ಸಾರಾಂಶ
ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಸೇರಿ ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿ ಪತ್ತೆ ಹಚ್ಚಿದ್ದಾರೆ.
ಬೆಂಗಳೂರು ನಗರ, ಮೈಸೂರು ನಗರ, ಕಲಬುರಗಿ, ತುಮಕೂರು, ಕೊಪ್ಪಳ ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳು ಸೇರಿ 41 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು ₹37.41 ಕೋಟಿ ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ.
ದಾಳಿಗೊಳಗಾದ ಎಂಟು ಮಂದಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳ ವಿವರ:
ಬೆಂಗಳೂರಿನ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ-ರೈಡ್) ವಿಶೇಷ ಉಪ ಆಯುಕ್ತೆ ಡಾ.ಬಿ.ವಿ.ವಾಸಂತಿ ಅಮರ್, ಬಿಬಿಎಂಪಿ ಸಿ.ವಿ.ರಾಮನ್ ನಗರದ ಕಾರ್ಯಕಾರಿ ಅಭಿಯಂತರ ಎಚ್.ವಿ.ಯರ್ರಪ್ಪ ರೆಡ್ಡಿ, ಬೆಂಗಳೂರಿನ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ, ಮೈಸೂರು ಮಹಾನಗರ ಪಾಲಿಕೆ ಕಚೇರಿ ಸಹಾಯಕ(ಆಡಳಿತ) ಬಿ.ವೆಂಕಟರಾಮ, ಕೆಐಎಡಿಬಿ ತುಮಕೂರು ವಿಭಾಗದ ಕಚೇರಿ ಸಹಾಯಕ ಕಾರ್ಯಕಾರಿ ಅಭಿಯಂತರ ಎಂ.ರಾಜೇಶ್, ಕಲಬುರಗಿ ಕುಟುಂಬ ಮತ್ತು ಕಲ್ಯಾಣ ಕಚೇರಿ ಇಂಜಿನಿಯರಿಂಗ್ ವಿಭಾಗದ ಕಾರ್ಯಕಾರಿ ಅಭಿಯಂತರ ಸುನೀಲ್ ಕುಮಾರ್, ಕೊಪ್ಪಳದ ಜಿಲ್ಲಾ ಕೈಗಾರಿಕೆಗಳ ಕೇಂದ್ರದ(ಡಿಐಸಿ) ಸಹಾಯಕ ನಿರ್ದೇಶಕ ಷೇಕು ಚವ್ಹಾಣ್, ಮಡಿಕೇರಿಯ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀಪನೋಪಾಯ ಇಲಾಖೆ ಜಂಟಿ ನಿರ್ದೇಶಕ ಎಂ.ಮಂಜುನಾಥಸ್ವಾಮಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ.
ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?
1.ಡಾ। ಬಿ.ವಿ.ವಾಸಂತಿ ಅಮರ್: 5 ಕಡೆ ದಾಳಿ, 3 ನಿವೇಶನ, 4 ವಾಸದ ಮನೆಗಳು, 3 ಎಕರೆ ಕೃಷಿ ಜಮೀನು, ₹66 ಸಾವಿರ ನಗದು, ₹12 ಲಕ್ಷ ಮೌಲ್ಯದ ಚಿನ್ನ, ₹90 ಲಕ್ಷ ಮೌಲ್ಯದ ವಾಹನಗಳು, ₹60 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿದಂತೆ ಒಟ್ಟು ₹9.02 ಕೋಟಿ ಆಸ್ತಿ ಪತ್ತೆ.
2.ಎಚ್.ವಿ.ಯರ್ರಪ್ಪ ರೆಡ್ಡಿ: 3 ಕಡೆ ದಾಳಿ, 2 ನಿವೇಶನ, 1 ವಾಸದ ಮನೆ, ₹93 ಸಾವಿರ ನಗದು, ₹94 ಲಕ್ಷ ಮೌಲ್ಯದ ಚಿನ್ನ, ₹22 ಲಕ್ಷ ಮೌಲ್ಯದ ವಾಹನಗಳು ಸೇರಿ ಒಟ್ಟು ₹2.62 ಕೋಟಿ ಆಸ್ತಿ ಪತ್ತೆ.
