ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಈ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ಉದ್ದಾನ ಶಿವಯೋಗಿಗಳು ಆರಂಭಿಸಿದ ಈ ಜಾತ್ರೆಯನ್ನು ಶಿವಕುಮಾರ ಸ್ವಾಮೀಜಿ ಕೃಷಿ ಮತ್ತು ಕೈಗಾರಿಕೆಗಳ ಮಾಹಿತಿ ನೀಡಲು ವಸ್ತು ಪ್ರದರ್ಶನ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ವಸ್ತು ಪ್ರದರ್ಶನ ನಡೆಯುತ್ತಿದೆ. ಜಾನುವಾರುಗಳ ಕ್ರಯ, ವಿಕ್ರಯಕ್ಕೆ ಸಿದ್ದಗಂಗಾ ಜಾತ್ರೆ ಒಂದು ಉತ್ತಮ ವೇದಿಕೆಯಾಗಿದೆ.

ಕನ್ನಡಪ್ರಭ ವಾರ್ತೆ, ತುಮಕೂರು

ಸಿದ್ದಗಂಗಾ ವಸ್ತು ಪ್ರದರ್ಶನದಲ್ಲಿ ಯುವಜನರಿಗೆ, ರೈತರಿಗೆ ಮತ್ತು ಸಾರ್ವಜನಿಕರಿಗೆ ಕಲಿಯುವಂತಹ ಸಾಕಷ್ಟು ವಿಚಾರಗಳಿದ್ದು, ಜನರು ಕುಟುಂಬ ಸಮೇತ ಬಂದು ಇಂತಹ ವಸ್ತು ಪ್ರದರ್ಶನವನ್ನು ನೋಡಿ ಆನಂದಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ ತಿಳಿಸಿದ್ದಾರೆ.

ಸಿದ್ದಗಂಗಾ ಮಠದ ವತಿಯಿಂದ ಆಯೋಜಿಸಿದ್ದ 64ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಸ್ತು ಪ್ರದರ್ಶನದಲ್ಲಿ ಅರ್ಟಿಪಿಷಿಯಲ್ ಇಂಟಲಿಜೆನ್ಸ್ ಹಾಗೂ ಇನ್ನಿತರ ಅತ್ಯಾಧುನಿಕ ವಿಷಯಗಳ ಕುರಿತು ಮಕ್ಕಳು ಪ್ರಾತಕ್ಷಿಕಗಳನ್ನು ರಚಿಸಿ, ಅದನ್ನು ಬಂದವರಿಗೆ ವಿವರಿಸುವ ಮೂಲಕ ತಾವು ಕಲಿತು, ಇತರರಿಗೂ ಕಲಿಸುವ ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ಇದು ಸಂತೋಷ ತರುವ ಕೆಲಸ ಎಂದು ಹೇಳಿದರು.

