ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಹೋಟೆಲ್‌ಗಳಿಗೆ ಬಾಗಿಲು ಮುಚ್ಚುವ ಅನಿವಾರ್ಯತೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಧ್ಯಪ್ರಾಚ್ಯ ಯುದ್ಧದಿಂದಾಗಿ ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಹೋಟೆಲ್‌ಗಳಿಗೆ ಬಾಗಿಲು ಮುಚ್ಚುವ ಅನಿವಾರ್ಯತೆ ಎದುರಾಗಿದೆ. ಹಾವೇರಿ, ತುಮಕೂರು, ವಿಜಯಪುರಗಳಲ್ಲಿ ಆಟೋಗ್ಯಾಸ್‌ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದ್ದು, ಆಟೋ ಚಾಲಕರು ಪರದಾಡುವಂತಾಗಿದೆ. ಗ್ಯಾಸ್‌ ಕೊರತೆಯ ಬಿಸಿ ಪಿಜಿ, ಹಾಸ್ಟೆಲ್‌, ಮದುವೆ ಮಂಟಪ, ಆಸ್ಪತ್ರೆ, ದೇವಸ್ಥಾನಗಳಿಗೂ ತಟ್ಟಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಆತಂಕ ಉಂಟಾಗಿದೆ. ಸದ್ಯಕ್ಕೆ ಗೃಹ ಬಳಕೆಯ ಸಿಲಿಂಡರ್‌ಗಳ ಕೊರತೆ ಉಂಟಾಗಿಲ್ಲವಾದರೂ, ಗ್ಯಾಸ್‌ ಏಜೆನ್ಸಿಗಳ ಮುಂದೆ ಗ್ರಾಹಕರ ಕ್ಯೂ ಕಂಡು ಬರುತ್ತಿದೆ.==

ಶೇ.35ರಷ್ಟು ಸಣ್ಣಪುಟ್ಟ

ಹೋಟೆಲ್‌ಗಳು ಬಂದ್‌

ಯುದ್ಧದ ನೆಪವೊಡ್ಡಿ ಹೋಟೆಲ್‌ಗಳಿಗೆ ಮಂಗಳವಾರದಿಂದ ಸಿಲಿಂಡರ್‌ ಪೂರೈಕೆ ಸ್ಥಗಿತಗೊಳಿಸಿದ್ದು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿ ಹಲವು ಜಿಲ್ಲೆಗಳಲ್ಲಿ ಬುಧವಾರ ಶೇ.35ರಷ್ಟು ಕ್ಯಾಂಟೀನ್‌, ಸಣ್ಣಪುಟ್ಟ ಹೋಟೆಲ್‌ಗಳು ಬಂದ್‌ ಆಗಿವೆ. ಮಂಗಳೂರಲ್ಲಿ ಏಜೆನ್ಸಿಗಳು ಗ್ಯಾಸ್ ಸಿಲಿಂಡರ್‌ ಸ್ಟಾಕ್ ಇಲ್ಲದೆ ಗೋದಾಮು ಬಂದ್‌ ಮಾಡಿವೆ. ಕೇಟರಿಂಗ್, ಅಡುಗೆ ಮಾಡುವವರು, ಅಡುಗೆ ಕೆಲಸಗಾರರು, ಪಾತ್ರೆ ತೊಳೆಯುವವರು, ಶಾಮಿಯಾನದವರು... ಹೀಗೆ ಎಲ್ಲರಿಗೂ ಗ್ಯಾಸ್‌ ಸಿಲಿಂಡರ್‌ ಪ್ರಾಬ್ಲಮ್‌ನಿಂದಾಗಿ ಸಂಕಷ್ಟ ಶುರುವಾಗಿದೆ. ದಾವಣಗೆರೆಯಲ್ಲಿ ಫುಟ್‌ಪಾತ್ ತಿಂಡಿಗಾಡಿ, ಬೆಣ್ಣೆದೋಸೆ ಉದ್ಯಮಕ್ಕೂ ಸಮಸ್ಯೆ ಉಂಟಾಗಿದೆ. ಮೈಸೂರಿನಲ್ಲಿ 2 ಮತ್ತು 5 ಕೆಜಿ ಸಿಲಿಂಡರ್ ಖರೀದಿಗೆ ಗ್ರಾಹಕರು ಸಾಲಾಗಿ ನಿಂತಿದ್ದು ಕಂಡು ಬಂತು. ಬಳ್ಳಾರಿಯಲ್ಲಿ ಕಮರ್ಷಿಯಲ್ ಸಿಲಿಂಡರ್ ಸರಬರಾಜು ಸಂಪೂರ್ಣ ಬಂದ್‌ ಆಗಿದೆ.

