ಗೋಪಾಲನಹಳ್ಳಿ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ ಹಿಂದೆ ನಮ್ಮ ಪೂರ್ವಿಕರು ನೀರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಪ್ರಸ್ತುತ ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ತಾಲೂಕಿನ ಶೆಟ್ಟೀಕೆರೆ ಹೋಬಳಿಯ ಗೋಪಾಲನಹಳ್ಳಿ ಗ್ರಾಮದಲ್ಲಿ ನವೋದಯ ಕಾಲೇಜಿನಿಂದ ಆಯೋಜಿಸಿದ್ದ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹಿಂದೆ ನಮ್ಮ ಪೂರ್ವಿಕರು ಮಣ್ಣಿನ ಮಾಳಿಗೆ ಮನೆಗಳಲ್ಲಿ ವಾಸಿಸುತ್ತಾ ಬಾವಿಗಳಿಂದ ನೀರು ಸೇದಿಕೊಂಡು ಮನೆಗಳಿಗೆ ಪ್ರತಿನಿತ್ಯ ತರುತ್ತಿದ್ದರು. ಆಗ 50 ರಿಂದ 60 ಲೀಟರ್ ನಷ್ಟು ನೀರು ಮಿತವಾಗಿ ಬಳಕೆಯಾಗುತ್ತಿತ್ತು. ಆದರೆ, ಪ್ರಸ್ತುತ ಸಮಾಜದಲ್ಲಿ ನಾಗರಿಕತೆ ಬೆಳೆದು ಮೋಲ್ಡಿಂಗ್ ಗೃಹ ನಿರ್ಮಾಣ ಮಾಡಿಕೊಳ್ಳಲಾಗುತ್ತಿದೆ. ಮನೆಗಳಲ್ಲಿ ಕಮೋಲ್ಡ್ ಶೌಚಾಲಯಗಳ ಬಳಕೆ ಮಾಡುತ್ತಿರುವುದರಿಂದ ಒಮ್ಮೆಗೆ ಕನಿಷ್ಠ 10 ಲೀಟರ್ ನೀರು ಬಳಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ನಿತರೆ ಲೆಕ್ಕಾಚಾರದಲ್ಲಿ ಕನಿಷ್ಠ 500 ರಿಂದ 600 ಲೀಟರ್ ನೀರು ಬಳಕೆಯಾಗುತ್ತಿದೆ. ನೀರು ಅಮೂಲ್ಯವಾದುದ್ದು, ನೀರನ್ನು ಬಳಸುವ ಜೊತೆಗೆ ಪ್ರಕೃತಿಯಲ್ಲಿ ನೀರು ಸಂರಕ್ಷಣೆ ಮತ್ತು ಅಂತರ್ ಜಲ ವೃದ್ಧಿಗೆ ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ಗ್ರಾಮದಲ್ಲಿ ನಡೆಯುವ ಎನ್ಎಸ್ಎಸ್ ಶಿಬಿರಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನ ಮಾಡಿ ಗ್ರಾಮವನ್ನು ಸ್ವಚ್ಛಗೊಳಿಸಿ ಪರಿಸರ ಕಾಪಾಡುತ್ತಾರೆ, ಶಿಬಿರ ಮುಗಿದ ನಂತರವೂ ಗ್ರಾಮದ ಜನರು ಸ್ವಚ್ಛತಾ ನಿರ್ವಹಣೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಶಿಬಿರದಲ್ಲಿ ವಿಶೇಷವಾಗಿ ಈ ಬಾರಿ ಒಂದೊಂದು ದಿನದಲ್ಲಿ ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಪಶುಸಂಗೋಪನೆ ಇಲಾಖೆ, ಪೊಲೀಸ್ ಇಲಾಖೆಯಿಂದ ಅರಿವು ಮತ್ತು ನ್ಯಾಯಾಧೀಶರಿಂದ ಕಾನೂನು ಅರಿವು ಕಾರ್ಯಕ್ರಮ ನೀಡಲಾಗಿದೆ ಎಂದರು.ನವೋದಯ ವಿದ್ಯಾಸಂಸ್ಥೆಯ ಖಜಾಂಚಿ ಟಿ.ಶಂಕರಲಿಂಗಪ್ಪˌ ಎಸ್ಎಂಎಸ್ ಕಾಲೇಜಿನ ಪ್ರಾಂಶುಪಾಲ ಎಸ್.ಸಿ.ದಿನೇಶ್ˌ ನವೋದಯ ಕಾಲೇಜಿನ ಪ್ರಾಂಶುಪಾಲ ಸಿ.ರವಿಕುಮಾರ್ ˌಉಪನ್ಯಾಸಕ ರಘು ಮಾತನಾಡಿದರು. ಶಿಬಿರದ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕ ಸದಾನಂದ್, ಶಿಬಿರದ ಅಧಿಕಾರಿ ಡಾ.ವಿ .ಶ್ರೀನಿವಾಸ್, ಕಾರ್ಯಕ್ರಮಾಧಿಕಾರಿ ಡಾ.ಎಸ್.ಡಿ.ಚಂದ್ರಶೇಖರ್, ಗ್ರಾಮದ ಸಿದ್ದಯ್ಯ ಇದ್ದರು.