ಮಾಜಿ ಸಿಎಂ ಬಿಎಸ್‌ವೈಗೆ ಪ್ರಾಸಿಕ್ಯೂಷನ್ ಅನುಮತಿ ಕೊಟ್ಟಾಗ ಸತ್ಯದ ಜಯವಾಗಿತ್ತೇ.. ?

| Published : Aug 19 2024, 12:52 AM IST / Updated: Aug 19 2024, 09:56 AM IST

ಮಾಜಿ ಸಿಎಂ ಬಿಎಸ್‌ವೈಗೆ ಪ್ರಾಸಿಕ್ಯೂಷನ್ ಅನುಮತಿ ಕೊಟ್ಟಾಗ ಸತ್ಯದ ಜಯವಾಗಿತ್ತೇ.. ?
Share this Article
  • FB
  • TW
  • Linkdin
  • Email

ಸಾರಾಂಶ

 ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಕಾಂಗ್ರೆಸ್‌ನವರಿಗೆ ಸತ್ಯಕ್ಕೆ ಸಂದ ಜಯವಾಗಿತ್ತು. ಆದರೆ, ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜ್ಯಪಾಲರ ದುರ್ಬಳಕೆಯಾಗಿದೆಯೇ - ಮಂಜುನಾಥ್

 ಮಂಡ್ಯ : ಭೂಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಕಾಂಗ್ರೆಸ್‌ನವರಿಗೆ ಸತ್ಯಕ್ಕೆ ಸಂದ ಜಯವಾಗಿತ್ತು. ಆದರೆ, ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜ್ಯಪಾಲರ ದುರ್ಬಳಕೆಯಾಗಿದೆಯೇ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ವಂಗ್ಯವಾಡಿದ್ದಾರೆ.

ಯಡಿಯೂರಪ್ಪ ವಿರುದ್ಧ 2011 ಲ್ಲಿ ಸಿರಾಜಿನ್‌ ಬಾಷಾ ಹಾಗೂ ಕೆ.ಎನ್.ಬಾಲರಾಜ್‌ರವರ ಖಾಸಗಿ ದೂರಿನ ಮೇರೆಗೆ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಇದು ಸತ್ಯಕ್ಕೆ ಸಂದ ಜಯ, ಸತ್ಯಮೇವ ಜಯತೆ ಎಂದು ಹೇಳಿಕೆ ನೀಡಿದ್ದರು. ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ರಾಜೀನಾಮೆಯನ್ನೂ ನೀಡಿದ್ದರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಭೂಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ತನಿಖೆಗಾಗಿ ಅನುಮತಿ ನೀಡಿದ್ದಾರೆ. ಇದು ವಿರೋಧ ಪಕ್ಷಗಳಿಂದ ರಾಜಭವನದ ದುರ್ಬಳಕೆ ಎಂದು ಆಡಳಿತಾರೂಢ ಕಾಂಗ್ರೆಸ್‌ನವರು ಆರೋಪಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ, ಎಲ್ಲವೂ ಕ್ಲೀನ್ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ವಿರುದ್ಧ ಲೋಕಾಯುಕ್ತದಲ್ಲಿ ೫೦ ಪ್ರಕರಣಗಳಿವೆ. ಹಾಗಾದರೆ ಇವೆಲ್ಲವೂ ಸುಳ್ಳೆ. ಅವರು ಧರಿಸುವ ದೋತಿ, ಪಂಚೆ ಮಾತ್ರ ಕ್ಲೀನ್ ಆಗಿರಬಹುದು. ಅವರ ಕಾರ್ಯಭಾರವೆಲ್ಲವೂ ಸ್ವಚ್ಛವಾಗಿಲ್ಲ ಎಂಬುದಕ್ಕೆ ಮೈಸೂರು ಮುಡಾ ಪ್ರಕರಣವೇ ಸಾಕ್ಷಿಯಾಗಿದೆ. ಬೆಂಗಳೂರಿನ ಅರ್ಕಾವತಿ ಬಡಾವಣೆಯನ್ನು ಮುಚ್ಚಿ ಹಾಕಲು ರೀಡೋ ಪ್ರಕರಣವನ್ನು ಹರಿಯಬಿಟ್ಟು, ಲೋಕಾಯುಕ್ತವನ್ನು ಮುಚ್ಚಿ ಎಸಿಬಿಯನ್ನು ಅಸ್ತಿತ್ವಕ್ಕೆ ತಂದವರು ಇದೇ ಸಿದ್ದರಾಮಯ್ಯ ಅವರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಲೋಕಾಯುಕ್ತದಲ್ಲಿರುವ ಪ್ರಕರಣದ ಬಗ್ಗೆ ಕೇಳಿದರೆ, ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಈಶ್ವರಪ್ಪ, ಯಡಿಯೂರಪ್ಪನವರ ಮೇಲೆ ಪ್ರಕರಣಗಳಿಲ್ಲವೇ, ಅವರನ್ನೇಕೆ ಬಂಧಿಸಲಿಲ್ಲ. ಇದು ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹುನ್ನಾರವಾಗಿದೆ ಎಂದು ಹೇಳುತ್ತಾರೆ. ಯಡಿಯೂರಪ್ಪನವರ ಮೇಲೆ ಇಂತಹುದ್ದೇ ಗುರುತರ ಆರೋಪ ಬಂದಾಗ ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದನ್ನು ಸಿದ್ದರಾಮಯ್ಯ ಅವರು ಮರೆಯಬಾರದು ಎಂದು ಸವಾಲು ಹಾಕಿದ್ದಾರೆ.

ಯಡಿಯೂರಪ್ಪನವರು ನಡೆದುಕೊಂಡಂತೆ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರೂ ಸಹ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.