ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬರಗಾಲದ ಛಾಯೆ ಎದುರಾಗಿರುವ ಸಂದರ್ಭದಲ್ಲಿ ರೈತರು ನೀರಿಗಾಗಿ ಪರದಾಡುತ್ತಿರುವುದರ ನಡುವೆ, ತಾಲೂಕಿನ ನಾವಲಗಿ ಕುಲಹಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಸೀಮಿ ಲಕ್ಕಮ್ಮ ದೇವಸ್ಥಾನದ ಪಕ್ಕದ ವೆಂಕಟೇಶ್ವರ ಲಿಫ್ಟ್ ಇರಿಗೇಶನ್ ಕಾಲುವೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು ಶನಿವಾರ ಬೆಳಗ್ಗೆಯಿಂದ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬರಗಾಲದ ಛಾಯೆ ಎದುರಾಗಿರುವ ಸಂದರ್ಭದಲ್ಲಿ ರೈತರು ನೀರಿಗಾಗಿ ಪರದಾಡುತ್ತಿರುವುದರ ನಡುವೆ, ತಾಲೂಕಿನ ನಾವಲಗಿ ಕುಲಹಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಸೀಮಿ ಲಕ್ಕಮ್ಮ ದೇವಸ್ಥಾನದ ಪಕ್ಕದ ವೆಂಕಟೇಶ್ವರ ಲಿಫ್ಟ್ ಇರಿಗೇಶನ್ ಕಾಲುವೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು ಶನಿವಾರ ಬೆಳಗ್ಗೆಯಿಂದ ಕಂಡುಬಂದಿದೆ.

ವೆಂಕಟೇಶ್ವರ ಲಿಫ್ಟ್ ಇರಿಗೇಶನ್ ಕಾಲುವೆಯು ಸಂಜಯ ಚಂದರಗಿ ಫಾರ್ಮ್ಹೌಸ್‌ಗೆ ಹೋಗುವ ರಸ್ತೆಯುದ್ದಕ್ಕೂ ನೀರು ಪೋಲಾಗುತಿದ್ದು, ಶನಿವಾರ ಬೆಳಗ್ಗೆಯಿಂದಲೇ ಅಪಾರ ಪ್ರಮಾಣದ ನೀರು ಕಾಲುವೆಯಿಂದ ಹೊರಚೆಲ್ಲಿ ಪೋಲಾಗುತ್ತಿದೆ. ಇದರಿಂದ ಒಂದು ಕಡೆ ರೈತರು ನೀರಿಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ನೀರು ಪೋಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷ್ಣಾ ನದಿಯಿಂದ ಲಿಪ್ಟ್‌ ಮೂಲಕ ಅಪಾರ ಪ್ರಮಾಣದ ನೀರನ್ನು ರೈತರ ಹೊಲಗದ್ದೆಗಳಿಗೆ ಅನುಕೂಲವಾಗಲು ಈ ಯೋಜನೆ ರೂಪಿಸಿದ್ದು, ಆದರೆ ನೀರು ಇಲ್ಲಿ ಪೋಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಕಾಲುವೆಯಿಂದ ಪೋಲಾಗುತ್ತಿರುವ ನೀರನ್ನು ತಡೆದು, ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ರೈತರು ಆಗ್ರಹಿಸಿದ್ದಾರೆ.

ರೈತರು ಯಾವುದೇ ಕಾರಣಕ್ಕೂ ನೀರನ್ನು ಪೋಲು ಮಾಡದೆ, ಬೆಳೆಗಳಿಗೆ ಅಗತ್ಯವಿರುವಷ್ಟು ಮಾತ್ರ ಬಳಸಿಕೊಂಡು ಉತ್ತಮ ಇಳುವರಿ ಪಡೆಯಬೇಕು. ನೀರು ಅಮೂಲ್ಯವಾಗಿದ್ದು, ಅದರ ಸದ್ಬಳಕೆಯ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು ಎಂದು ನಾವಲಗಿ ಗ್ರಾಮದ ಪ್ರಗತಿಪರ ರೈತ ಮುಖಂಡ ಮಹೇಶ ಮರಡಿಮಠ ಮನವಿ ಮಾಡಿದ್ದಾರೆ.