ಸಾರಾಂಶ
ರಾಮನಗರ: ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ಬಗೆಯ ಸೌಲಭ್ಯಗಳನ್ನೂ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೂ ನೀಡಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಎಚ್ಚರಿಕೆ ನೀಡಿದರು.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಹಳೆ ಪಿಂಚಣಿ ಯೋಜನೆ ಜಾರಿಯಲ್ಲಿದ್ದಾಗ ಸರ್ಕಾರಿ ನೌಕರರಿಗೆ ದೊರಕುತ್ತಿದ್ದ ಎಲ್ಲಾ ಸೌಲಭ್ಯಗಳೂ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ಲಭ್ಯವಾಗುತ್ತಿದ್ದವು. ಆದರೆ, ನೂತನ ಪಿಂಚಣಿ ಯೋಜನೆ ಜಾರಿಗೊಂಡ ನಂತರ ಅನುದಾನಿತ ನೌಕರರಿಗೆ ಪಿಂಚಣಿ ಯೋಜನೆ ಕಡಿತಗೊಳಿಸುವ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದೀಗ ಅನುದಾನಿತ ನೌಕರರಿಗೆ ಹಳೆ ಪಿಂಚಣಿ ಯೋಜನೆಯೂ ಇಲ್ಲ. ಹೊಸ ಪಿಂಚಣಿ ಯೋಜನೆಯೂ ಇಲ್ಲದಂತಾಗಿದೆ. ಸರ್ಕಾರಿ ಹಾಗೂ ಅನದಾನಿತ ನೌಕರರು ಸಮಾನ ಕೆಲಸ ಮಾಡುತ್ತಿದ್ದರೂ ಎರಡೂ ಬಗೆಯ ಪಿಂಚಣಿ ಯೋಜನೆಯಿಂದ ಅನುದಾನಿತ ನೌಕರರನ್ನು ಹೊರಗುಳಿಸಿ ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಕೊಡದೆ ವಂಚಿಸುತ್ತಿರುವುದು ಆಧುನಿಕ ಶೋಷಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
25-30 ವರ್ಷ ಸೇವೆ ಮಾಡಿದ ನೌಕರರಿಗೆ ನಿವೃತ್ತಿ ನಂತರ ಬಿಡಿಗಾಸನ್ನೂ ಕೊಡದೆ ಬರಿಗೈಯಲ್ಲಿ ಹೊರ ದೂಡಿದರೆ ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಅಂತಿಮ ದಿನಗಳಲ್ಲಿ ವಯೋಸಹಜ ಕಾಯಿಲೆಗಳ ಚಿಕಿತ್ಸೆಗೂ ಅನ್ಯರ ಮೇಲೆ ಅವಲಂಬಿತರಾಗುವಂತಾಗಿದೆ. ಜತೆಗೆ ಕುಟುಂಬದ ಸದಸ್ಯರೂ ಕೂಡ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುತ್ತಿದ್ದಾರೆ. ಜೀವನ ನಿರ್ವಹಣೆಗೆ ಹಣವಿಲ್ಲದೆ ಹತಾಶೆಗೊಳಗಾಗಿ ಅದೆಷ್ಟೋ ಮಂದಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬೆಂಗಳೂರಿನಲ್ಲಿ ಸ್ವತಂತ್ರ ಉದ್ಯಾನದಲ್ಲಿ ಸಾವಿರಾರು ಅನುದಾನಿತ ನೌಕರರು 143 ದಿನ ಅವಿರತ ಹೋರಾಟ ಮಾಡಿದ್ದರು. ಈ ವೇಳೆ ವಿಷ ಸೇವಿಸಿ ಓರ್ವ ನೌಕರ ಸಾವನ್ನಪ್ಪಿದರೆ, ಮತ್ತೆ ಕೆಲವರು ಹೃದಯಾಘಾತದಿಂದ ಅಸುನೀಗಿದರು. ಆದರೂ, ಸರ್ಕಾರ ಯಾವುದೇ ಪ್ರತಿನಿಧಿಗಳು ಆಗಮಿಸಿ ನಮ್ಮ ಅಹವಾಲು ಆಲಿಸಲಿಲ್ಲ. ನಂತರ ಆಗಮಿಸಿದ್ದ ಇಂದಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಪಿಂಚಣಿ ಸೌಲಭ್ಯ ನೀಡುವ ಭರವಸೆ ನೀಡಿದ ನಂತರ ಹೋರಾಟ ಅಂತ್ಯಗೊಳಿಸಲಾಗಿತ್ತು. ಆದರೆ, ಅಧಿಕಾರಕ್ಕೆ ಬಂದು 3 ವರ್ಷಗಳಾಗುತ್ತಿದ್ದರೂ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ. ಆದ್ದರಿಂದ ಮುಂದಿನ ತಿಂಗಳು ರಾಜ್ಯ ಮಟ್ಟದಲ್ಲಿ ಸಂಘಟನೆ ಮಾಡಿ ದೊಡ್ಡ ಪ್ರಮಾಣದ ಚಳವಳಿ ರೂಪಿಸಲಾಗುವುದು ಎಂದು ಹೇಳಿದರು.