3.ಬಾಗ್ಲಿ ಮಾರುತಿ: 10 ಕಡೆ ದಾಳಿ, 8 ನಿವೇಶನಗಳು, 5 ವಾಸದ ಮನೆ, 19 ಎಕರೆ ಕೃಷಿ ಜಮೀನು ₹1.30 ಲಕ್ಷ ನಗದು, ₹77.76 ಲಕ್ಷ ಮೌಲ್ಯದ ಚಿನ್ನಾಭರಣ, ₹42 ಲಕ್ಷ ಮೌಲ್ಯದ ವಾಹನಗಳು, ₹10 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, ₹18.39 ಲಕ್ಷ ಮೌಲ್ಯದ ದುಬಾರಿ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು ₹6.34 ಕೋಟಿ ಆಸ್ತಿ ಪತ್ತೆ.
4.ಬಿ.ವೆಂಕಟರಾಮ: 5 ಕಡೆ ದಾಳಿ, 3 ವಾಸದ ಮನೆಗಳು, 2.2 ಎಕರೆ ಕೃಷಿ ಜಮೀನು, ₹2 ಲಕ್ಷ ನಗದು, ₹37 ಲಕ್ಷ ಮೌಲ್ಯದ ಚಿನ್ನಾಭರಣ, ₹43.60 ಲಕ್ಷ ಮೌಲ್ಯದ ವಾಹನಗಳು, ₹32.72 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು ₹3.71 ಕೋಟಿ ಆಸ್ತಿ ಪತ್ತೆ.
5.ಎಂ.ರಾಜೇಶ್: 6 ಕಡೆ ದಾಳಿ, 3 ನಿವೇಶನ, 2 ವಾಸದ ಮನೆ, 5.6 ಎಕರೆ ಕೃಷಿ ಜಮೀನು, ₹6.46 ಲಕ್ಷ ನಗದು, ₹85.04 ಲಕ್ಷ ಮೌಲ್ಯದ ಚಿನ್ನಾಭರಣ, ₹18.09 ಮೌಲ್ಯದ ವಾಹನಗಳು, ₹48 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಸೇರಿ ಒಟ್ಟು ₹3.67 ಕೋಟಿ ಆಸ್ತಿ ಪತ್ತೆ.
6.ಸುನೀಲ್ ಕುಮಾರ್: 4 ಕಡೆ ದಾಳಿ, 3 ನಿವೇಶನಗಳು, 1 ವಾಸದ ಮನೆಗಳು, 5.35 ಎಕರೆ ಕೃಷಿ ಜಮೀನು, ₹15.75 ಲಕ್ಷ ನಗದು, ₹1.26 ಕೋಟಿ ಮೌಲ್ಯದ ಚಿನ್ನ, ₹12.50 ಲಕ್ಷ ಮೌಲ್ಯದ ವಾಹನಗಳು, ₹89.38 ಲಕ್ಷ ಮೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟು ₹4.34 ಕೋಟಿ ಆಸ್ತಿ ಪತ್ತೆ.
7.ಷೇಕು ಚೌವ್ಹಾಣ್: 4 ಕಡೆ ದಾಳಿ, 13 ನಿವೇಶನಗಳು, 3 ವಾಸದ ಮನೆಗಳು, 7.28 ಎಕರೆ ಕೃಷಿ ಜಮೀನು, ₹52.49 ಲಕ್ಷ ನಗದು, ₹61.11 ಲಕ್ಷ ಮೌಲ್ಯದ ಚಿನ್ನ, ₹12 ಲಕ್ಷ ಮೌಲ್ಯದ ವಾಹನಗಳು, ₹12.49 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಸೇರಿ ಒಟ್ಟು ₹3.11 ಕೋಟಿ ಮೌಲ್ಯದ ಆಸ್ತಿ ಪತ್ತೆ.
8.ಎಂ.ಮಂಜುನಾಥಸ್ವಾಮಿ: 4 ಕಡೆ ದಾಳಿ, 3 ನಿವೇಶನಗಳು, 2 ವಾಸದ ಮನೆ, 4 ಎಕರೆ ಕೃಷಿ ಜಮೀನು, ₹2.27 ಲಕ್ಷ ನಗದು, ₹46.04 ಲಕ್ಷ ಮೌಲ್ಯದ ಚಿನ್ನಾಭರಣ, ₹17 ಲಕ್ಷ ಮೌಲ್ಯದ ವಾಹನಗಳು, ₹10 ಲಕ್ಷ ಬೆಲೆಬಾಳುವ ವಸ್ತುಗಳು ಸೇರಿ ಒಟ್ಟು ₹5.20 ಕೋಟಿ ಆಸ್ತಿ ಪತ್ತೆ.