ವಾರಾಹಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ನ್ಯಾಯಾಂಗದ ಮೊರೆ

| Published : Jul 13 2024, 01:32 AM IST

ವಾರಾಹಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ನ್ಯಾಯಾಂಗದ ಮೊರೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿಗೆ ಬೆಳಕು ನೀಡುವ ಸಲುವಾಗಿ ಸರ್ಕಾರವೇ ನಿಗದಿ ಪಡಿಸಿ ಕೊಟ್ಟಿರುವ ಕನಿಷ್ಠ ಮಟ್ಟದ ಪರಿಹಾರ ಪಡೆದು ಬೆಲೆ ಬಾಳುವ ನಮ್ಮ ಜಮೀನನ್ನು ಬಿಟ್ಟು ಕೊಟ್ಟಿದ್ದೇವೆ

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಅಧಿಕಾರಿಗಳು, ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಕಾರಣ ಕಳೆದ ನಾಲ್ಕು ದಶಕಗಳಿಂದಲೂ ನೆನೆಗುದಿಗೆ ಬಿದ್ದಿರುವ ವಾರಾಹಿ ಸಂತ್ರಸ್ತರ ಸಮಸ್ಯೆ ಇನ್ನೂ ಜೀವಂತವಾಗಿದೆ. ಸರ್ಕಾರಗಳು ನಮ್ಮ ಕನಿಷ್ಠ ಮಟ್ಟದ ಬೇಡಿಕೆ ಕೂಡಾ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳದಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಉಳಿದಿರೋದು ನ್ಯಾಯಾಂಗದ ಮೊರೆಯೊಂದೇ ಎಂದು ಕೆಪಿಸಿ ಹೈಪರ್ ಕಮಿಟಿ ಅಧ್ಯಕ್ಷ ಯಡೂರು ಭಾಸ್ಕರ ಜೋಯ್ಸ್ ಹೇಳಿದರು.

ನಾಡಿಗೆ ಬೆಳಕು ನೀಡುವ ಸಲುವಾಗಿ ಸರ್ಕಾರವೇ ನಿಗದಿ ಪಡಿಸಿ ಕೊಟ್ಟಿರುವ ಕನಿಷ್ಠ ಮಟ್ಟದ ಪರಿಹಾರ ಪಡೆದು ಬೆಲೆ ಬಾಳುವ ನಮ್ಮ ಜಮೀನನ್ನು ಬಿಟ್ಟು ಕೊಟ್ಟಿದ್ದೇವೆ. ನಾಡಿಗಾಗಿ ತ್ಯಾಗ ಮಾಡಿರುವ ನಮ್ಮ ಸಂಕಷ್ಟ ಯಾರಲ್ಲಿ ಹೇಳಿಕೊಳ್ಳಬೇಕೆಂಬುದೇ ತಿಳಿಯುತ್ತಿಲ್ಲಾ. ಇನ್ನಾದರೂ ಸರ್ಕಾರ ಕಣ್ಣು ತೆರೆದು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

