ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆತ್ಮೀಯವಾಗಿ ಸ್ಪಂದಿಸಿ, ಅಗತ್ಯ ವೈದ್ಯಕೀಯ ಸೇವೆ ದೊರಕುವಂತೆ ಮಾರ್ಗದರ್ಶನ ನೀಡುವ ಮೂಲಕ ಜನಮೆಚ್ಚುಗೆ ಗಳಿಸಿದ್ದ ಆರೋಗ್ಯ ಇಲಾಖೆಯ ಅಧೀಕ್ಷಕ ಚಂದ್ರೇಗೌಡ ಅವರು ವಯೋನಿವೃತ್ತರಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಸ್ನೇಹಿತರು ಹಾಗೂ ವಿವಿಧ ಸಂಘಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆತ್ಮೀಯವಾಗಿ ಸ್ಪಂದಿಸಿ, ಅಗತ್ಯ ವೈದ್ಯಕೀಯ ಸೇವೆ ದೊರಕುವಂತೆ ಮಾರ್ಗದರ್ಶನ ನೀಡುವ ಮೂಲಕ ಜನಮೆಚ್ಚುಗೆ ಗಳಿಸಿದ್ದ ಆರೋಗ್ಯ ಇಲಾಖೆಯ ಅಧೀಕ್ಷಕ ಚಂದ್ರೇಗೌಡ ಅವರು ವಯೋನಿವೃತ್ತರಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಸ್ನೇಹಿತರು ಹಾಗೂ ವಿವಿಧ ಸಂಘಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆ ಸೇರಿದಂತೆ ತಾಲೂಕಿನ ಹಾರನಹಳ್ಳಿ, ಬಾಣಾವರ ಹಾಗೂ ನೆರೆಯ ಕಡೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಂದ್ರೇಗೌಡ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಕರ್ತವ್ಯದ ವ್ಯಾಪ್ತಿಯನ್ನು ಮೀರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಮಸ್ಯೆಗಳನ್ನು ಆಲಿಸಿ, ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ದೊರಕುವಂತೆ ನೆರವಾಗುತ್ತಿದ್ದರು. ಈ ಕಾರಣದಿಂದಲೇ ಅವರು ರೋಗಿಗಳು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯನ್ನೂ ಸಮಾನ ಮನೋಭಾವದಿಂದ ಕಾಣುತ್ತಿದ್ದ ಅವರು, ಅಗತ್ಯವಿದ್ದ ಸಂದರ್ಭದಲ್ಲಿ ಹೆಚ್ಚಿನ ವೈದ್ಯಕೀಯ ಸೌಲಭ್ಯ ಹೊಂದಿರುವ ಜಿಲ್ಲಾ ಆಸ್ಪತ್ರೆ ಹಾಗೂ ಇತರೆ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡುತ್ತಿದ್ದರು. ಅವರ ಈ ಸೇವಾ ಮನೋಭಾವದಿಂದ ಅನೇಕ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಲು ನೆರವಾಗಿದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಸ್ಮರಿಸಿದರು.ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ, ಮಾನವೀಯತೆ ಹಾಗೂ ಕರ್ತವ್ಯನಿಷ್ಠೆಗೆ ಆದ್ಯತೆ ನೀಡಿದ ಚಂದ್ರೇಗೌಡರ ನಿವೃತ್ತಿ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ನಿವೃತ್ತಿ ಜೀವನ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರೇಗೌಡ, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಭಗವಂತನ ಸೇವೆ ಮಾಡಿದಂತಾಗಿದೆ. ಸರ್ಕಾರಿ ಆಸ್ಪತ್ರೆಗಳು ಬಡವರು ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯಕ್ಕೆ ಪ್ರಮುಖ ಆಧಾರವಾಗಿದ್ದು, ಇಂತಹ ಸೇವಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದ ತಮ್ಮ ತಂದೆತಾಯಿ, ಕುಟುಂಬದ ಸದಸ್ಯರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು, ವೈದ್ಯರು ಮತ್ತು ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿ. ನವೀನ್ ಕುಮಾರ್, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಿರಣ್ ಕುಮಾರ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ನೇಹಿತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.