ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ನಗರದಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ತಾಲೂಕು ಆಡಳಿತ ಸೌಧ ಕ್ಷರಶಃ ಕೆರೆಯಾಗಿ ಮಾರ್ಪಟ್ಟಿತ್ತು. ಕಟ್ಟಡದ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಯೇ ಇದಕ್ಕೆ ಕಾರಣ ಎಂಬ ಟೀಕೆ ವ್ಯಕ್ತವಾಗಿದೆ. ೨೦೧೮ರಲ್ಲಿ ಕೆಜಿಎಫ್ ಪ್ರತ್ಯೇಕ ತಾಲೂಕು ಮಾನ್ಯತೆ ಪಡೆದುಕೊಂಡ ಬಳಿಕ ಅದೇ ವರ್ಷ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದ ರೂಪಕಲಾ ಶಶಿಧರ್ ಸುಮಾರು ೮ ಕೋಟಿ ರು.ಗಳ ವೆಚ್ಚದಲ್ಲಿ ಇಡೀ ಜಿಲ್ಲೆಗೆ ಮಾದರಿಯೆನಿಸುವ ಹಾಗೆ ಮೂರು ಅಂತಸ್ತುಗಳ ಭವ್ಯವಾದ ತಾಲೂಕು ಆಡಳಿತ ಸೌಧವನ್ನು ನಿರ್ಮಾಣ ಮಾಡಿಸಿದ್ದಾರೆ. ಚರಂಡಿ ನಿರ್ಮಾಣ ಅವೈಜ್ಞಾನಿಕ
ಆದರೆ ಮಿನಿ ವಿಧಾನಸೌಧದ ಸುತ್ತ ಚರಂಡಿ ನಿರ್ಮಾಣ ವೈಜ್ಞಾನಿಕ ರೀತಿಯಲ್ಲಿ ಮಾಡಿರುವ ಕಾರಣ ಸಣ್ಣ ಮಳೆ ಬಂದರೂ ಕಟ್ಟಡದ ಆವರಣದ ಮುಖ್ಯ ದ್ವಾರದಲ್ಲಿ ಮೊಣಕಾಲುದ್ದದ ನೀರು ತುಂಬಿಕೊಂಡು ಕೆರೆಯಂತಾಗುತ್ತದೆ. ಅಲ್ಲದೇ ಇಡೀ ಕಟ್ಟಡದ ಆವರಣದಲ್ಲಿನ ಮಣ್ಣು ಮುಖ್ಯ ದ್ವಾರದಲ್ಲಿ ಸಂಗ್ರಹವಾಗುತ್ತದೆ. ಈ ಹಿಂದೆಯೂ ಮಳೆ ಬಂದಾಗ ಮುಖ್ಯ ದ್ವಾರದ ಮುಂಭಾಗ ಕೆಸರುಮಯವಾಗಿದ್ದು, ಆಗ ನಗರಸಭೆಯಿಂದ ಸ್ವಚ್ಛಗೊಳಿಸಲಾಯಿತು. ಇದೀಗ ಕಳೆದ ಒಂದು ವಾರದಿಂದ ಪ್ರತಿನಿತ್ಯ ಮಳೆ ಬೀಳುತ್ತಿದೆ. ತಾಲೂಕು ಕಚೇರಿಯ ಮುಖ್ಯ ದ್ವಾರದಲ್ಲಿ ನೀರು ತುಂಬಿಕೊಳ್ಳುತ್ತಿದೆ. ತಾಲೂಕು ಆಡಳಿತ ಸೌಧದಲ್ಲಿ ಒಂದೇ ಸೂರಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪ ನೊಂದಣಾಧಿಕಾರಿ ಕಚೇರಿ ಮತ್ತಿತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿ ಒಳಗೆ ಹೋಗಲು ಪರದಾಡುವಂತಾಗಿದೆ.ಸಾರ್ವಜನಿಕರಿಗೂ ತೊಂದರೆ
ಕಚೇರಿಗಳಿಗೆ ಪ್ರತಿನಿತ್ಯ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ದೃಢೀಕರಣ ಪ್ರಮಾಣ ಪತ್ರ, ಜನನ ಮತ್ತು ಮರಣ ಪ್ರಮಾಣ ಪತ್ರ, ಪಡಿತರ ಚೀಟಿ, ಭಾಗ್ಯಲಕ್ಷ್ಮಿ ಯೋಜನೆ, ಜಮೀನು, ನಿವೇಶನ ಮೊದಲಾದವುಗಳ ಕ್ರಯ ವಿಕ್ರಯ ಮೊದಲಾದ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ತಾಲೂಕು ಆಡಳಿತ ಸೌಧ ಒಳಗೆ ಪ್ರವೇಶಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತೊಂದರೆ ಅನುಭವಿಸುವಂತಾಗಿದೆ.ಚರಂಡಿಗಳ ನೀರು ರಸ್ತೆಗೆತಾಲೂಕು ಕಚೇರಿ ಸುತ್ತಮುತ್ತಲಿನ ಚರಂಡಿ, ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಮಳೆ ನೀರು ಚರಂಡಿಗಳಲ್ಲಿ ಹರಿಯದೇ ರಸ್ತೆಗಳಲ್ಲೇ ಹರಿಯುತ್ತದೆ. ರಸ್ತೆಗಳೇ ಚರಂಡಿಗಳಂತಾಗಿದೆ. ಇದರಿಂದ ರಸ್ತೆಗಳು ಮೂರು ದಿನಕ್ಕೆ ಹಾಳಾಗುವುದಲ್ಲದೇ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ನಗರದಾದ್ಯಂತ ಚರಂಡಿಗಳನ್ನು ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹೋಗಲು ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ಪ್ರತಿ ವರ್ಷ ಚರಂಡಿಗಳ ಹೂಳು ತೆರವು ಹಾಗೂ ಜಂಗಲ್ ಕಟ್ಟಿಂಗ್ ನಡೆಸುವ ಕಾರ್ಯವನ್ನು ನಗರಸಭೆ ಮಾಡುತ್ತಿಲ್ಲ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಮಾಡಿರುವ ಚರಂಡಿಗಳಿಗೆ ಮಳೆ ನೀರು ಹರಿಯುವುದೇ ಇಲ್ಲ. ಪರಿಣಾಮವಾಗಿ ರಸ್ತೆಗಳಲ್ಲೇ ನೀರು ಹರಿಯುವಂತಾಗಿದೆ.