ಜಲಸಂರಕ್ಷಣೆ ಜನಾಂದೋಲನವಾಗಬೇಕು

| Published : Feb 06 2025, 11:47 PM IST

ಸಾರಾಂಶ

ಈ ಜಲಾನಯನ ಯಾತ್ರೆಯೂ ಕೇವಲ ಜಾಗೃತಿ ಅಭಿಯಾನವಲ್ಲ, ಇದು ಸಮುದಾಯಗಳು ಜಲಾನಯನ ಅಭಿವೃದ್ಧಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಜಲ ಭದ್ರತೆ ಹಾಗೂ ಕೃಷಿ ಸುಸ್ತಿರತೆಯ ರಾಷ್ಟ್ರೀಯ ಗುರಿಗಳಿಗೆ ಕೊಡುಗೆ ನೀಡಲು ಪ್ರೇರೇಪಿಸುವ ಒಂದು ಆಂದೋಲನವಾಗಬೇಕು. ಜಲಾನಯನ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರಮುಂದಿನ ಪೀಳಿಗೆಗೆ ಸತ್ವಯುತ ಮಣ್ಣು ಹಾಗೂ ಪಾನಯೋಗ್ಯ ನೀರನ್ನು ಉಳಿಸಿ ಹೋಗುವುದು, ಈಗಿನ ತಲೆಮಾರಿನ ಜವಾಬ್ದಾರಿಯಾಗಿದೆ. ಜಲಸಂರಕ್ಷಣೆ ಸರ್ಕಾರಿ ಅಭಿಯಾನವಾಗದೆ ಪರಿಣಾಮಕಾರಿ ಜನಾಂದೋಲನವಾಗಬೇಕು ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು. ಮುಳಬಾಗಿಲು ತಾಲೂಕಿನ ದುಗ್ಗಸಂದ್ರ ಹೋಬಳಿಯ ಕುರುಡುಮಲೆ ಗಣಪತಿ ದೇವಸ್ಥಾನ ಆವರಣದಲ್ಲಿ ಜಲಾನಯನಯಾತ್ರೆ ಅಭಿಯಾನಕ್ಕೆ ದೆಹಲಿಯಿಂದ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದರು.ಜಲಾನಯನ ಸಂರಕ್ಷಣೆ

ಈ ಅಭಿಯಾನವು ಮಾರ್ಚ್ ಮಾಹೆಯವರೆಗೆ ಅಗ್ಮಿಂಡೆಟ್ ರಿಯಾಲಿಟಿ (ಎ.ಆರ್) ಪರಿಕರಗಳು ಮತ್ತು ಡಿಜಿಟಲ್ ಪ್ರದರ್ಶನಗಳನ್ನು ಹೊಂದಿರುವ ಅತ್ಯಾದುನಿಕ ಜಲೀಕರಣ ಯಾತ್ರಾ ವ್ಯಾನ್ ದೇಶಾದ್ಯಂತ ಸಂಚರಿಸಲಿದೆ. ಈ ಅಭಿಯಾನದಡಿ ಜಲಾನಯನ ಸಂರಕ್ಷಣೆ ಮಣ್ಣಿನ ಆರೋಗ್ಯರ್ವರ್ಧನೆ ಮತ್ತು ಮಳೆನೀರು ಕೊಯ್ಲುಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದೆ ಎಂದರು. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ೨ರ ಜಲನಯನ ಅಭಿವೃದ್ಧಿ ಘಟಕದ ಅಡಿಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಜಲಾನಯನ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವುದು, ಈ ಅಭಿಯಾನದ ಪ್ರಾಥಮಿಕ ಉದ್ದೇಶವಾಗಿದೆ. ಈ ಜಲಾನಯನ ಯಾತ್ರೆಯೂ ಕೇವಲ ಜಾಗೃತಿ ಅಭಿಯಾನವಲ್ಲ, ಇದು ಸಮುದಾಯಗಳು ಜಲಾನಯನ ಅಭಿವೃದ್ಧಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಜಲ ಭದ್ರತೆ ಹಾಗೂ ಕೃಷಿ ಸುಸ್ತಿರತೆಯ ರಾಷ್ಟ್ರೀಯ ಗುರಿಗಳಿಗೆ ಕೊಡುಗೆ ನೀಡಲು ಪ್ರೇರೇಪಿಸುವ ಒಂದು ಆಂದೋಲನ ಎಂದರು. ಕೃಷಿ ಯೋಜನೆಗಳ ಮಾಹಿತಿ

