ಒಣಗಿದ ಬೆಳೆಗಳ ಸಮೀಕ್ಷೆಗೆ ರೈತರ ತಾಕೀತು

| Published : May 12 2024, 01:16 AM IST

ಸಾರಾಂಶ

ದಾವಣಗೆರೆಯಲ್ಲಿ ರೈತರ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ನೀರಿಲ್ಲದೇ ಬಿಸಿಲಿನ ಝಳದಿಂದ ಒಣಗಿದ ಕಬ್ಬು, ಅಡಕೆ, ತೆಂಗು, ಬಾಳೆ ಬೆಳೆಗಳ ನಾಶದ ಅಂದಾಜನ್ನು ರೈತರ ಹೊಲ, ತೋಟಗಳಿಗೆ ಅಧಿಕಾರಿಗಳು ಖುದ್ದಾಗಿ ಹೋಗಿ, ಸಮೀಕ್ಷೆ ಕೈಗೊಳ್ಳಬೇಕು ಎಂದು ರೈತರ ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಇಲ್ಲದೇ, ಭದ್ರಾ ನೀರು ಸಿಗದೇ ಕಬ್ಬು, ಅಡಕೆ, ತೆಂಗು, ಬಾಳೆ ಬೆಳೆಗಳು ಸಂಪೂರ್ಣ ಒಣಗಿವೆ. ಅಧಿಕಾರಿಗಳು ಖುದ್ದಾಗಿ ತೋಟ, ಹೊಲಗಳಿಗೆ ಭೇಟಿ ನೀಡಿ, ಬೆಳೆ ನಾಶದಿಂದ ನಷ್ಟದ ಅಂದಾಜಿನ ಜೊತೆಗೆ ರೈತರು ಸಾಲ ಸೋಲ ಮಾಡಿ ಬಿತ್ತಿದ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿ ಜಮೀನು ಉಳುಮೆ, ರೈತರ ಕುಟುಂಬದ ಶ್ರಮ, ಕೂಲಿ ವೆಚ್ಚ ಸೇರಿಸಬೇಕು ಎಂದರು.

ಬಿಸಿ ಗಾಳಿಯು ಜನ, ಜಾನುವಾರು ಸೇರಿ ಸಕಲ ಜೀವರಾಸಿಯನ್ನೇ ಹಿಂಡಿ ಹಿಪ್ಪೆ ಮಾಡಿದೆ. ಬಿಸಿ ಗಾಳಿ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೀವರಾಶಿಗಳು ಬಳಲಿ ಬೆಂಡಾಗಿವೆ. ಕಾದ ಹಂಚಿನ ಮೇಲೆ ಬದುಕು ಎಂಬಂತಾಗಿದೆ ಜೀವನ. ಆದರೆ, ಸದಾ ಹವಾ ನಿಯಂತ್ರಿತ ಕೊಠಡಿ, ವಾಹನಗಳಲ್ಲಿ, ತಲೆ ಮೇಲೆ ತಂಪು ಗಾಳಿ, ಫ್ಯಾನ್ ಗಾಳಿಯಡಿ ಕೆಲಸ ಮಾಡುವ ಅಧಿಕಾರಿಗಳು ಬಸವ ಜಯಂತಿ, 2ನೇ ಶನಿವಾರ, ಭಾನುವಾರವೆಂದು ರಜೆ ಮೂಡ್‌ನಲ್ಲಿ ಕುಟುಂಬ ಸಮೇತ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಇತ್ತ ರೈತರು ಬಿಸಿಲ ಝಳದಿಂದ ತತ್ತರಿಸುತ್ತಿದ್ದಾರೆ ಎಂದು ಅ‍ವರು ದೂರಿದರು.

