ಸಾರಾಂಶ
ಕೊಪ್ಪಳ: ನಗರದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಗೆ ನಗರದ ಮೆಹೆಬೂಬ್ ನಗರ, ಕಾತರ್ಕಿ ರಸ್ತೆ, ಶ್ರೀಶೈಲನಗರ ನಿರ್ಮಿತಿ ಕೇಂದ್ರ, ಸಿಂದೋಗಿ ರಸ್ತೆ, ಹಮಾಲರ ಕಾಲನಿ, ಕುವೆಂಪು ನಗರ, ವಡ್ಡರ ಓಣಿ ಮತ್ತು ಕನಕಗಿರಿ ಓಣಿ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯ ಮನೆಗಳಿಗೆ ನುಗ್ಗಿದ್ದು, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ನಗರಸಭೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದರು.
ಓಣಿಗಳಲ್ಲಿ ಚರಂಡಿ, ಒಳಚರಂಡಿ ನಿರ್ಮಾಣ ಮತ್ತು ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಯಿತು. ರಸ್ತೆ ಉಪ, ರಸ್ತೆಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಪೌರಾಯುಕ್ತರಾದ ಸುರೇಶ್ ಬಬ್ಲಾದ್, ಅಭಿಯಂತರ ಸೋಮು ಪಾಲ್ಗೊಂಡಿದ್ದರು.
ಧಾರಾಕಾರ ಮಳೆ, 16 ಮನೆಗಳಿಗೆ ಭಾಗಶಃ ಹಾನಿ:ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇದುವರೆಗೂ 16 ಮನೆಗಳು ಭಾಗಶಃ ಕುಸಿದಿದ್ದರೆ, ಓರ್ವ ಮಗು ಅಸು ನೀಗಿದೆ ಮತ್ತು ಎರಡು ಜಾನುವಾರುಗಳು ಬಲಿಯಾಗಿವೆ.ಮಳೆಯಿಂದಾದ ಹಾನಿಯ ಕುರಿತು ಮಾಹಿತಿ ನೀಡಿರುವ ಜಿಲ್ಲಾಡಳಿತ, ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆ ಅಲ್ಲಲ್ಲಿ ಸುರಿಯುತ್ತಲೇ ಇದೆ. ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳು ಜರುಗಿವೆ. ಇದುವರೆಗೂ 16 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ ಒಂದು ಮಗು ಅಸು ನೀಗಿದೆ. ಎರಡು ಜಾನುವಾರುಗಳು ಬಲಿಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಜಾನುವಾರುಗಳು ಬಲಿಯಾಗಿರುವುದಕ್ಕೆ ₹37,500ದಂತೆ ₹75 ಸಾವಿರ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ 16 ಮನೆಗಳು ಭಾಗಶಃ ಬಿದ್ದಿದ್ದು, ಈ ಪೈಕಿ 11 ಮನೆಗಳಿಗೆ ಪರಿಹಾರ ನೀಡಲಾಗಿದೆ.