ಫಲಿತಾಂಶ ಕಡಿಮೆ ಆದ್ರೆ ವಾರ್ಡನ್‌ಗಳೇ ಹೊಣೆ

| Published : Jul 18 2024, 01:32 AM IST

ಸಾರಾಂಶ

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ನಿಲಯಗಳ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಫಲತಾಂಶ ಕಡಿಮೆಯಾದಲ್ಲಿ ವಾರ್ಡನ್ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ನಿಲಯಗಳ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಫಲತಾಂಶ ಕಡಿಮೆಯಾದಲ್ಲಿ ವಾರ್ಡನ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಪಂ ನೂತನ ಸಭಾಭವನದಲ್ಲಿ ಬುಧವಾರ ಜರುಗಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ವಸತಿ ನಿಲಯಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಫಲಿತಾಂಶ ಮಾತ್ರ ಕಡಿಮೆಯಾಗುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ವಸತಿ ನಿಲಯದ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಗಳು ಅನುತ್ತೀರ್ಣ ಹೊಂದಬಾರದು ಎಂದು ತಿಳಿಸಿದರು.

ಶೇ.100ರಷ್ಟು ಫಲಿತಾಂಶ ಏಕಾಗುತ್ತಿಲ್ಲ:

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆ ಹಾಗೂ ನಿಲಯಗಳ ವಿದ್ಯಾರ್ಥಿಗಳ ಕಳೆದ 2023ರ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಶೇ.85.38 ಹಾಗೂ ಪಿಯುಸಿ ಶೇ.88.35ರಷ್ಟು ಅದೇ ರೀತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆ ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.84.71ರಷ್ಟು ಹಾಗೂ ಪಿಯುಸಿ ಫಲಿತಾಂಶ ಶೇ.92.87 ರಷ್ಟು ಆಗಿದೆ. ನೂರಕ್ಕೆ ನೂರರಷ್ಟು ಫಲಿತಾಂಶ ಏಕೆ ಆಗುತ್ತಿಲ್ಲವೆಂದು ಪ್ರಶ್ನಿಸಿದರು. ಫಲಿತಾಂಶ ಸುಧಾರಣೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ವಸತಿ ಶಾಲೆ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರು, ನಿಲಯಗಳ ವಾರ್ಡನ್‌ಗಳು ಕ್ರಮವಹಿಸಲು ಸೂಚಿಸಿದರು.

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಿ:

ವಸತಿ ನಿಲಯಗಳ ವಾರ್ಡನ್‌ಗಳ ಪಾತ್ರ ಮುಖ್ಯವಾಗಿದ್ದು, ನಿಲಯದ ವಿದ್ಯಾರ್ಥಿಗಳು ಬೆಳಗಿನ 2 ಗಂಟೆ ಹಾಗೂ ಸಂಜೆ 3 ಗಂಟೆಗಳ ಕಾಲ ಓದುವ ಹವ್ಯಾಸ ಬೆಳೆಸಬೇಕು. ವಿದ್ಯಾರ್ಥಿಗಳ ಗುಣಮಟ್ಟ ಪರಿಶೀಲನೆಗೆ ಶಾಲೆ-ಕಾಲೇಜುಗಳ ಭೇಟಿ ನೀಡಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಸಹ ಕಾಲಕಾಲಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡಬೇಕು. ಇದರ ಜೊತೆಗೆ ನಿಲಯಗಳಿಗೆ ನೇಮಿಸಲಾದ ನೋಡಲ್ ಅಧಿಕಾರಿಗಳು ಸಹ ತಮಗೆ ನೀಡಿದ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಲು ತಿಳಿಸಿದರು. ಪ್ರತಿಯೊಂದು ವಸತಿ ನಿಲಯಗಳಲ್ಲಿ ಗ್ರಂಥಾಲಯ ಇರುವಂತೆ ಕ್ರಮವಹಿಸಲು ಸೂಚಿಸಿದರು.ಕಾರ್ಮಿಕ ಅಧಿಕಾರಿ ರಮೇಶ ಸಾಂಬಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರೆ, ಪಿಎಫ್, ಇಎಸ್ಐಗೆ ಸಂಬಂಧಿಸಿದ ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವಿವರವಾಗಿ ತಿಳಿಸಿಕೊಟ್ಟರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತುಂಬರಮಟ್ಟಿ ಸೇರಿದಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ತಾಲೂಕು ಅಧಿಕಾರಿಗಳು ಹಾಗೂ ವಸತಿ ನಿಲಯಗಳ ಮೇಲ್ವಿಚಾರಕರು, ಹೊರಗುತ್ತಿಗೆ ನೌಕರರ ಏಜೆನ್ಸಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

--

ಬಾಕ್ಸ್

ಪಿಎಫ್‌, ಇಎಸ್‌ಐ ಪಾವತಿಸದಿದ್ದರೆ ಕ್ರಮ

ಸಮಾಜ ಕಲ್ಯಾಣ ವ್ಯಾಪ್ತಿಯಲ್ಲಿ ಒಟ್ಟು 74 ವಸತಿ ನಿಲಯಗಳು ಬರುತ್ತಿದ್ದು, ವಿದ್ಯಾರ್ಥಿಗಳ ದಾಖಲಾತಿ ನವೀಕರಣ ಪೂರ್ಣಗೊಳ್ಳಬೇಕು. ಅಲ್ಲದೇ ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳ ಪಾವತಿ ಆಗದಿರುವುದು ಕಂಡುಬಂದಿದೆ. ಅನುದಾನ ಬರುವುದು ತಡವಾದರೆ ಏಜೆನ್ಸಿಯವರೇ ಮುಂಗಡವಾಗಿ ಪಾವತಿ ಮಾಡಬೇಕು. ನೌಕರರ ಪಿಎಫ್‌ ಮತ್ತು ಇಎಸ್ಐ ಕಡ್ಡಾಯವಾಗಿ ಕಡಿತಗೊಳಿಸಿ ಪಾವತಿಸಬೇಕು. ಇಲ್ಲವಾದಲ್ಲಿ ಅಂತಹ ಏಜೆನ್ಸಿಗಳನ್ನು ಬ್ಲಾಕ್ ಲಿಸ್ಟ್‌ನಲ್ಲಿ ಇಡುವುದಾಗಿ ಜಿಪಂ ಸಿಇಒ ಎಚ್ಚರಿಕೆ ನೀಡಿದರು.

---

ವಾರ್ಡನ್‌ಗಳಿಗೆ ಸನ್ಮಾನ

ಉತ್ತಮವಾಗಿ ಕಾರ್ಯನಿರ್ವಹಿಸಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ತಲಾ 5ರಂತೆ ವಿವಿಧ ವಸತಿ ನಿಲಯಗಳ 10 ಜನ ವಾರ್ಡನ್‌ಳನ್ನು ಜಿಪಂ ಸಿಇಒ ಶಶಿಧರ ಕುರೇರ ಸನ್ಮಾನಿಸಿದರು.