ಸಾರಾಂಶ
ರಾಮನಗರ: ಚಿಕ್ಕಮಗಳೂರಿನಲ್ಲಿ ವಕೀಲನ ಮೇಲಿನ ಹಲ್ಲೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆ ಪೊಲೀಸರ ಕಾರ್ಯವೈಖರಿ ಜತೆಗೆ ಸಾರ್ವಜನಿಕರ ದುರ್ನಡತೆಯ ಮೇಲೂ ಹದ್ದಿನ ಕಣ್ಣಿಡಲು ಪೊಲೀಸ್ ಅಧಿಕಾರಿಗಳಿಗೆ ಬಾಡಿ ವೋರ್ನ್ ಕ್ಯಾಮೆರಾ ಕಡ್ಡಾಯಗೊಳಿಸಿದೆ.
ಮೊದಲ ಹಂತದಲ್ಲಿ 10 - 15 ಬಾಡಿ ವೋರ್ನ್ ಕ್ಯಾಮೆರಾಗಳನ್ನು ತರಿಸಿಕೊಳ್ಳಲಾಗಿದ್ದು, ಅವುಗಳನ್ನು ರಾಮನಗರ ಮತ್ತು ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಗಳಿಗೆ ಹಂಚಿಕೆ ಮಾಡಲಾಗಿದೆ. ಎಲ್ಲ ಪೊಲೀಸ್ ಠಾಣೆ ಹಾಗೂ ಹೈವೇ ಪೆಟ್ರೋಲ್ ವಾಹನಗಳಿಗೊಂದರಂತೆ ಕ್ಯಾಮೆರಾಗಳ ಅಗತ್ಯವಿದೆ. ಅನುದಾನ ನೋಡಿಕೊಂಡು ಉಳಿದ ಕ್ಯಾಮೆರಾಗಳನ್ನು ಖರೀದಿ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.ಈ ಕ್ಯಾಮೆರಾ ಪೊಲೀಸ್ ಅಧಿಕಾರಿಗಳ ಸಮವಸ್ತ್ರದ ಒಂದು ಭಾಗವಾಗಲಿದ್ದು, ಲಾಠಿ, ವಾಕಿಟಾಕಿ ಜೊತೆಯಲ್ಲೇ ಪೊಲೀಸರು ಕ್ಯಾಮೆರಾಗೆ ಹೊಂದುವುದು ಕಡ್ಡಾಯವಾಗಲಿದೆ. ದೇಹದ ಎದೆಯ ಭಾಗದಲ್ಲಿ ಶರ್ಟ್‌ಗೆ ಅಳವಡಿಸಿದ ಈ ಕ್ಯಾಮೆರಾಗಳು ಕರ್ತವ್ಯದ ವೇಳೆ ಸಂಭವಿಸುವ ಘಟನಾವಳಿಗಳನ್ನು ಸೆರೆ ಹಿಡಿಯಲು ಪೊಲೀಸರ ನೆರವಿಗೆ ಬರಲಿವೆ.
ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ:ಇನ್ನು ಸಂಚಾರ ನಿಯಮ ಉಲ್ಲಂಸಿಲ್ಲವೆಂದು ವಾದಕ್ಕೆ ಇಳಿದಲ್ಲಿ, ಪೊಲೀಸರು ಅನುಚಿತವಾಗಿ ವರ್ತಿಸಿದರೆ ಎಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತವೆ. ಕೆಲವೊಮ್ಮೆ ಪೊಲೀಸರು ಹಣ ಪಡೆಯುವುದನ್ನು ಮಾತ್ರ ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ. ಆದರೆ, ರಸೀದಿ ಕೊಡುವುದನ್ನು ಚಿತ್ರೀಕರಿಸಿರುವುದಿಲ್ಲ. ಇದು ಪೊಲೀಸರಿಗೆ ಕೆಟ್ಟ ಹೆಸರು ತರುವ ಪ್ರಯತ್ನವೂ ಆಗಿರುತ್ತದೆ. ಬಾಡಿ ಕ್ಯಾಮೆರಾದಲ್ಲಿ ಎಲ್ಲವೂ ಸೆರೆಯಾಗುವುದರಿಂದ ಯಾರೂ ತಪ್ಪಿಸಿಕೊಳ್ಳಲು ಅವಕಾಶವೇ ಇರುವುದಿಲ್ಲ. ಸಂಚಾರಿ ನಿಯಮ ಉಲ್ಲಂಘನೆ ಮಾತ್ರವಲ್ಲದೆ ಕೋಮುಗಲಭೆ, ಬಂದ್, ಮುಷ್ಕರದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವ ದುಷ್ಕರ್ಮಿಗಳ ವಿರುದ್ಧ ಸಾಕ್ಷಿ ಸಮೇತ ದಾಖಲೆ ಒದಗಿಸಲು ಹಾಗೂ ಇತರೆ ಸಂದರ್ಭಗಳಲ್ಲೂ ಈ ಕ್ಯಾಮೆರಾ ಹೆಚ್ಚು ಉಪಯೋಗಕಾರಿಯಾಗಲಿದೆ.
