೋದನೆ ಕೊಡಿಸಿರುವವರು ಯಾರು ಎಂದು ಕೆಇಬಿ ಅಧಿಕಾರಿಗಳು ಮತ್ತು ಇಂಜಿನಿಯರ್ ಸಭೆಯ ಗಮನಕ್ಕೆ ತರಬೇಕು. ಸುಮ್ಮನೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿರುವವರ ಬಗ್ಗೆ ಮಾಹಿತಿ ಕೊಡಿ ಎಂದು ಅಧಿಕಾರಿಗಳಿಗೆ ತಾಖೀತು ಮಾಡಿದರು.

ಈ ಸಂದರ್ಭ ಕೆಡಿಪಿ ಸದಸ್ಯರಾದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಆನಂದ್, ಸದಸ್ಯರಾದ ಚೇತನ್, ನಂದೀಶ್, ಜ್ಯೋತಿ , ನವೀನ್, ಪರಮೇಶ್, ಸುಹೀಲ್ ಪಾಷ ಶಾಸಕರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ನಮ್ಮ ನಾಯಕ ಬಿ.ಶಿವರಾಂ ೪೦ ವರ್ಷ ರಾಜಕೀಯದಲ್ಲಿ ಅನುಭವ ಹೊಂದಿದ್ದು ಅವರ ವಿರುದ್ಧ ಮಾತನಾಡುವುದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಅಧಿಕಾರಿಗಳನ್ನು ಹೆದರಿಸುವುದು ಮಾಮೂಲಾಗಿದೆ. ನಿಮ್ಮ ಹಿಂಬಾಲಕರಿಗೆ ಮಾತ್ರ ಗುತ್ತಿಗೆ ಕಾಮಗಾರಿ ಕೊಟ್ಟು ಕಳಪೆ ಕೆಲಸ ಮಾಡಿಸುತ್ತಿರುವುದು ತಾಲೂಕಿನ ಜನತೆಗೆ ತಿಳಿದಿದೆ. ಸರ್ಕಾರದಿಂದ ಕಾಮಗಾರಿಗಳಿಗೆ ಬಂದಂತಹ ಅನುದಾನಗಳಿಗೆ ನಿಮ್ಮ ಸಹಿಯ ಪತ್ರ ಪಡೆಯಲು ಒಬ್ಬ ಏಜೆಂಟರ ಮೂಲಕ ೫೦ ಸಾವಿರಗಳಿಗೆ ಯಾರು ಲಾಬಿ ಮಾಡುತ್ತಿದ್ದಾರೆ ಎಂದು ಗೊತ್ತು. ಗಾಂಧಿ ಕೊಂದ ಗೋಡ್ಸೆಯನ್ನು ದೇವರಂತೆ ಪೂಜಿಸುವ ನಿಮ್ಮ ಪಕ್ಷದವರಿಂದ ತಿಳಿವಳಿಕೆ ಕೇಳುವ ಅವಶ್ಯಕತೆ ನಮಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ರೊಚ್ಚಿಗೆದ್ದ ಶಾಸಕ ಸುರೇಶ್, ಇಡಿ ರಾಜ್ಯ ಹಾಗೂ ತಾಲೂಕಿಗೆ ನಿಮ್ಮ ನಾಯಕರ ಸಾಧನೆ ಏನು ಎಂದು ಗೊತ್ತಿದೆ. ವರ್ಗಾವಣೆ ದಂಧೆಯಿಂದ ಹಿಡಿದು ಪ್ರತಿಯೊಂದಕ್ಕೂ ಲಂಚ ಪಡೆದು ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿರುವುದು ಯಾರು ಎಂದು ಗೊತ್ತು. ನಾನು ಇಲ್ಲಿ ಭ್ರಷ್ಟಾಚಾರ ರಹಿತವಾಗಿ ಉತ್ತಮ ಸಾರ್ವಜನಿಕ ಕೆಲಸ ಮಾಡುವವರನ್ನು ಸ್ವಾಗತಿಸುತ್ತೇನೆ. ಇಲ್ಲಿ ಭ್ರಷ್ಟಾಚಾರಿಗಳಿಗೆ ಅವಕಾಶವಿಲ್ಲ. ಯಾವ ಕೆಲಸ ಹೇಗೆ ಮಾಡವೇಕೆಂದು ನಿಮ್ಮಿಂದ ತಿಳಿಯಬೇಕಿಲ್ಲ. ನಿಮ್ಮದೇ ಸರ್ಕಾರ ಇದ್ದರೂ ಮುಖ್ಯಮಂತ್ರಿ ಹಾಗೂ ಸಚಿವರ ಬಳಿ ಹೋಗದೆ ನೇರವಾಗಿ ಅಧಿಕಾರಿಗಳ ಬಳಿ ತೆರಳಿ ಕೆಲಸ ತರುತ್ತೇನೆ ಎಂದು ಹೇಳುವ ನಿಮ್ಮ ಪಕ್ಷದ ನಾಯಕರಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.

ಶಾಸಕರು ಮುಂದುವರಿದು ಮಾತನಾಡಿ ಯಾವ ಯಾವ ಕಾಮಾಗಾರಿಗಳಲ್ಲಿ ನೀವು ಎಷ್ಟೆಷ್ಟು ಲಂಚ ಪಡೆದಿದ್ದೀರಾ ಎಂದು ನನ್ನಲ್ಲಿ ದಾಖಲೆಗಳಿವೆ. ನಾನಾಗಲಿ ಅಥವಾ ಇಲ್ಲಿರುವ ಯಾರೇ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದನ್ನು ಸಾಕ್ಷಿ ಸಮೇತ ತಿಳಿಸಿದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ನೀವು ಇಲ್ಲಿ ಕೂಗಾಡಿದರೆ ಜಗ್ಗುವ ಮಗ ನಾನಲ್ಲ. ಈ ಕ್ಷೇತ್ರದ ಸೇವಕನಾಗಿ ಇಲ್ಲಿ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತಿರುವುದು ಇಡಿ ತಾಲೂಕಿಗೆ ತಿಳಿದಿದೆ. ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಸದಸ್ಯರ ವಿರುದ್ಧ ಗುಟುರು ಹಾಕಿದರು. ಸಬ್ ಸ್ಟೇಷನ್ ಅಗತ್ಯ ಇರುವ ಜಾಗಗಳಿಗೆ ಮಂಜೂರು ಮಾಡಿ ಕಾಮಗಾರಿ ಪ್ರಾರಂಭಿಸುವಂತೆ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು‌.

ತಹಸೀಲ್ದಾರ್ ಶ್ರೀಧರ್ ಕಂಕನವಾಡಿ , ತಾಪಂ ಇಒ ಸತೀಶ್ ಕುಮಾರ್, ಆಡಳಿತಾಧಿಕಾರಿ ರಮೇಶ್, ವೃತ್ತ ನಿರೀಕ್ಷಕ ರೇವಣ್ಣ ಹಾಜರಿದ್ದರು.