=

ಮದುವೆ, ಸಮಾರಂಭಗಳಿಗೂ

ಸಿಲಿಂಡರ್‌ ಸಿಗದೆ ಸಂಕಷ್ಟ

ಮದುವೆ, ಇನ್ನಿತರ ಸಮಾರಂಭಗಳಿಗೂ ಗ್ಯಾಸ್ ಸಿಲಿಂಡರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಡುಗೆ ಮಾಡುವವರು ಕೆಲಸಕ್ಕೆ ಸಿದ್ಧರಿದ್ದರೂ, ಗ್ಯಾಸ್‌ ಸಿಲಿಂಡರ್ ಇಲ್ಲದಾಗಿರುವುದು ಆತಂಕ ಹೆಚ್ಚಿಸಿದೆ. ಕಲ್ಯಾಣ ಮಂಟಪದಲ್ಲೂ ಸೌದೆ ಒಲೆಗೆ ಮುಂದಾಗುವ ಸ್ಥಿತಿ ಎದುರಾಗಿದೆ.

==ಕುಕ್ಕೆ ದೇಗುಲಕ್ಕೂ ತಟ್ಟಿದ ಬಿಸಿ:

ಭಕ್ತರಿಗೆ ಅವಲಕ್ಕಿ, ಮೊಸಲು ವಿತರಣೆ

ದೇಶದಲ್ಲಿ ಉಂಟಾಗಿರುವ ಗ್ಯಾಸ್ ವ್ಯತ್ಯಯ ಬಿಸಿ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಟ್ಟಿದ್ದು, ಗ್ಯಾಸ್ ಪೊರೈಕೆ ವ್ಯತ್ಯಯದಿಂದ ಬುಧವಾರದಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿ ದಿನ ಬೆಳಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು, ಇದೀಗ ಬೇಯಿಸುವ ತಿನಿಸು ಬದಲಾಗಿ, ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ಮುಂದಿನ ಮೂರು ದಿನಕ್ಕೆ ಬೇಕಾಗುವಷ್ಟು ಗ್ಯಾಸ್ ಲಭ್ಯವಿದ್ದು, ಬಳಿಕ ಪೂರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದೆ. ಕಟೀಲು ಕ್ಷೇತ್ರದಲ್ಲಿ ಕಟ್ಟಿಗೆಯಿಂದ

ಅನ್ನಪ್ರಸಾದ ತಯಾರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಕ್ಷೇತ್ರ ಕಟೀಲು ಕ್ಷೇತ್ರದಲ್ಲಿ ಅನ್ನ ಪ್ರಸಾದ, ಪೂಜೆಯ ಪ್ರಸಾದ ತಯಾರಿಗೆ ಕಟ್ಟಿಗೆಯ ಮೊರೆ ಹೋಗಲಾಗಿದೆ. ದೇವಳದ ಆಡಳಿತಕ್ಕೊಳಪಟ್ಟ ಕಿಂಡರ್‌ ಗಾರ್ಡನ್‌ನಿಂದ ಹಿಡಿದು, ಪ್ರಾಥಮಿಕ, ಫ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕ್ಕೋತ್ತರ ಶಿಕ್ಷಣ ಸಂಸ್ಥೆಗಳಿದ್ದು ಸುಮಾರು 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇವಳದಲ್ಲಿ ಅನ್ನ ಪ್ರಸಾದ ಸ್ವೀಕರಿಸುತ್ತಾರೆ. ಪ್ರತಿದಿನ ಸುಮಾರು 10, 000 ಮಂದಿ ಅನ್ನ ಪ್ರಸಾದ ಬಡಿಸಲಾಗುತ್ತದೆ.

