ಮತ್ತೆ ಕೊರೋನಾ ನಿಯಂತ್ರಣಕ್ಕೆ ವಾರಿಯರ್ಸ್‌ ಸಜ್ಜು

| Published : Dec 26 2023, 01:30 AM IST / Updated: Dec 26 2023, 01:31 AM IST

ಸಾರಾಂಶ

ಕೊರೋನಾ ವೇಳೆ ಜೀವದ ಹಂಗು ತೊರೆದು ಸಿಬ್ಬಂದಿ ಸೇವೆ ಸಲ್ಲಿಸಿದ್ದರು. ಈ ಬಾರಿಯೂ ಸಮರೋಪಾದಿಯಲ್ಲಿ ಕೆಲಸ ಮಾಡಲು ಸಜ್ಜಾಗಿದ್ದಾರೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಕೊರೋನಾ ಅಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಜೀವದ ಹಂಗು ತೊರೆದು ವಾರಿಯರ್ಸ್‌ಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಿದ್ದರು. ಈಗ ಈ ಕೊರೋನಾ ವಾರಿಯರ್ಸ್‌ಗಳು ಮತ್ತೆ ಕೋವಿಡ್‌ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಲು ಸಜ್ಜಾಗಿದ್ದಾರೆ.

ಕೊರೋನಾವನ್ನು ನಿಯಂತ್ರಿಸಲು ಶ್ರಮವಹಿಸಿದ್ದ ವಾರಿಯರ್ಸ್‌ಗಳು ಆಗ ಅನುಭವಿಸಿದ ಯಾತನೆಯನ್ನೂ ಮರೆತು ಮತ್ತೆ ಕೋವಿಡ್‌ ಅನ್ನು ನಿಯಂತ್ರಿಸುವುದರತ್ತ ಮಾನಸಿಕವಾಗಿ ಸಜ್ಜಾಗುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಕಾಲಿಟ್ಟಿರುವ ಹಿನ್ನೆಲೆ ಮತ್ತೆ ಜನರ ಜೀವ ಕಾಪಾಡಲು ವಾರಿಯರ್ಸ್‌ಗಳು ಸನ್ನದ್ಧರಾಗುತ್ತಿದ್ದಾರೆ.

ಕೊರೋನಾದಿಂದ ಫಜೀತಿ: ಕೊರೋನಾದ ಒಂದನೇ, ಎರಡನೇ ಮತ್ತು ಮೂರನೇ ಅಲೆಗಳಲ್ಲಿ ಮನೆಗಳನ್ನು ಬಿಟ್ಟು ಕೊರೋನಾ ವಾರಿಯರ್ಸ್‌ಗಳಾದ ವೈದ್ಯರು, ನರ್ಸ್‌ಗಳು ಹಾಗೂ ಡಿ ಗ್ರೂಪ್‌ ನೌಕರರು ಕೆಲಸ ಮಾಡಿದ್ದಾರೆ. ಆಸ್ಪತ್ರೆಗಳಲ್ಲೇ ವಾಸ್ತವ್ಯ ಹೂಡಿ ಜನರ ಜೀವರಕ್ಷಣೆ ಮಾಡಿದ್ದಾರೆ. ಒಂದು ವಾರ ಕ್ವಾರಂಟೈನ್‌ ಆಗಿ, ಮತ್ತೆ ಕೆಲಸಕ್ಕೆ ಬಂದಿದ್ದಾರೆ. ಮನೆಯಲ್ಲಿ ಚಿಕ್ಕಮಕ್ಕಳು ಇದ್ದರೂ ಅವರ ಮುಖ ನೋಡಲು ಹೋಗದೇ ಕೋವಿಡ್‌ ಸೋಂಕಿತರನ್ನು ಪಾರು ಮಾಡಲು ಕೆಲಸ ಮಾಡಿದ್ದಾರೆ.

