ಜಲಸಂರಕ್ಷಣೆ: ಮಂಡ್ಯ ಜಿಪಂಗೆ ರಾಷ್ಟ್ರೀಯ ಪ್ರಶಸ್ತಿ ಗರಿ..!

| Published : Oct 05 2025, 01:00 AM IST

ಜಲಸಂರಕ್ಷಣೆ: ಮಂಡ್ಯ ಜಿಪಂಗೆ ರಾಷ್ಟ್ರೀಯ ಪ್ರಶಸ್ತಿ ಗರಿ..!
Share this Article
  • FB
  • TW
  • Linkdin
  • Email

ಸಾರಾಂಶ

ಜಲ ಸಂಚಾಯಿ ಜನ ಭಾಗಿದಾರಿ ಅಭಿಯಾನದಡಿ ರಾಜ್ಯಗಳನ್ನು 5 ವಲಯಗಳಾಗಿ ವಿಂಗಡಿಸಲಾಗಿದೆ. ಮೂರನೇ ವಲಯದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿವೆ. ಈ ಪೈಕಿ ಕರ್ನಾಟಕ ರಾಜ್ಯದ 7 ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದ್ದು, ಮೈಸೂರು ವಿಭಾಗದ ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಲ ಸಂರಕ್ಷಣೆ ಕಾಮಗಾರಿಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ಮಂಡ್ಯ ಜಿಲ್ಲಾ ಪಂಚಾಯ್ತಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಜಲಮೂಲಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಚಟುವಟಿಕೆಗಳನ್ನು ಯಶಸ್ವಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕೆ ಪ್ರಶಸ್ತಿ ಜೊತೆಗೆ 25 ಲಕ್ಷ ರು. ನಗದು ಬಹುಮಾನನೀಡಲಾಗುತ್ತಿದೆ.

ಜಲ ಸಂಚಾಯಿ ಜನ ಭಾಗಿದಾರಿ ಅಭಿಯಾನದಡಿ ರಾಜ್ಯಗಳನ್ನು 5 ವಲಯಗಳಾಗಿ ವಿಂಗಡಿಸಲಾಗಿದೆ. ಮೂರನೇ ವಲಯದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿವೆ. ಈ ಪೈಕಿ ಕರ್ನಾಟಕ ರಾಜ್ಯದ 7 ಜಿಲ್ಲೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದ್ದು, ಮೈಸೂರು ವಿಭಾಗದ ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ಜಲ ಸಂರಕ್ಷಣೆ ಹಾಗೂ ಮಳೆ ನೀರು ಸಂಗ್ರಹಣೆಯಂತಹ ಚಟುವಟಿಕೆಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಬಲಪಡಿಸುವುದು ಅಭಿಯಾನದ ಉದ್ದೇಶ. ಜನರಿಗೆ ನೀರಿನ ಮಹತ್ವ, ನೀರಿನ ಸಂರಕ್ಷಣೆ, ವಿಧಾನಗಳ ಬಗ್ಗೆ ಅರಿವು ಮೂಡಿಸುವಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ.

‘ನೀರಿಗಾಗಿ ಒಂದಾಗಿ, ಪ್ರತಿ ಹನಿ ನೀರನ್ನು ಸಂರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಜಲಸಂಚಯ ಜನ ಭಾಗಿದಾರಿ 1.0 ಅಭಿಯಾನವು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು, ಮಳೆ ನೀರನ್ನು ಸಂಗ್ರಹಿಸುವುದು, ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು, ಹವಾಮಾನ ಸ್ಥಿತಿಗತಿಯನ್ನು ಉತ್ತೇಜಿಸುವುದು ಮತ್ತು ನೀರಿನ ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ.

ನೀರಿನ ಕೊರತೆ ನಿವಾರಿಸುವುದು, ಮಳೆ ನೀರನ್ನು ಹರಿಯುವಂತೆ ಮಾಡುವುದು, ಹರಿಯುವ ನೀರನ್ನುತಡೆಯುವುದು, ತಡೆದ ನೀರನ್ನು ಇಂಗಿಸುವುದು, ಜಲ ಸಂಪನ್ಮೂಲಗಳ ಸಂರಕ್ಷಣೆ, ಮರುಸ್ಥಾಪನೆ, ಮರುಬಳಕೆಗೆ ಉತ್ತೇಜನ, ಅಮೃತ ಸರೋವರಗಳ ರಚನೆ ಮತ್ತು ನವೀಕರಣದ ಮೂಲಕ ನೀರಿನ ಸಂಗ್ರಹಣೆ ಹೆಚ್ಚಿಸುವುದು ಜಲಶಕ್ತಿ ಅಭಿಯಾನದ ಉದ್ದೇಶವಾಗಿದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಇತರೆ ಯೋಜನೆಗಳಡಿ ಜಿಲ್ಲೆಯು 2024ರ ಏಪ್ರಿಲ್ 1 ರಿಂದ 2025 ರ ಮಾರ್ಚ್ 31 ರವರೆಗೆ 7,192 ಜಲಸಂರಕ್ಷಣೆ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳಿಸಿ ಜಲಸಂಚಯ ಫೋರ್ಟಲ್‌ನಲ್ಲಿ ದಾಖಲಿಸಲಾಗಿತ್ತು. ಇವುಗಳಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳಾದ ಬದು ನಿರ್ಮಾಣ, ಬೋರ್ ವೆಲ್ ರೀಚಾರ್ಜ್‌ ಫಿಟ್, ಸೋಕ್ ಪಿಟ್, ಸಮಗ್ರ ಕೆರೆ ಅಭಿವೃದ್ಧಿ, ಕಟ್ಟೆಗಳ ಅಭಿವೃದ್ಧಿ, ಕಲ್ಯಾಣಿಗಳ ಜೀರ್ಣೋದ್ಧಾರ, ಮಳೆ ನೀರು ಕೊಯ್ಲು, ತೆರೆದ ಬಾವಿ, ನಾಲಾ ಹೊಳೆತ್ತುವುದು, ಚೆಕ್ ಡ್ಯಾಂ ಕಾಮಗಾರಿಗಳು ಅನುಷ್ಠಾನಗೊಂಡಿದ್ದವು. ಈ ಕಾಮಗಾರಿಗಳನ್ನು ಕೇಂದ್ರ ನೋಡಲ್ ಅಧಿಕಾರಿಗಳ ತಂಡವು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದೀಗ ಪ್ರಶಸ್ತಿ ಲಭಿಸಿರುವುದು ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.

-ಕೆ.ಆರ್‌.ನಂದಿನಿ, ಸಿಇಒ, ಜಿಲ್ಲಾ ಪಂಚಾಯತ್‌