=

ಉಡುಪಿ ಕೃಷ್ಣಮಠದಲ್ಲಿ

ಬಯೋ ಘಟಕ ಸ್ಥಾಪನೆಉಡುಪಿ ಕೃಷ್ಣಮಠದಲ್ಲಿ ಸಾಕಷ್ಟು ಕಟ್ಟಿಗೆ ಸಂಗ್ರಹ ಇರುವುದರಿಂದ ಸದ್ಯಕ್ಕೆ ಸಮಸ್ಯೆಯಾಗಿಲ್ಲ. ಜೊತೆಗೆ, ಗ್ಯಾಸ್‌ ಸಮಸ್ಯೆಯಿಂದ ಪಾರಾಗಲು ಶಾಶ್ವತ ಬಯೋಗ್ಯಾಸ್ ಘಟಕ ಸ್ಥಾಪನೆಗೆ ಮುಂದಾಗಿದ್ದು, ವಾರದೊಳಗೆ ಈ ಘಟಕ ಸಿದ್ಧವಾಗುತ್ತದೆ.

== ರಾಜ್ಯದ ಕಾಫಿಗೂ

ಯುದ್ಧದ ಬಿಸಿ

ರಫ್ತು ನಿಂತಿದ್ದರಿಂದ ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರು ಸಂಕಷ್ಟಕ್ಕೆ‌ ಸಿಲುತ್ತಿದ್ದು, ಬೆಳೆದ ಕಾಫಿ ಗೋದಾಮಿನಲ್ಲಿ ಕೊಳೆಯುವಂತಾಗಿದೆ. ಕೆಲವು ವ್ಯಾಪಾರಿಗಳ ಕಾಫಿ ಸರಕು ಸಮುದ್ರದ ಮಧ್ಯೆ ಸಿಲುಕಿಕೊಂಡಿದೆ. ಇಲ್ಲಿನ ಉತ್ತಮ ಗಣಮಟ್ಟದ ಕಾಫಿಗೆ ಅತಿ ಹೆಚ್ಚು ಯುರೋಪ್ ಹಾಗೂ ಅರಬ್ ದೇಶಗಳಲ್ಲಿ ಬೇಡಿಕೆ ಇದೆ. ಮಂಗಳೂರು ಹಾಗೂ ಕೊಚ್ಚಿನ್ ಬಂದರಿನ ಮೂಲಕ ಪ್ರತಿವರ್ಷ 2.50 ಲಕ್ಷ ಟನ್ ಕಾಫಿ ವಿಶ್ವದ 130ಕ್ಕೂ ಅಧಿಕ ದೇಶಗಳಿಗೆ ರಫ್ತಾಗುತ್ತಿದ್ದು, ವಾರ್ಷಿಕ ಸುಮಾರು ಒಂದು ಸಾವಿರ ಕೋಟಿ ರು. ವಹಿವಾಟು ನಡೆಯುತ್ತಿದೆ.

=-5 ದಿನದಿಂದ ಕೊಪ್ಪಳಕ್ಕೆ

ಒಂದೇ ಒಂದು ವಾಣಿಜ್ಯ

ಸಿಲಿಂಡರ್‌ ಸಪ್ಲೈ ಆಗಿಲ್ಲ!