ಪೊಲೀಸ್ ಅಧಿಕಾರಿ ಕರ್ತವ್ಯಕ್ಕೆ ಹಾಜರಾದ ಸ್ಥಳದಲ್ಲಿ ನಡೆಯುವ ದೃಶ್ಯಗಳೂ ಇದರಲ್ಲಿ ಸೆರೆಯಾಗುತ್ತವೆ. ಅಲ್ಲದೆ, ಪೊಲೀಸ್ ಅಧಿಕಾರಿಯ ಧ್ವನಿ ಹಾಗೂ ಇತರರ ಧ್ವನಿ, ದೃಶ್ಯವೂ ಇದರಲ್ಲಿ ದಾಖಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕ್ಯಾಮೆರಾಗಳು 8 ಗಂಟೆ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ.ಕ್ಯಾಮೆರಾವನ್ನು ಬೇಕಾದ ದಿಕ್ಕುಗಳಿಗೆ ಕ್ಯಾಮೆರಾವನ್ನು ತಿರುಗಿಸಿಕೊಳ್ಳಲು ಅವಕಾಶವಿದ್ದು, ಇದಕ್ಕೆ ಸಂಬಂಧಿಸಿದ ಸರ್ವರ್ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿದ್ದು, ವಾರಕ್ಕೊಮ್ಮೆ ಈ ದೃಶ್ಯಗಳನ್ನು ಕ್ಯಾಮೆರಾದಿಂದ ಸರ್ವರ್‌ಗೆ ವರ್ಗಾಯಿಸಬಹುದು. 90 ದಿನ ದೃಶ್ಯಗಳನ್ನು ಉಳಿಸಿಕೊಳ್ಳುವುದಕ್ಕೆ ಅವಕಾಶ ಇರಲಿದೆ. ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯೊಂದಿಗೆ ಇದೂ ಪ್ರಮುಖ ಸಾಕ್ಷ್ಯ ಆಗಲಿದೆ ಎನ್ನುವುದು ಪೊಲೀಸರು ಹೇಳುವ ಮಾತಾಗಿದೆ.ಬಾಕ್ಸ್ ...........
ಬಾಡಿ ಕ್ಯಾಮೆರಾ ರಕ್ಷಣಾ ಅಸ್ತ್ರಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವ ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವ ಸಮಯದಲ್ಲಿ ಕೆಲವರು ಪೊಲೀಸರ ವಿರುದ್ಧವೇ ತಿರುಗಿ ಬೀಳುತ್ತಾರೆ. ಪ್ರಭಾವಿಗಳ ಹೆಸರು ಬಳಸಿ ದಂಡ ಪಾವತಿಸದೇ ಹೋಗುತ್ತಿದ್ದರು. ಆದರೆ, ಪೊಲೀಸರು ಬಾಡಿ ಕ್ಯಾಮೆರಾ ಬಳಸುವುದರಿಂದ ವಿಧಿ ಇಲ್ಲದೇ, ದಂಡ ಕಟ್ಟಬೇಕಿದೆ. ಮುಂದಿನ ದಿನಗಳಲ್ಲಿ ರಕ್ಷಣಾ ಅಸ್ತ್ರವಾಗಿ ಈ ಕ್ಯಾಮೆರಾ ಬಳಕೆಯಾಗಲಿದೆ ಎಂಬುದು ಪೊಲೀಸರ ಆಶಾಭಾವನೆಯಾಗಿದೆ.