ಆಶಾ ಕಾರ್ಯಕರ್ತೆಯರು ಮನೆ, ಮನೆಗಳಿಗೆ ತೆರಳಿ ಕಿಟ್‌ಗಳನ್ನು ವಿತರಣೆ ಮಾಡಿದ್ದಾರೆ. ಅಲ್ಲದೇ ಪಲ್ಸ್‌ಗಳನ್ನು ಚೆಕ್‌ ಮಾಡಿ ನಿತ್ಯ ವರದಿ ಮಾಡಿದ್ದಾರೆ. ಸೋಂಕಿತರ ಮನೆಗಳಿಗೆ ತೆರಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇನ್ನೂ ಕೊರೋನಾದ ದ್ರವ ಸಂಗ್ರಹಿಸುವ ವಾರಿಯರ್ಸ್‌ಗಳು ಕೂಡ ಮನೆ ಮನೆಗೆ ತೆರಳಿ ಗಂಟಲು ದ್ರವ ಸಂಗ್ರಹಿಸಿ, ಕೊರೋನಾದ ಕೊಂಡಿಯನ್ನು ಕಳಚಿದ್ದಾರೆ.

ಪೌರಕಾರ್ಮಿಕರು ಕೂಡ ಕೊರೋನಾ ಸಮಯದಲ್ಲಿ ಅಂಜದೆ ಮನೆ, ಮನೆಗೆ ತೆರಳಿ ಕಸ ಸಂಗ್ರಹಣೆ ಮಾಡಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಸಿಲಿಂಡರ್‌ಗಳ ಕೊರತೆ ಉಂಟಾಗದಂತೆ ಸರ್ವಿಸ್‌ ಏಜೆನ್ಸಿಗಳ ಸಿಬ್ಬಂದಿ ಕೂಡ ಅಡುಗೆ ಅನಿಲ ಪೂರೈಕೆ ಮಾಡಿದ್ದಾರೆ. ಇನ್ನೂ ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಏಜೆಂಟರು, ಪೇಪರ್ ಹಾಕುವ ಹುಡುಗರು, ಹಾಲು ಮಾರಾಟ ಮಾಡುವ ಹುಡುಗರು ಕೂಡ ಕೊರೋನಾಕ್ಕೆ ಹೆದರದೆ ಜನರ ಜತೆ ನಿಂತಿದ್ದಾರೆ. ಹಣ್ಣು, ತರಕಾರಿ ಮಾರಾಟ ಮಾಡುವವರು ಕೂಡ ಮನೆಗಳಿಗೆ ಕೂರದೇ ಬೀದಿ, ಬೀದಿಗೆ ತೆರಳಿ ತಳ್ಳು ಗಾಡಿಗಳಲ್ಲಿ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ. ಹಾಗಾಗಿ ಈ ವಾರಿಯರ್ಸ್‌ಗಳನ್ನೂ ನೆನೆಯಲೆಬೇಕಿದೆ.

ಪೊಲೀಸ್‌, ಹೋಂ ಗಾರ್ಡ್‌ಗಳ ಸೇವೆ: ಕೊರೋನಾ ಅಬ್ಬರದ ವೇಳೆ ಮಿನಿ ಲಾಕ್‌ ಡೌನ್‌, ಲಾಕ್‌ ಡೌನ್‌ ವೇಳೆ ಪೊಲೀಸರು ಮತ್ತು ಹೋಂ ಗಾರ್ಡ್‌ಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಕೊರೋನಾದ ಕೊಂಡಿ ಕಳಚಲು ಲಾಕ್‌ ಡೌನ್‌ ಮಾಡಿದರೆ, ಬೈಕ್‌, ಕಾರು, ವಾಹನಗಳಲ್ಲಿ ಜನರು ಬೇಕಾಬಿಟ್ಟಿಯಾಗಿ ತಿರುಗಾಡುವುದನ್ನು ಪೊಲೀಸರು, ಹೋಂ ಗಾರ್ಡ್‌ಗಳು ನಿಯಂತ್ರಿಸಿದ್ದರು. ಪೊಲೀಸರು ಹಾಗೂ ಜನರ ನಡುವೆ ಹಲವು ಬಾರಿ ವಾಗ್ವಾದ ಕೂಡ ಉಂಟಾಗಿತ್ತು. ಆದರೂ ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕೊರೋನಾ ವಾರಿಯರ್ಸ್‌ಗಳು ಸೇವೆ ಸಲ್ಲಿಸಿದ್ದಾರೆ.

ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು: ಕೊರೋನಾ ಅಬ್ಬರದ ವೇಳೆಯಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ವೃದ್ಧರ ಮಾಹಿತಿಯನ್ನು ಕಲೆ ಹಾಕಿದ್ದರು. ಕೇಸ್‌ಗಳನ್ನು ನಿಯಂತ್ರಿಸಲು ಹಾಗೂ ಸೋಂಕಿತರ ಕೇಸ್‌ ಹಿಸ್ಟರಿಗಳಿಗಾಗಿ ವಾರಿಯರ್ಸ್‌ಗಳಾಗಿ ಕೆಲಸ ಮಾಡಿದ್ದರು. ಸೋಂಕಿತರ ಟ್ರಾವೆಲ್‌ ಹಿಸ್ಟರಿ ಕೂಡ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸಂಗ್ರಹಿಸಿದ್ದರು. ಹಾಗಾಗಿ ಆಗ ಕೊರೋನಾ ನಿಯಂತ್ರಣಕ್ಕೆ ವಾರಿಯರ್ಸ್‌ಗಳ ಸೇವೆ ಅನನ್ಯವಾಗಿತ್ತು.

ಸಿಬ್ಬಂದಿ ಕೊಡುಗೆ: ಕೊರೋನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿದ ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಜನರ ಪ್ರಾಣ ಕಾಪಾಡಿದ್ದರು. ಸೋಂಕಿತರನ್ನು ಆರೈಕೆ ಮಾಡಿದ್ದಲ್ಲದೇ; ಅವರಿಗೆ ಕಾಲ ಕಾಲಕ್ಕೆ ಊಟ, ಮಾತ್ರೆ ತೆಗೆದುಕೊಳ್ಳಲು ಕೋವಿಡ್‌ ಕೇರ್ ಸೆಂಟರ್ ಮತ್ತು ಕ್ವಾರಂಟೈನ್‌ ಕೇಂದ್ರಗಳಲ್ಲಿ ಸೂಚಿಸಿದ್ದರು. ಪಿಪಿಇ ಕಿಟ್‌ ಧರಿಸಿ ಕೆಲವರು ಹೋದರೆ ಇನ್ನೂ ಕೆಲವರು ಡಬಲ್‌ ಮಾಸ್ಕ್‌ ಬಳಸಿ ಸೋಂಕಿತರ ಬಳಿ ತೆರಳುತ್ತಿದ್ದರು. ಸೋಂಕಿತರ ಆರೈಕೆಯೇ ಮುಖ್ಯ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಿ ಕೊರೋನಾಅನ್ನು ನಿಯಂತ್ರಿಸಿದ್ದರು. ಈಗ ಮತ್ತೆ ಕೊರೋನಾ ಕಾಣಿಸಿಕೊಂಡಿರುವುದರಿಂದ ಅದೇ ಹುಮ್ಮಸ್ಸಿನಲ್ಲಿ ಕೆಲಸ ಮಾಡಲು ವಾರಿಯರ್ಸ್‌ಗಳು ಸಜ್ಜಾಗಿದ್ದಾರೆ.