ಕಳೆದ ಐದು ದಿನಗಳಿಂದ ಕೊಪ್ಪಳ ಜಿಲ್ಲೆಗೆ ಒಂದೇ ಒಂದು ವಾಣಿಜ್ಯ ಬಳಕೆ ಸಿಲಿಂಡರ್ ಬಂದಿಲ್ಲ. ಹೀಗಾಗಿ, ಇಲ್ಲಿನ ಹೋಟೆಲ್‌ನವರು ಎಲೆಕ್ಟ್ರಿಕಲ್ ಒಲೆ ಬಳಕೆ ಶುರು ಮಾಡಿದ್ದಾರೆ. ಹೋಟೆಲ್‌ನಲ್ಲಿ ದೋಸೆ ಹಾಕುವುದನ್ನು ಕಡಿಮೆ ಮಾಡಿ, ಇತರ ಸಾಮಾನ್ಯ ತಿಂಡಿ ಮಾತ್ರ ಮಾಡುತ್ತಿದ್ದಾರೆ. ಚಿಕ್ಕಮಗಳೂರು ನಗರದ ಪ್ರಮುಖ ಹೋಟೆಲ್‌ ಮಾಲೀಕರು ಸೌದೆ ಒಲೆ ಖರೀದಿಗೆ ಮುಂದಾಗಿದ್ದಾರೆ.

==

ಗ್ಯಾಸ್‌ ಸಿಲಿಂಡರ್‌ ಬುಕ್ಕಿಂಗ್

ಐವಿಆರ್‌ ಸಂಖ್ಯೆ ಸ್ವಿಚ್ಡ್‌ ಆಫ್‌!ಬಾಗಲಕೋಟೆ, ಕೊಪ್ಪಳ ಜಿಲ್ಲೆಯಾದ್ಯಂತ ಗ್ಯಾಸ್ ಬುಕ್ ಮಾಡಲು ಸಾರ್ವಜನಿಕರು ಹೆಣಗಾಡುತ್ತಿದ್ದಾರೆ. ಬುಕ್ಕಿಂಗ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿದೆ. ಬುಕ್ಕಿಂಗ್ ಮಾಡುವವರ ಸಂಖ್ಯೆ ದುಪ್ಪಟ್ಟು ಆಗಿದ್ದರಿಂದ ಸರ್ವರ್ ಹ್ಯಾಂಗ್ ಆಗುತ್ತಿದೆ.

==

ಆಟೋ ಗ್ಯಾಸ್ ಅಭಾ:

ಆಟೋ ಚಾಲಕರಿಗೆ ಸಂಕಷ್ಟ:ಹಾವೇರಿಯಲ್ಲಿ ಆಟೋ ಗ್ಯಾಸ್ ಅಭಾವ ತೀವ್ರಗೊಳ್ಳುತ್ತಿದ್ದು, ಆಟೋ ಚಾಲಕರು ಪರದಾಡುವಂತಾಗಿದೆ. 15 ದಿನಗಳ ಹಿಂದೆ ಒಂದು ಕೆಜಿ ಗ್ಯಾಸ್ ಬೆಲೆ ₹50 ಇತ್ತು. ಈಗ ಕೆಜಿಗೆ ಗ್ಯಾಸ್‌ಗೆ ₹70 ಆಗಿದೆ. ಇದರಿಂದಾಗಿ ಆಟೋ ಚಾಲಕರ ಬದುಕು ದುಸ್ತರವಾಗುತ್ತಿದೆ. ವಿಜಯಪುರದಲ್ಲಿ ಗ್ಯಾಸ್‌ ಹಾಕಿಸಿಕೊಳ್ಳಲು 2 ಕಿ.ಮಿ. ಕ್ಯೂನಲ್ಲಿ ನಿಂತಿದ್ದು ಕಂಡು ಬಂತು. ತುಮಕೂರಲ್ಲೂ ಆಟೋ ಗ್ಯಾಸ್‌ಗೆ ಸಮಸ್ಯೆ ಎದುರಾಗಿದೆ.

