ಸಾರಾಂಶ
ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಕಚೇರಿಯಲ್ಲಿ ಕೆಲ ವರ್ಷ ಹೊರಗುತ್ತಿಗೆ ಆಧಾರದಲ್ಲಿ ಸಹಾಯಕನಾಗಿದ್ದ ಕಳಕಪ್ಪ ನಿಡಗುಂದಿ ಪ್ರತಿ ತಿಂಗಳು ₹15 ಸಾವಿರ ವೇತನ ಪಡೆಯುತ್ತಿದ್ದ. ಆದರೆ, ಇತನ ನೂರಾರು ಕೋಟಿ ಆಸ್ತಿ ನೋಡಿದ ಲೋಕಾಯುಕ್ತ ಅಧಿಕಾರಿಗಳೇ ಬೆರಗಾಗಿದ್ದಾರೆ.
ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಕಚೇರಿಯಲ್ಲಿ ಕೆಲ ವರ್ಷ ಹೊರಗುತ್ತಿಗೆ ಆಧಾರದಲ್ಲಿ ಸಹಾಯಕನಾಗಿದ್ದ ಕಳಕಪ್ಪ ನಿಡಗುಂದಿ ಪ್ರತಿ ತಿಂಗಳು ₹15 ಸಾವಿರ ವೇತನ ಪಡೆಯುತ್ತಿದ್ದ. ಆದರೆ, ಇತನ ನೂರಾರು ಕೋಟಿ ಆಸ್ತಿ ನೋಡಿದ ಲೋಕಾಯುಕ್ತ ಅಧಿಕಾರಿಗಳೇ ಬೆರಗಾಗಿದ್ದಾರೆ.
ಈ ವಿಷಯ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕಸಗುಡಿಸುವ ಕೆಲಸಕ್ಕೆಂದು 2003ರಲ್ಲಿ ಸೇರಿಕೊಂಡು ಕಳಕಪ್ಪ ನಂತರ ಕಚೇರಿ ಸಹಾಯಕನಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ.
ಕೆಆರ್‌ಐಡಿಎಲ್‌ನಲ್ಲಿ ಅಧಿಕಾರಿಯಾಗಿ ಈಗ ನಿವೃತ್ತಿ ಆಗಿರುವವರ ಕೃಪೆಯಿಂದ ಕೊಪ್ಪಳ ತಾಲೂಕಿನ ನೆಲೋಗಿಪುರ ವಿಭಾಗದ ಕಚೇರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ದಾಖಲೆಯಲ್ಲಿ ಕಚೇರಿ ಸಹಾಯಕನಾಗಿದ್ದರೂ ಈತನೇ ಬಾಸ್ ಎನ್ನುವಂತೆ ಇದ್ದ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಈತನ ಆಸ್ತಿ ಗಳಿಕೆಯ ದಾರಿ ಸುಲಭವಾಯಿತು ಎಂಬ ಚರ್ಚೆಯೂ ನಡೆಯುತ್ತಿದೆ.
ಹಣ ಎತ್ತುವಳಿ ಮಾಡಿ ಕೋಟ್ಯಂತರ ರು. ಆಸ್ತಿ ಖರೀದಿಸಿದ್ದಾನೆ ಎಂದು ಆರೋಪಿಸಲಾಗುತ್ತಿದೆ.
ದೇವರ ದೇಣಿಗೆಗೂ ಸರ್ಕಾರ ದುಡ್ಡು:
ತಮ್ಮೂರು ಬಂಡಿಹಾಳ ಗ್ರಾಮದ ಕರಿಬಸವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಕಳಕಪ್ಪ ನಿಡಗುಂದಿ ನೀಡಿರುವ ದೇಣಿಗೆಯ ಕುರಿತು ಅಪಸ್ವರ ಎದ್ದಿದೆ. ಗ್ರಾಮಸ್ಥರು ಹೇಳುವ ಪ್ರಕಾರ ₹5 ಲಕ್ಷ ದೇಣಿಗೆ ನೀಡಿದ್ದೇನೆ ಎಂದು ಹೇಳಿದ್ದಾನೆ. ಈ ದೇವಸ್ಥಾನಕ್ಕೂ ಹಾಕಿದ ₹50 ಲಕ್ಷ ಅನುದಾನದ ಕುರಿತು ನಾನಾ ವದಂತಿಗಳು ಇವೆ.