ನಿಯಂತ್ರಣಕ್ಕೆ ಸಜ್ಜು: ಕೊರೋನಾ ನಿಯಂತ್ರಣಕ್ಕೆ ಖಂಡಿತ ಸಜ್ಜಾಗಿದ್ದೇವೆ. ಜಿಲ್ಲೆಯಲ್ಲಿ ಈಗಾಗಲೇ ವರ್ಚುವಲ್‌ ಮೀಟಿಂಗ್‌ಗಳನ್ನು ಮಾಡಿದ್ದೇವೆ. ಆರು ತಾಲೂಕುಗಳಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲ ಇಲಾಖೆಗಳ ಜತೆಗೆ ಸಮನ್ವಯದೊಂದಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. ಈ ಹಿಂದೆಯೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಈಗಲೂ ಮಾಡಲು ಸಿದ್ಧರಿದ್ದೇವೆ ಎಂದು ಡಿಎಚ್‌ಒ ಡಾ. ಎಲ್‌.ಆರ್. ಶಂಕರ್‌ ನಾಯ್ಕ ತಿಳಿಸಿದರು.ಬಲವಾದ ಮದ್ದು: ಕೊರೋನಾ ಕಾಲದಲ್ಲೇ ಬಾಣಂತಿಯರು, ಗರ್ಭಿಣಿಯರಿಗೆ ವೈದ್ಯಕೀಯ ಸೇವೆ ನೀಡಿದ್ದೇವೆ. ಈಗಲೂ ನೀಡಲು ಸಜ್ಜಾಗಿದ್ದೇವೆ. ನಾವು ಮನೆಯಲ್ಲೇ ಕೂರದೇ ಜನರಿಗೆ ಸೇವೆ ನೀಡಲು ಸಿದ್ಧ. ಆತ್ಮಸ್ಥೈರ್ಯವೇ ಕೊರೋನಾ ಎದುರಿಸುವ ಬಲವಾದ ಮದ್ದು ಎಂದು ವೈದ್ಯರಾದ ಡಾ. ಮಹೆಬೂಬಿ, ಡಾ. ಅತಿಕಾ, ಡಾ. ನೂರಬಾಷಾ ತಿಳಿಸಿದರು.ಸೋಂಕಿತರ ಆರೈಕೆ: ಕೊರೋನಾ ಕಾಲದಲ್ಲಿ ಸೋಂಕಿತರ ಆರೈಕೆ ಮಾಡಿದ್ದೇವೆ. ಈಗ ಮತ್ತೆ ಕೊರೋನಾ ಕಾಣಿಸಿಕೊಂಡಿದೆ. ನಾವು ಮತ್ತೆ ವಾರಿಯರ್ಸ್‌ಗಳಾಗಿ ಸೇವೆ ಮಾಡಲು ಸಿದ್ಧ. ನಮ್ಮ ಜೀವ ಒತ್ತೆ ಇಟ್ಟು ಜನರ ಪ್ರಾಣ ರಕ್ಷಣೆ ಮಾಡಲು ಸಿದ್ಧರಾಗಿದ್ದೇವೆ ಎಂದು ನರ್ಸ್‌ಗಳಾದ ಮರಿದೇವಿ, ಮಂಜುಳಾ, ಮಂಜುಳಾಬಾಯಿ ತಿಳಿಸಿದರು.

ಆರೋಗ್ಯ ಕಾಪಾಡಲು ಸಿದ್ಧ: ಕೊರೋನಾದ ವೇಳೆ ಮನೆ, ಮನೆಗೆ ತೆರಳಿ ಕಿಟ್‌ಗಳನ್ನು ಕೊಟ್ಟಿದ್ದೇವು. ಜತೆಗೆ ಪಲ್ಸ್‌ಗಳನ್ನು ಚೆಕ್‌ ಮಾಡಿದ್ದೇವು. ಈಗಲೂ ಜನರ ಸೇವೆ ಮಾಡಲು ಸದಾ ಸಿದ್ಧರಿದ್ದೇವೆ. ಜನರ ಆರೋಗ್ಯ ಕಾಪಾಡಲು ಸದಾ ಸಿದ್ಧರಿದ್ದೇವೆ ಎಂದು ಆಶಾ ಕಾರ್ಯಕರ್ತೆ ಸುಮತಿ ತಿಳಿಸಿದರು.