=

ಧಾರವಾಡದ ಇಂದಿರಾ

ಕ್ಯಾಂಟಿನಲ್ಲಿ ಬರೀ ಮೊಸರನ್ನ

ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಕೊರತೆ ಬಿಸಿ ಇಂದಿರಾ ಕ್ಯಾಂಟೀನ್‌ಗೂ ತಟ್ಟಿದೆ. ಧಾರವಾಡದಲ್ಲಿ ಇಂದಿರಾ ಕ್ಯಾಂಟಿನ್ ನಲ್ಲಿ ರೊಟ್ಟಿ, ಚಪಾತಿ, ರೈಸ್, ಸಾಂಬಾರ್ ಬದಲಿಗೆ ಮೊಸರನ್ನ ನೀಡಲಾಗುತ್ತಿದೆ.

=

ಕೊಡಗು ಜಿಲ್ಲಾಸ್ಪತ್ರೆಗೂ

ತಟ್ಟಿದ ಯುದ್ಧದ ಎಫೆಕ್ಟ್

ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಇನ್ನೊಂದು ದಿನದ ಅಡಿಗೆಗಷ್ಟೇ ಗ್ಯಾಸ್ ಬಾಕಿ ಇದ್ದು, ಅದು ಮುಗಿದರೆ ಒಳರೋಗಿಗಳ ಊಟಕ್ಕೆ ಸಮಸ್ಯೆ ಎದುರಾಗಲಿದೆ. ನಿತ್ಯ 350 ರಿಂದ 400 ಒಳರೋಗಿಗಳಿಗೆ ಊಟ ಸಿದ್ಧಗೊಳಿಸಬೇಕು. ಅಷ್ಟು ಜನರಿಗೆ ಅಡುಗೆ ಮಾಡುವುದಕ್ಕೆ ನಿತ್ಯ ಎರಡು ಸಿಲಿಂಡರ್ ಬೇಕು. ಸದ್ಯ ಮೂರು ಸಿಲಿಂಡರ್ ಅಷ್ಟೇ ಸ್ಟಾಕ್ ಇದೆ.ಬೆಂಗ್ಳೂರು ಪಿಜಿಗಳಲ್ಲಿ ದಿನಕ್ಕೆ 2ಬಾರಿ, ವಾರಕ್ಕೆ 5 ದಿನವಷ್ಟೇ ಊಟ:

ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ವ್ಯತ್ಯಯ ಹಿನ್ನೆಲೆಯಲ್ಲಿ ಬೆಂಗಳೂರಿನ ಬಹುತೇಕ ಪಿ.ಜಿ.ಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ವಾರಕ್ಕೆ ಐದು ದಿನ ಮಾತ್ರ ಆಹಾರ ಪೂರೈಸಲು ಪಿ.ಜಿ.ಮಾಲೀಕರ ಸಂಘ ನಿರ್ಧರಿಸಿದೆ. ಅಲ್ಲದೆ, ಸಮರ್ಪಕ ಗ್ಯಾಸ್ ಪೂರೈಕೆಯಾಗುವವರೆಗೆ ಹೆಚ್ಚು ಗ್ಯಾಸ್ ಬಳ‍ಕೆಯಾಗುವ ದೋಸೆ, ಪೂರಿ, ಚಪಾತಿ, ಮಾಂಸಹಾರ ಮತ್ತಿತರ ಆಹಾರ ಪದಾರ್ಥಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ಜತೆಗೆ, ದಿನಕ್ಕೆ 2 ಬಾರಿ ಮಾತ್ರ ಪೂರೈಸಲು ನಿರ್ಧರಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿ.ಜಿ. ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಎಲ್ಲರಂತೆ ಪಿ.ಜಿ.ಗಳಿಗೂ ಸಮಸ್ಯೆ ಆಗಿದೆ. ಹೀಗಾಗಿ, ನೀಡುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.