ಕಾನೂನು ಹೋರಾಟ ಸಮಿತಿಯ ಅಧ್ಯಕ್ಷ ಬುಕ್ಕಾಂಬುದಿ ನಾಗರಾಜಪ್ಪ ಮಾತನಾಡಿ, ಸಂವಿಧಾನ 34 ಡಿ ಪ್ರಕಾರ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂದಿದೆ. ಹಿಂದೆ ಸೇವೆಯಲ್ಲಿದ್ದ ನೌಕರರಿಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನೂ ಕೊಟ್ಟಿದೆ. 1983 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಡೋದು ಸರ್ಕಾರದ ವಿವೇಚನಾಧಿಕಾರ. ಅದರಂತೆ ಎಸ್ಸಿ/ಎಸ್ಟಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಟ್ಟರು. ತದನಂತರ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಇತರೆ ವರ್ಗಗಳ ಶಿಕ್ಷಣ ಸಂಸ್ಥೆಗಳಿಗೂ ಅನುದಾನ ಕೊಟ್ಟರು ಎಂದರು.ಸಂಚಾಲಕರಾದ ಜಾಲಮಂಗಲ ನಾಗರಾಜು ಮಾತನಾಡಿ, ಪಿಂಚಣಿ ನೀಡುವ ವಿಷಯದಲ್ಲಿ ಸರ್ಕಾರ ಸಕಾರಾತ್ಮಕವಾಗಿದೆ. ಆದರೆ, ಅಧಿಕಾರಿಗಳು ಸಾವಿರಾರು ಕೋಟಿ ಹಣ ಬೇಕಾಗುತ್ತದೆ ಎಂದು ಸಬೂಬು ಹೇಳಿ ಜನಪ್ರತಿನಿಧಿಗಳ ದಾರಿ ತಪ್ಪಿಸುತ್ತಿದ್ದಾರೆ. ರಾಜಕಾರಣಿಗಳಿಗಿಂತ ಅಧಿಕಾರಿಗಳೇ ಪಿಂಚಣಿ ಜಾರಿಗೆ ವಿರೋಧ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಿವೃತ್ತರಾಗಿ ನಿಧನ ಹೊಂದಿರುವವರು, ಜೀವಂತವಾಗಿರುವವರು ಹಾಗೂ ಉದ್ಯೋಗದಲ್ಲಿರುವ ಅನುದಾನಿತ ನೌಕರರ ಕರಾರುವಕ್ಕಾದ ಪಟ್ಟಿಯನ್ನು ತಯಾರಿಸಿ, ಇವರಿಗೆ ಪಿಂಚಣಿ ನೀಡಲು ಎಷ್ಟು ಹಣ ಬೇಕು ಎಂಬ ಕರಾರುವಕ್ಕಾದ ಅಂಕಿ-ಅಂಶಗಳನ್ನು ಸಕರ್ಾರಕ್ಕೆ ಒದಗಿಸಿಕೊಟ್ಟು ಪಿಂಚಣಿ ಸೌಲಭ್ಯ ನೀಡುವಲ್ಲಿ ವಿಧಾನ ಪರಿಷತ್ ಸದಸ್ಯರು ಮತ್ತು ಶಿಕ್ಷಣ ಸಚಿವರು ಮುಂದಾಗಬೇಕು ಎಂದು ಮನವಿ ಮಾಡಿದರು.ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಅನುದಾನಿತ ನೌಕರರ ಸಭೆ ನಡೆಸಿ ನೌಕರರ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗುತ್ತಿದ್ದು, ಮುಂದಿನ ತಿಂಗಳ ವೇಳೆಗೆ ಹಣ ಎಷ್ಟು ಬೇಕೆನ್ನುವ ಬಗ್ಗೆ ಕರಾರುವಕ್ಕಾದ ಅಂಕಿ-ಅಂಶಗಳನ್ನು ಸಕರ್ಾರಕ್ಕೆ ಸಲ್ಲಿಸಲಾಗುವುದು ಎಂದರು.
ನಿಧನರಾಗಿರುವ ಮತ್ತು ನಿವೃತ್ತಿಯಾಗಿ ಜೀವನ ನಡೆಸುತ್ತಿರುವವರಿಗೆ ನಿರ್ದಿಷ್ಟ ಮೊತ್ತವನ್ನು ಮಾತ್ರ ಈಗ ನೀಡಬೇಕಿರುತ್ತಿದೆ. ಸದ್ಯ ಉದ್ಯೋಗದಲ್ಲಿರುವವರಿಗೆ ನಿವೃತ್ತಿಯಾದಾಗ ಆಯಾ ವರ್ಷದ ಬಜೆಟ್ ನಲ್ಲಿ ಹಣ ಮೀಸಲಿಟ್ಟು, ಸೌಲಭ್ಯ ನೀಡಬೇಕಿರುತ್ತದೆ. ಇದು ಸರ್ಕಾರಕ್ಕೆ ದೊಡ್ಡ ಹೊರೆಯೇನಲ್ಲ. ಸರ್ಕಾರ ನೌಕರರ ಸೇವೆಯನ್ನು ಪರಿಗಣಿಸಿ, ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಕೊಟ್ಟು ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಅರಸೇಗೌಡ, ಎಂ.ಸಿ.ಗೋವಿಂದರಾಜು, ಸಿದ್ದರಾಜು, ಸುನಿಲ್ ಕುಮಾರ್, ಜಯರಾಮೇಗೌಡ, ವೇಣುಗೋಪಾಲ, ಚಂದ್ರಯ್ಯ, ಚಂದ್ರೇಗೌಡ, ರವಿಕುಮಾರ್, ರಫತ್ ಜಬೀನ್, ಕೃಷ್ಣಯ್ಯ, ಅಶೋಕ್, ಹಿತ್ತಲಮನಿ, ಮಲ್ಲಿಕಾರ್ಜುನಯ್ಯ, ರಾಘವೇಂದ್ರ ನಾಯಕ್ ಮತ್ತಿತರರು ಹಾಜರಿದ್ದರು.
2ಕೆಆರ್ ಎಂಎನ್ 2.ಜೆಪಿಜಿರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಜಿಲ್ಲಾ ಮಟ್ಟದ ಸಭೆಯನ್ನು ಅತಿಥಿಗಳು ಉದ್ಘಾಟಿಸಿದರು.