ಭಟ್ಕಳ ನಗರಸಭೆಯ 15ನೇ ವಾರ್ಡ್‌ನ ನಿವಾಸಿಗಳು ಆಕ್ರೋಶ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ರಘುನಾಥ ರಸ್ತೆ ಸನಿಹದ ಮಣ್ಕುಳಿ–ಪುಷ್ಪಾಂಜಲಿ ಟಾಕೀಸ್ ವ್ಯಾಪ್ತಿಯ ವಾರ್ಡ್ 15 ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಯುಜಿಡಿ ಮ್ಯಾನ್ ಹೋಲ್ ಸೋರಿಕೆಯಿಂದ 50ಕ್ಕೂ ಹೆಚ್ಚು ಬಾವಿಗಳ ನೀರು ಕಲುಷಿತಗೊಂಡಿದ್ದು, ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ರಾಘವೇಂದ್ರ ಮಠದ ಸಮೀಪ ಯುಜಿಡಿ ಮ್ಯಾನ್ ಹೋಲ್ ಬ್ಲಾಕ್ ಆಗಿದ್ದರಿಂದ ಮಲೀನ ನೀರು ಹೊರಗೆ ಹರಿದು ಸುತ್ತಮುತ್ತಲಿನ ಬಾವಿಗಳಿಗೆ ಸೇರಿ ಕುಡಿಯುವ ನೀರು ಕಲುಷಿತಗೊಂಡಿದೆ. ಕಳೆದ ಒಂದು ತಿಂಗಳಿನಿಂದ ಒಳಚರಂಡಿ ನೀರು ರಸ್ತೆಯ ಗಟಾರಿನಲ್ಲಿ ಹರಿಯುತ್ತಿದ್ದು, ದುರ್ವಾಸನೆ ಉಂಟಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ನಗರಸಭೆಗೆ ದೂರು ನೀಡಿದರೆ, ಇದು ನಮ್ಮ ವ್ಯಾಪ್ತಿಗೆ ಸಂಬಂಧಿಸಿದ ವಿಷಯವಲ್ಲ, ಐಆರ್‌ಬಿಯನ್ನು ಸಂಪರ್ಕಿಸಿ ಎಂದು ಹೇಳುತ್ತಾರೆ. ಮತ್ತೊಂದೆಡೆ, ಐಆರ್‌ಬಿ ಅಧಿಕಾರಿಗಳು, ನಮ್ಮ ಹೊಸ ಲೈನ್‌ಗೆ ಸಂಪರ್ಕ ಕಲ್ಪಿಸುವ ಮೊದಲು ನಗರಸಭೆಯವರು ಹಳೆಯ ಯುಜಿಡಿ ಸಂಪರ್ಕವನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ನಗರಸಭೆ- ಐಆರ್ ಬಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ಸಮಸ್ಯೆ ಮಾತ್ರ ಬಗೆಹರಿಯದೆ ಉಳಿದಿದೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ರಘುನಾಥ್ ರಸ್ತೆಯ ಮಣ್ಕುಳಿ–ಪುಷ್ಪಾಂಜಲಿ ಮಾರ್ಗದಲ್ಲಿ ಮಲಿನ ನೀರು ನಿರಂತರವಾಗಿ ಹರಿಯುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಗಟಾರಿನ ಮಲಿನ ನೀರು ಸಮೀಪದ ಬಾವಿಗಳಿಗೆ ಸೇರಿ ಕುಡಿಯುವ ನೀರು ಕಲುಷಿತಗೊಂಡಿರುವುದರಿಂದ ಆರೋಗ್ಯ ಸಮಸ್ಯೆಗಳ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಮಳೆಗಾಲದ ಹಿನ್ನೆಲೆ ಬಾವಿಗಳನ್ನು ಖಾಲಿ ಮಾಡಿ ಸ್ವಚ್ಛಗೊಳಿಸುವುದು ಕಷ್ಟಕರವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಯುಜಿಡಿ ಮ್ಯಾನ್ ಹೋಲ್ ಸೋರಿಕೆ ದುರಸ್ತಿಪಡಿಸಬೇಕು. ಗಟಾರಿನಲ್ಲಿ ಮಲಿನ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕಲುಷಿತಗೊಂಡಿರುವ ಬಾವಿಗಳನ್ನು ಸ್ವಚ್ಛಗೊಳಿಸಿ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಜೂ. 15ರಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆ ನಗರಸಭೆಯದ್ದೇ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭ ಪ್ರಮುಖರಾದ ಪರಮೇಶ್ವರ ನಾಯ್ಕ, ಸುರೇಶ ನಾಯ್ಕ, ಸುಧಾಕರ ನಾಯ್ಕ, ದಿನೇಶ ನಾಯ್ಕ, ನಾಗರಾಜ ನಾಯ್ಕ, ಅನಂತ ದೇವಾಡಿಗ, ಶೇಖರ ನಾಯ್ಕ, ರಮೇಶ ನಾಯ್ಕ, ಈಶ್ವರ ನಾಯ್ಕ, ಕಿಶೋರ ನಾಯ್ಕ, ಮನೋಜ ನಾಯ್ಕ, ಮಾದೇವ ನಾಯ್ಕ ಮುಂತಾದವರಿದ್ದರು.

------

13ಬಿಕೆಲ್2: ಭಟ್ಕಳ ನಗರಸಭೆ 15ನೇ ವಾರ್ಡನಲ್ಲಿ ಒಳಚರಂಡಿ ಮ್ಯಾನ್ ಹೋಲ್ ಸೋರಿಕೆಯಿಂದ ಗಟಾರದಲ್ಲಿ ಮಲೀನ ನೀರು ಹರಿಯುತ್ತಿರುವುದು.

13ಬಿಕೆಲ್3: ಮ್ಯಾನ್ ಹೋಲ್ ಸೋರಿಕೆ ಸರಿಪಡಿಸಿ ಸಮಸ್ಯೆ ಬಗೆಹರಿಸಲು ಸ್ಥಳೀಯರು ಆಗ್ರಹಿಸಿದರು.