ಕಳೆದ ವರ್ಷ ನಾನು ನನ್ನ ಮಕ್ಕಳೊಂದಿಗೆ ವಸ್ತು ಪ್ರದರ್ಶನದ ಪ್ರತಿ ಮಳಿಗೆಗೆ ಹೋಗಿ, ಅಲ್ಲಿನ ಮಾಹಿತಿ ತಿಳಿದುಕೊಳ್ಳುವ ಮೂಲಕ ಸರ್ಕಾರ ಜನರಿಗಾಗಿ ಏನೇನು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಉಪಯೋಗಗಳೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ನನ್ನ ಹಾಗೆಯೇ ಸಾರ್ವಜನಿಕರು ಸಹ ತಮ್ಮ ಕುಟುಂಬದೊಂದಿಗೆ ಭೇಟಿ ನೀಡಿ ಮಕ್ಕಳಿಗೆ ಮಾಹಿತಿ ಒದಗಿಸುವ ಕೆಲಸ ಮಾಡಬೇಕೆಂದು ಶುಭ ಕಲ್ಯಾಣ ತಿಳಿಸಿದರು.ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ನಗರ ಶಾಸಕ ಜಿ.ಬಿ.ಜೋತಿಗಣೇಶ್, ಆರು ದಶಕಗಳ ಹಿಂದೆ ಡಾ. ಶಿವಕುಮಾರ ಸ್ವಾಮೀಜಿ ಜನರಿಗೆ ಮಾಹಿತಿ ನೀಡುವ ಸಲುವಾಗಿ ಆರಂಭಿಸಿದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಶ್ರೀಮಠ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ, ಸಾರ್ವಜನಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ. ಕೃಷಿ ಮತ್ತು ಇತರೆ ಕ್ಷೇತ್ರಗಳಲ್ಲಿ ಆಗಿರುವ ಹೊಸ ಹೊಸ ಬೆಳೆವಣಿಗೆ ಕುರಿತು ಜನರಿಗೆ ಮಾಹಿತಿ ಜೊತೆಗೆ ಮಾರ್ಗದರ್ಶನ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಇದರ ಉಪಯೋಗವನ್ನು ಜನರು ಪಡೆದುಕೊಳ್ಳುವ ಮೂಲಕ ಅವರು ಆರಂಭಿಸಿದ ವಸ್ತು ಪ್ರದರ್ಶನವನ್ನು ಯಶಸ್ವಿಗೊಳಿಸಬೇಕೆಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಈ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ಉದ್ದಾನ ಶಿವಯೋಗಿಗಳು ಆರಂಭಿಸಿದ ಈ ಜಾತ್ರೆಯನ್ನು ಶಿವಕುಮಾರ ಸ್ವಾಮೀಜಿ ಕೃಷಿ ಮತ್ತು ಕೈಗಾರಿಕೆಗಳ ಮಾಹಿತಿ ನೀಡಲು ವಸ್ತು ಪ್ರದರ್ಶನ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ವಸ್ತು ಪ್ರದರ್ಶನ ನಡೆಯುತ್ತಿದೆ. ಜಾನುವಾರುಗಳ ಕ್ರಯ, ವಿಕ್ರಯಕ್ಕೆ ಸಿದ್ದಗಂಗಾ ಜಾತ್ರೆ ಒಂದು ಉತ್ತಮ ವೇದಿಕೆಯಾಗಿದೆ. ಕೋವಿಡ್ ಕಾಲದಲ್ಲಿಯೂ ಜಾತ್ರೆ ನಿಂತಿಲ್ಲ ಎಂಬುದೇ ವಿಶೇಷ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕಗಳ ಮನರಂಜನೆಯ ಜೊತೆಗೆ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕೃಷಿ ಇಲ್ಲದೆ ಬದುಕು ಇಲ್ಲ. ಹಳ್ಳಿಗಾಡಿನ ಜನರಿಗೆ ಕೃಷಿ ಬಗ್ಗೆ ಕೊಂಚ ಅರಿವು ಇದೆ. ಆದರೆ ನಗರ ಪ್ರದೇಶದ ಜನರಿಗೆ ಕೃಷಿ ಬಗ್ಗೆ ಸ್ವಲ್ಪವೂ ತಿಳಿವಳಿಕೆ ಇಲ್ಲ. ಭತ್ತ ಬೆಳೆಯುವುದರಲ್ಲಿ ಭಾರತ ಚೀನಾ ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ. ಇದು ಹೆಮ್ಮೆ ಪಡುವ ವಿಚಾರ. ಇಂತಹ ಹಲವಾರು ವಿಷಯಗಳನ್ನು ಈ ಕೃಷಿ ವಸ್ತು ಪ್ರದರ್ಶನದಲ್ಲಿ ತಿಳಿಯಬಹುದಾಗಿದೆ ಎಂದು ಹೇಳಿದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶರಾದ ನೂರುನ್ನಿಸಾ ಅವರು ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಈ ವೇಳೆ ಸಿದ್ದಗಂಗಾ ವಿದ್ಯಾಸಂಸ್ಥೆಯ ಸಿಇಒ ಜಯ ವಿಭವ ಸ್ವಾಮಿ, ವಸ್ತು ಪ್ರದರ್ಶನ ಟ್ರಸ್ಟನ ಕಾರ್ಯದರ್ಶಿ ಪ್ರೊ.ಬಿ. ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಎಸ್. ಶಿವಕುಮಾರ್, ಕೆ.ಬಿ. ರೇಣುಕಯ್ಯ, ಸಾಂಸ್ಕೃತಿಕ ಸಂಚಾಲಕರಾದ ಉಮಾ ಮಹೇಶ್, ಸಹ ಸಂಚಾಲಕ ಎಂ. ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.