ಹಾನಗಲ್ಲ: ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿಳಂಬ ಖಂಡಿಸಿ ಫೆ. 14ರಂದು ಹಾವೇರಿಯಲ್ಲಿ ಕಪ್ಪುಬಟ್ಟೆ ಧರಿಸಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಮಂತ್ರಿಗಳಿಗೆ ಧಿಕ್ಕಾರ ಹಾಕಲಾಗುವುದು ಎಂದು ಹಾನಗಲ್ಲ ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಇಲಾಖೆಗಳು ಹಾಗೂ ಸರ್ಕಾರ ಅನುಕಂಪದಿಂದ ನೋಡುವ ಕೆಲಸ ಮಾಡಬೇಕೆ ಹೊರತು ಇಲ್ಲಸಲ್ಲದ ನಿಯಮಗಳನ್ನು ಮುಂದಿಟ್ಟುಕೊಂಡು ನೊಂದ ಕುಟುಂಬಗಳಿಗೆ ಪರಿಹಾರ ನೀಡದೇ ಕಾಡುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.

2024-25ರಲ್ಲಿ ಹಾನಗಲ್ಲ ತಾಲೂಕಿನಲ್ಲಿ 25 ರೈತರ ಆತ್ಮಹತ್ಯೆ ನಡೆದಿದೆ. ರೈತರಿಗೆ ರೈತ ಸಂಘ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರೂ ಅಂತಹ ಪ್ರಕರಣಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಸಂಬಂಧಿಸಿದ ಇಲಾಖೆಗಳು ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ಪರಿಹಾರಕ್ಕೆ ವಿಳಂಬ ಹಾಗೂ ಪರಿಹಾರ ನೀಡದಂತೆ ನಿರ್ಣಯಿಸುವುದು ಹಾವೇರಿ ಜಿಲ್ಲೆಯಲ್ಲಿ ನಡೆದಿವೆ. ಆ ಕಾರಣಕ್ಕಾಗಿಯೇ ರೈತ ಸಂಘ ಮುಖ್ಯಮಂತ್ರಿ ಹಾಗೂ ಸರ್ಕಾರದ ಎಲ್ಲ ಮಂತ್ರಿಗಳ ಗಮನ ಸೆಳೆಯಲು ಫೆ. 14ರಂದು ಧಿಕ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.2025-26ರಲ್ಲಿ 6 ರೈತ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದು, ಅದರಲ್ಲಿ ಇನ್ನೂ 3 ಪ್ರಕರಣಗಳಲ್ಲಿ ನೊಂದ ಕುಟುಂಬಕ್ಕೆ ಪರಿಹಾರ ನೀಡಿಲ್ಲ. 2023ರಲ್ಲಿನ ಒಂದು ಪ್ರಕರಣವನ್ನು ಇನ್ನೂ ಇತ್ಯರ್ಥಗೊಳಿಸಿಲ್ಲ ಎಂದು ಮರಿಗೌಡ ಪಾಟೀಲ ತಿಳಿಸಿದರು.ಸೌರ ವಿದ್ಯುತ್‌ ಯೋಜನೆ ವಿಫಲ-ಆರೋಪ: ರೈತರ ಪಂಪಸೆಟ್‌ ಅಕ್ರಮ ಸಕ್ರಮ ವಿಷಯದಲ್ಲಿ ಹೆಸ್ಕಾಂ ರೂಪಿಸಿದ ಹೊಸ ನೀತಿ ರೈತರ ಪಾಲಿಗೆ ಆತಂಕಕಾರಿಯಾಗಿದೆ. ಹಿಂದೆ ಇದ್ದಂದೆ ₹18 ಸಾವಿರ ಪಡೆದು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು. ಹಾನಗಲ್ಲ ತಾಲೂಕಿನಲ್ಲಿ ಸೋಲಾರ್ ವಿದ್ಯುತ್ ಯೋಜನೆ ಸಫಲವಾಗದು. ಕೊಳವೆಬಾವಿಗಳು ಆಳದಲ್ಲಿವೆ. ಬಿಸಿಲು ಕೂಡ ಸಾಲದು. ಸ್ಪ್ರಿಂಕ್ಲರ್‌ ಹಾಗೂ ಡ್ರಿಪ್‌ಗಳಿಗೆ ಸೋಲಾರ್ ವಿದ್ಯುತ್‌ನಿಂದ ಉಪಯೋಗವಿಲ್ಲ. ಇನ್ನು ಶೀಘ್ರ ಸಂಪರ್ಕ ಯೋಜನೆಯಲ್ಲಿ ರೈತರು ₹2ರಿಂದ 5 ಲಕ್ಷಕ್ಕೂ ಅಧಿಕ ಖರ್ಚು ಮಾಡಿಕೊಂಡು ವಿದ್ಯುತ್ ಪಡೆಯುವುದು ಸಾಧ್ಯವಾಗದ ಮಾತು. ಬಡ ರೈತರು ಇದರಿಂದ ನೊಂದಿದ್ದಾರೆ. ಮೊದಲೇ ಲಕ್ಷಾಂತರ ರು. ಖರ್ಚು ಮಾಡಿ ಕೊಳವೆಬಾವಿ ಹಾಕಿಸಿಕೊಂಡು ಈಗ ವಿದ್ಯುತ್‌ಗಾಗಿ ತಲೆಯ ಮೇಲೆ ಕೈಹೊತ್ತು ಕೂಡುವಂತಾಗಿದೆ. ಕೂಡಲೇ ಸರ್ಕಾರ ಈ ನಿಯಮ ಬದಲಿಸಿ ₹18 ಸಾವಿರ ಪಡೆದು ವಿದ್ಯುತ್ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮಹೇಶ ವಿರೂಪಣ್ಣನವರ, ಮಾಲಿಂಗಪ್ಪ ಅಕ್ಕಿವಳ್ಳಿ, ಸೋಮಣ್ಣ ಜಡಗೊಂಡರ, ಅಶೋಕ ಸಂಸಿ, ಎಂ.ಎಂ. ಬಡಗಿ, ಚನ್ನಬಸಪ್ಪ ಸಂಗೂರ, ಸಂತೋಷ ಅಜಗುಂಡಿ, ಮುನಾಫಸಾಬ್ ಆಲದಕಟ್ಟಿ ಇದ್ದರು.