80ರ ದಶಕದಲ್ಲಿ ಆರಂಭವಾದ ವರಾಹಿ ಯೋಜನೆ ಪೂರ್ಣಗೊಂಡ ನಂತರದಲ್ಲಿ ಯಡೂರು ಮತ್ತು ಸುಳುಗೋಡು ಗ್ರಾಪಂ ವ್ಯಾಪ್ತಿ ಕೊರ್ನಕೋಟೆ ಕೊಪ್ಪರಗುಂಡಿ ಸೇರಿ ಕೆಲವೊಂದು ಹಳ್ಳಿಗಳು ದ್ವೀಪದಂತಾಗಿದ್ದು ಅಲ್ಲಿನ ಜನರು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದ್ದು ರಸ್ತೆ ಸಂಪರ್ಕ ಸೇರಿ ಮೂಲಭೂತ ಸೌಲಭ್ಯಗಳಿಂದಲೇ ವಂಚಿತರಾಗಿ ಬದುಕು ಸಾಗಿಸುವಂತಾಗಿದೆ. ಈ ಯೋಜನೆ ಆರಂಭದಿಂದಲೂ ಕೆಲವೊಂದು ಬೇಡಿಕೆಗಳನ್ನು ಅಂದಿನಿಂದ ಇಂದಿನವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳ ಮುಂದೆ ಮನವಿ ಮಂಡಿಸಿದ್ದರೂ ಯಾವ ಸರ್ಕಾರವೂ ನಮ್ಮ ನೆರವಿಗೆ ಬಂದಿಲ್ಲಾ ಎಂದೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವರಾಹಿ ಹಿನ್ನೀರಿನಿಂದ ಮುಳುಗಿರುವ ಪ್ರದೇಶದಲ್ಲಿ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲದ ಕಾರಣ ಹೊಸನಗರ ತಾಲೂಕು ವ್ಯಾಪ್ತಿಗೆ ಬರುವ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಸಮೀಪದ ಕೊರ್ನಕೋಟೆಯಿಂದ ತಾಲೂಕು ಕೇಂದ್ರಕ್ಕೆ ಹೋಗಲು ನೂರು ಕಿಮೀನಷ್ಟು ಬಳಸಿಕೊಂಡು ಹೋಗುವ ಅನಿವಾರ್ಯತೆಯಿದೆ. ಈ ಬಗ್ಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದವರಿಗೆ ಪೂರ್ಣ ಅರಿವಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲಾ ಎಂದು ಹೇಳಿದರು.

ಪ್ರಮುಖ ಬೇಡಿಕೆಗಳು:ಮುಳುಗಡೆ ಪ್ರದೇಶ ವ್ಯಾಪ್ತಿಯಲ್ಲಿದ್ದು ಈ ವರೆಗೂ ನೀರೇ ಬಾರದ ಸುಮಾರು 200 ಎಕರೆಗೂ ಮಿಕ್ಕಿ ಇರುವ ಭೂಮಿಯನ್ನು ಪರಿಹಾರದ ಹಣವನ್ನು ಹಿಂಪಡೆದು ಸಂಬಂಧಿಸಿದ ರೈತರಿಗೆ ಹಿಂತಿರುಗಿಸಬೇಕು. ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿರುವ ಮೇಗರವಳ್ಳಿ ಸಮೀಪದ ಕೊರ್ನಕೋಟೆ ಕೊಪ್ಪರಗುಂಡಿ-ಯಡೂರು ನಡುವೆ ವರಾಹಿ ಹಿನ್ನೀರ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಆಗಬೇಕು.

ಸಾರ್ವಜನಿಕರು ಮತ್ತು ಶಾಲಾ ವಿಧ್ಯಾರ್ಥಿಗಳ ಅನುಕೂಲದ ಸಲುವಾಗಿ ವಾಹನ ಸೌಕರ್ಯದ ಕೊರತೆ ಇರುವ ತೀರ್ಥಹಳ್ಳಿ-ನಗರ ಮಾರ್ಗದಲ್ಲಿ ಗ್ರಾಮಾಂತರ ಸಾರಿಗೆ ಆರಂಭಿಸಬೇಕು. ತೀರ್ಥಹಳ್ಳಿ ಮಾರ್ಗವಾಗಿ ಕರಾವಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಈಗಾಗಲೇ ಸರ್ವೇ ಕಾರ್ಯ ಕೂಡಾ ನಡೆದಿರುವ ಕುಂದಾಪುರ-ಬ್ರಹ್ಮಾವರ ಮಾರ್ಗದಲ್ಲಿ ನಿರ್ಮಿಸಬೇಕು. ಭಾರಿ ವಾಹನಗಳ ಸಂಚಾರಕ್ಕೆ ಹುಲಿಕಲ್ ಘಾಟಿ ಕೂಡಾ ಸುರಕ್ಷಿತವಾಗಿದೆ ಎಂದೂ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವರಾಹಿ ಮುಳುಗಡೆ ಹೋರಾಟ ಸಮಿತಿಯ ಎಚ್.ಆರ್.ಮೂರ್ತಿಗೌಡ ಹಾಗೂ ಮುಳುಗಡೆ ಸಂತ್ರಸ್ಥರಾದ ಹಾಲಿಗೆ ನಾಗರಾಜ್ ಇದ್ದರು.