ರೈತರತ್ತ ಕಣ್ಣು ಬಿಟ್ಟು ನೋಡುವ ಧಾವಂತವೂ ಅಧಿಕಾರಿ ವರ್ಗಕ್ಕೆ ಇಲ್ಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರೆಸಾರ್ಟ್‌ನಲ್ಲಿ ವಿಶ್ರಾಂತಿಗೆ ಜಾರಿ, ಚುನಾವಣೆ ಸೋಲು-ಗೆಲುವು ಅಂತಾ ಪಂಟು ಹೊಡೆಯುತ್ತಾ, ನಿರಮ್ಮಳವಾಗಿ ಕಾಲಹರಣ ಮಾಡುತ್ತಿದ್ದಾರೆ. ರೋಮ್ ನಗರ ಹೊತ್ತಿ ಉರಿಯುವಾಗ ಗ್ರೀಕ್ ದೊರೆ ನೀರೋ ಪಿಟೀಲ್‌ ಬಾರಿಸುತ್ತಿದ್ದ ಎಂಬಂತೆ ನಮ್ಮ ಸಿಎಂ, ಡಿಸಿಎಂಗಳು ರೆಸಾರ್ಟ್‌ನಲ್ಲಿ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಇಂತಹವರಿಗೆ ರೈತರು ಬದುಕಿದರೇನು, ಬಿಟ್ಟರೇನು ಎಂಬ ಚಿಂತೆ ಸಹ ಇಲ್ಲ ಎಂದು ಅವರು, ಅಂತರ್ಜಲ ಮಟ್ಟ ಕುಸಿದು ಬತ್ತಿದ ಕೊಳವೆ ಬಾವಿಗಳ ಸಮೀಕ್ಷೆ ಮಾಡಿ, ಅವುಗಳ ಅಂತರ್ಜಲ ಮರು ಪೂರಣ ಮಾಡಿ, ಪುನರ್ಜೀವನಗೊಳಿಸಬೇಕು ಎಂದರು.ದನ, ಕರು, ಕುರಿ, ಕೋಳಿ, ಮೇಕೆಗಳು ಬಿಸಿಲಿನ ಝಳದಿಂದ ನರಳುತ್ತಿವೆ. ಮೇವಿಲ್ಲದೇ, ಕುಡಿಯಲು ನೀರಿಲ್ಲದೇ ಬಡಕಲಾಗಿವೆ. ಈಗಾಗಲೇ ಕೆಲ ಜಾನುವಾರುಗಳು ಸಾವನ್ನಪ್ಪಿವೆ. ಕೆಲವನ್ನು ರೈತರು ಸಾಕಲಾಗದೇ ಸಿಕ್ಕ ಸಿಕ್ಕ ಬೆಲೆಗೆ ಮಾರುತ್ತಿದ್ದಾರೆ. ಈ ಎಲ್ಲಾ ವಿಚಾರ ಅರ್ಥ ಮಾಡಿಕೊಂಡು, ಬೆಳೆ ನಾಶದ ಸಮೀಕ್ಷೆ ಮಾಡಿ, ನ್ಯಾಯಯುತ, ಸೂಕ್ತ ಪರಿಹಾರ ನೀಡುವ ಕೆಲಸ ಸರ್ಕಾರ, ಜಿಲ್ಲಾಡಳಿತ ಮೊದಲು ಮಾಡಲಿ ಎಂದು ತಾಕೀತು ಮಾಡಿದರು.

ಬೆಳೆ ನಷ್ಟದ ಸಮೀಕ್ಷೆಗೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ, ಅಂಜರ್ಜಲ ಅಭಿವೃದ್ಧಿ ಇಲಾಕೆ ಅಧಿಕಾರಿಗಳ ತುರ್ತು ಸಭೆಯನ್ನು ಜಿಲ್ಲಾಧಿಕಾರಿ, ಜಿಪಂ ಸಿಇಓ ಜಂಟಿಯಾಗಿ ಮಾಡಿ, ಪ್ರತಿ ಗ್ರಾಪಂಗೆ ಒಬ್ಬೊಬ್ಬ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಬೇಕು. 5 ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದರೂ, ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮಾಡುತ್ತಿರುವ ರಾಜ್ಯ ಸರ್ಕಾರ, ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ ರೂಪಕ್ಕೆ ಮುಂದಾಗಲಿ ಎಂದು ಬಿ.ಎಂ.ಸತೀಶ ಒತ್ತಾಯಿಸಿದರು.

ಒಕ್ಕೂಟದ ಮುಖಂಡರಾದ ಬೆಳ‍ವನೂರು ಬಿ.ನಾಗೇಶ್ವರ ರಾವ್‌, ಬಲ್ಲೂರು ಬಸವರಾಜ, ಕುಂದುವಾಡ ಗಣೇಶಪ್ಪ, ಗೋಣಿವಾಡ ಎನ್.ಎಂ.ಮಂಜುನಾಥ, ಕುಂದುವಾಡ ಜಿಮ್ಮಿ ಹನುಮಂತಪ್ಪ, ಶ್ಯಾಗಲೆ ಕ್ಯಾಂಪ್ ಸತೀಶ, ಮತ್ತಿ ಪಿ.ಎಂ.ಮಂಜುನಾಥ ಇತರರು ಇದ್ದರು ರೈತರು, ಜನ, ಜಾನುವಾರುಗಳು ಕಾದ ಕಾವಲಿ ಮೇಲಿನಂತೆ ಜೀವನ ನಡೆಸಿದ್ದರೆ, ಸಿಎಂ, ಡಿಸಿಎಂ ರೆಸಾರ್ಟ್‌ಗಳಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಇನ್ನು ಸರ್ಕಾರಿ ಅಧಿಕಾರಿಗಳು ಎಸಿ ಕಚೇರಿ, ವಾಹನಗಳಲ್ಲಿದ್ದು, ರಜೆಗಳ ಹಿನ್ನೆಲೆ ಕುಟುಂಬ ಸಮೇತ ಮೋಜಿನಲ್ಲಿದ್ದಾರೆ. ಇಂತಹವರಿಂದ ರೈತರು, ಜನರು ಏನನ್ನು ನಿರೀಕ್ಷೆ ಮಾಡಲು ಸಾಧ್ಯ?

ಬಿ.ಎಂ.ಸತೀಶ, ರೈತರ ಒಕ್ಕೂಟದ ಮುಖಂಡ.