ಸಾರಾಂಶ
ರಟ್ಟೀಹಳ್ಳಿ: ಬುಧವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಪಟ್ಟಣದಾದ್ಯಂತ ಅನೇಕ ಅವಾಂತರಗಳು ಸೃಷ್ಟಿಯಾಗಿದ್ದು, 4-5 ಮನೆಗಳಿಗೆ ನೀರು ನುಗ್ಗಿ ಜನತೆಯ ನಿದ್ದೆಗೆಡಿಸಿದೆ.
4-5 ದಿನಗಳಿಂದ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ರಾಣಿಬೆನ್ನೂರ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸುಮಾರು ಕಿಲೋ ಮೀಟರನಷ್ಟು ನೀರು ನಿಂತ ಪರಿಣಾಮ ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ನೂರಾರು ಎಕರೆ ಹೊಲಗಳಿಗೆ ನುಗ್ಗಿದ ಮಳೆ ನೀರು ಬೆಳೆಗಳು ನಾಶಮಾಡಿದೆ.ರಾಣಿಬೆನ್ನೂರ ರಸ್ತೆಯ ನಿವಾಸಿ ಅಶೋಕ ಮೇಸ್ತಾ, ಕುಮಾರೇಶ್ವರ ಕಾಲೇಜ್ ರಸ್ತೆಯ ನಿವಾಸಿ ರಾಘವೇಂದ್ರ ಮಾನಪ್ಪನವರ, ರಮೇಶ ಮಾನಪ್ಪನವರ ಅವರ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ.
ಮಾಸೂರ ರಸ್ತೆಯ ರಾಮತೀರ್ಥ ತುಂಗಾ ಮೇಲ್ದಂಡೆ ಸೇತುವೆ ಕೆಳಗಿನ ತಗ್ಗು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿಂತ ನೀರಿನಿಂದಾಗಿ ರಸ್ತೆ ದಾಟಲು ವಾಹನ ಸವಾರರು ಸಾರ್ವಜನಿಕರು ಪರಡಾಡಿದರು.ತಾಲೂಕಿನ ಶಿರಗಂಬಿ ಸತಗೀಹಳ್ಳಿ ಮಾರ್ಗದ ಹಳ್ಳ ಕಳೆದ ಅನೇಕ ವರ್ಷಗಳಲ್ಲಿ ಮೊದಲ ಬಾರಿ ತುಂಬಿ ಸಾಕಷ್ಟು ಪ್ರಮಾಣದ ನೀರು ಹೊಲಗಳಿಗೆ ನುಗ್ಗಿದ ಪರಿಣಾಮ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ತಕ್ಷಣ ಎಚ್ಚೆತ್ತ ಪೌರ ಕಾರ್ಮಿಕರು: ಬುಧವಾರ ರಾತ್ರಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಪಟ್ಟಣದ ವಿವಿಧ ಪ್ರದೇಶಗಳ ಕಾಲುವೆಗಳು ತುಂಬಿ ರಸ್ತೆ ಮೇಲೆ ನಿಂತ ನೀರನ್ನು ಸರಾಗವಾಗಿ ಹರಿದು ಹೊಗುವಂತೆ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರು ಶ್ರಮವಹಿಸಿದರು.ಹಾನಿಯಾದ ಸ್ಥಳಕ್ಕೆ ತಹಸೀಲ್ದಾರ್ ಭೇಟಿ:ನಿರಂತರ ಮಳೆಯಿಂದ ಹಾನಿಯಾದ ಗ್ರಾಮಗಳಿಗೆ ಗುರುವಾರ ತಹಸೀಲ್ದಾರ ಕೆ. ಗುರುಬಸವರಾಜ, ಕಂದಾಯ ಅಧಿಕಾರಿ ಶಂಕರ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ 12 ಮನೆಗಳು ಹಾನಿಯಾಗಿದ್ದು, ಸುಮಾರು 200 ಎಕರೆ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳು ಹಾನಿಯಾಗಿದ್ದು, ಕಿರಗೇರಿ 2, ಹಿರೇಮಾದಾಪುರ-03, ನೇಶ್ವಿ-01, ಕೊಡಮಗ್ಗಿ-01, ಹುಲ್ಲತ್ತಿ- 01, ಕ್ಯಾತನಕೇರಿ-01 ಹಾಗೂ ರಟ್ಟೀಹಳ್ಳಿ ಪಟ್ಟಣದ 03 ಮನೆಗಳಿಗೆ ಧಕ್ಕೆಯಾಗಿದೆ.