ಶಾಸಕ ಡಾ.ಜಿ. ಕೊತ್ತೂರು ಮಂಜುನಾಥ್ ಮಾತನಾಡಿ, ನೀರು, ಮಣ್ಣು, ಗಾಳಿ, ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ಬರುವ ಕೃಷಿಯೇತರ ವಿವಿಧ ಯೋಜನೆಗಳ ಬಗ್ಗೆ ರೈತರು ತಿಳಿದುಕೊಳ್ಳಬೇಕು ಹಾಗೂ ತಮ್ಮ ವ್ಯಾಪ್ತಿಯಲ್ಲಿ ಕೃಷಿಗೆ ಸಂಬಂಧಿಸಿದ ಅಧಿಕಾರಿಗಳ ಬಳಿ ಹೋಗಿ ಯೋಜನೆಗಳ ಬಗ್ಗೆ ಪೂರಕ ಮಾಹಿತಿಗಳನ್ನು ತಿಳಿದುಕೊಂಡು ಎಲ್ಲ ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಎಂಎಲ್ಸಿ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಕೋಲಾರ ಜಿಲ್ಲೆಯ ರೈತರು ಬುದ್ಧಿಶಾಲಿಗಳು ಹಾಗೂ ಕೃಷಿಯಲ್ಲಿ ಯಾವುದೇ ಹೊಸ ಕೃಷಿ ಚಟುವಟಿಕೆಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಕೋಲಾರ ಜಿಲ್ಲೆ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ರೈತರು ದೇಶಕ್ಕೆ ಮಾದರಿಯಾಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಚಾಲನೆ ನೀಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಯೋಜನೆಗೆ ದೇಶಾದ್ಯಂತ ಚಾಲನೆ

ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಬಿ. ಮಹೇಶ್ ಮಾತನಾಡಿ, ಈ ಅಭಿಯಾನಕ್ಕೆ ಇಂದು ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಚಾಲನೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದಾದ್ಯಂತ ಇದನ್ನು ವರ್ಚುವಲ್ ಆಗಿ ಹೆಚ್ಚು ಪ್ರಚಾರ ಮೂಡಬೇಕು ಹಾಗೂ ರಾಜ್ಯದಲ್ಲಿ ೩೦ ದಿನಗಳ ಕಾಲ ಸಂಚಾರಿ ವಾಹನ ಸಂಚರಿಸಲಿದೆ ಎಂದು ತಿಳಿಸಿದರು. ಮಾರ್ಗದರ್ಶಕರಿಗೆ ಪ್ರಶಸ್ತಿ

ಈ ಸಂದರ್ಭದಲ್ಲಿ ಜಲಾನಯನ ಕಾರ್ಯಕ್ರಮದ ಮಾರ್ಗದರ್ಶಕರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಯಿತು ಹಾಗೂ ಜಲಾನಯನ ಕಾರ್ಯಕ್ರಮದ ಬಗ್ಗೆ ಚಿತ್ರಕಲೆ, ರಂಗೋಲಿ ಸ್ಪರ್ಧೆ, ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಜಂಟಿ ಕೃಷಿ ನಿರ್ದೇಶಕ ಸುಮ ಎಂ.ಆರ್, ಗ್ರಾಪಂ ಅಧ್ಯಕ್ಷೆ ಟಿ.ನಾಗಮಣಿ ರಮೇಶ್, ಪಂಚಾಯತ್ ಉಪಾಧ್ಯಕ್ಷ ರಮೇಶ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಡಿ.ಎಲ್.ನಾಗರಾಜ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಮಹಮ್ಮದ್ ಪರ್ವೇಜ್‌ ಬಂಥನಾಳ್, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಬೆಂಗಳೂರು ಉತ್ತರ ವಿವಿ ಡೀನ್‌ ಗೋಪಾಲ್ ಗೌಡ, ಕೃಷಿ ಇಲಾಖೆ ಜಂಟಿ ಉಪನಿರ್ದೇಶಕಿ ಭವ್ಯರಾಣಿ ಇದ್ದರು.

.