ಬಾಕ್ಸ್ .............ವಿಡಿಯೋ ದೃಶ್ಯಗಳೇ ಪ್ರಮುಖ ಸಾಕ್ಷಿ
ಪೊಲೀಸರು ಯಾವುದೇ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಕ್ಯಾಮೆರಾದಲ್ಲಿನ ವೀಡಿಯೋ ಘಟನೆಗೆ ಪ್ರಮುಖ ಸಾಕ್ಷಿಯಾಗಲಿದೆ. ಅನೇಕ ಪ್ರಕರಣಗಳಲ್ಲಿ ಕೆಲ ಆರೋಪಿಗಳು ಪೊಲೀಸರ ಮುಂದೆ ನಿಜ ಒಪ್ಪಿಕೊಂಡರೂ, ನ್ಯಾಯಾಧೀಶರ ಮುಂದೆ ಪೊಲೀಸರ ಮೇಲೆ ಸುಳ್ಳು ಆರೋಪ ಮಾಡುತ್ತಾರೆ. ಇಂತಹ ಸಮಯದಲ್ಲಿ ವಿಡಿಯೋಗಳು ಪೊಲೀಸರ ರಕ್ಷಣೆಗೆ ನಿಲ್ಲಲಿದೆ. ಇದಲ್ಲದೇ, ಕೆಲ ಲಂಚಕೋರ ಪೊಲೀಸರಿಗೆ ಇದೇ ಕ್ಯಾಮೆರಾ ಸಿಂಹ ಸ್ವಪ್ನವಾಗಲಿದೆ. ಇನ್ನೊಂದೆಡೆ ಪೊಲೀಸರು ದಾಳಿ ನಡೆಸುವ ವೇಳೆ ಸಾಕ್ಷಿಗೆ ಈ ಮೊದಲು ಕ್ಯಾಮೆರಾ ಒಂದನ್ನು ಬಳಸಬೇಕಿತ್ತು. ಆದರೆ, ಈಗ ಎಲ್ಲವು ರೆರ್ಕಾಡ್ ಆಗುವುದರಿಂದ ಪೊಲೀಸರು ಇನ್ನಷ್ಟು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಬಹುದಾಗಿದೆ.ಬಾಕ್ಸ್ ..............ಕರಾರುವಕ್ಕಾಗಿ ಕಾರ್ಯನಿರ್ವಹಿಸುವ ಅನುಮಾನ
ಪೊಲೀಸ್ ಇಲಾಖೆಯಲ್ಲಿನ ಕೆಲ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ. ಅಸಭ್ಯ ಪದ ಬಳಕೆ ಮಾಡುತ್ತಾರೆ. ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವುದಿಲ್ಲ ಎಂಬಿತ್ಯಾದಿ ಆರೋಪಗಳಿವೆ. ಈ ಬಾಡಿ ಕ್ಯಾಮೆರಾದಲ್ಲಿ ಎಲ್ಲವು ರೆಕಾರ್ಡ್‌ಗೊಳ್ಳುವ ಹಿನ್ನೆಲೆಯಲ್ಲಿ ಕ್ಯಾಮೆರಾ ಧರಿಸುವ ಪೊಲೀಸರು ಜನಸ್ನೇಹಿಯಾಗಿ ವರ್ತಿಸಬಲ್ಲರು ಎಂಬ ನಿರೀಕ್ಷೆ ಇದೆ. ಆದರೆ, ಈ ಕ್ಯಾಮೆರಾ ಆನ್ ಅಂಡ್ ಆಫ್ ಮಾಡುವ ಅವಕಾಶ ಧರಿಸುವ ಅಧಿಕಾರಿಗಳಿಗೆ ಇರುವುದರಿಂದ ಎಷ್ಟರ ಮಟ್ಟಿಗೆ ಇದು ಕರಾರುವಕ್ಕಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.11ಕೆಆರ್ ಎಂಎನ್ 3,4.ಜೆಪಿಜಿ
3.ರಾಮನಗರ ಸಂಚಾರಿ ಠಾಣೆಯ ಎಎಸ್ಸೈ ಕೆ.ಬೀರಯ್ಯರವರು ಬಾಡಿ ವೋರ್ನ್ ಕ್ಯಾಮೆರಾ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದು.4.ಬಾಡಿ ವೋರ್ನ್ ಕ್ಯಾಮೆರಾ