ಸಾರಾಂಶ
ರಾಮನಗರ: ಎರಡು ದಶಕಗಳ ತರುವಾಯ ಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಮಂಚನಬೆಲೆ ಜಲಾಶಯದ ಎಡ ದಂಡೆ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.
ಮಂಚನಬೆಲೆ ಜಲಾಶಯದಲ್ಲಿ ನೀರನ್ನು ಲಿಫ್ಟ್ ಮಾಡುವ ಯಂತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ಎಡದಂಡೆ ಕಾಲುವೆಗೆ ನೀರು ಹರಿಸಿದರು. ಕಾಲುವೆಯಲ್ಲಿ ನೀರು ಹರಿಯುತ್ತಿರುವುದನ್ನು ಕಂಡು ಸಂತಸಗೊಂಡ ಗ್ರಾಮಸ್ಥರು ಇಕ್ಬಾಲ್ ಹುಸೇನ್‌ಗೆ ರೇಷ್ಮೆ ಹಾರ ಹಾಕಿ ಅಭಿನಂದಿಸಿದರು. ಆನಂತರ ಶಾಸಕರು ನಾಲೆ ದಂಡೆ ಮೇಲೆ ಕಾಲ್ನಡಿಗೆಯಲ್ಲಿ ಸಾಗಿ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಚನಬೆಲೆ ಜಲಾಶಯದಿಂದ ಎಡದಂಡೆ ನಾಲೆಯಿಂದ ನೀರು ಹರಿಯುವುದನ್ನು ರೈತರ ಬಹು ವರ್ಷಗಳ ಕನಸಾಗಿತ್ತು. 20 ವರ್ಷಗಳಿಂದ ನಾಲೆಯಲ್ಲಿ ನೀರು ಹರಿಸಿರಲಿಲ್ಲ. ರೈತನ ಮಗನಾಗಿ ಮತ್ತು ರೈತನಾಗಿ ಆ ಕನಸನ್ನು ಸಾಕಾರಗೊಳಿಸುವ ಕೆಲಸ ಮಾಡಿರುವುದಕ್ಕೆ ಖುಷಿ ತಂದಿದೆ ಎಂದರು.
ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಾಲೆ ನಿರ್ಮಿಸಿದ್ದರೂ ಅದರ ಪ್ರಯೋಜನ ಪಡೆಯಲಿಲ್ಲ ಎಂಬ ಕೊರಗು ನೀಗಿದ್ದು, ಇದರಿಂದ ಹೈನುಗಾರಿಕೆ, ರೇಷ್ಮೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಅಂತರ್ಜಲವೂ ವೃದ್ಧಿಯಾಗಲಿದೆ ಎಂದು ತಿಳಿಸಿದರು.ಈಗ ಎಡ ದಂಡೆ ನಾಲೆಯನ್ನು 20 ಕಿ.ಮೀ.ವರೆಗೆ ಸ್ವಚ್ಛಗೊಳಿಸಿದ್ದು, ಅಲ್ಲಿವರೆಗೂ ನೀರು ಸರಾಗವಾಗಿ ಹರಿಯಲಿದೆ. ಮುಂದಿನ 15 ದಿನದೊಳಗೆ ಬಲದಂಡೆ ನಾಲೆಯನ್ನು ದುರಸ್ತಿಗೊಳಿಸಿ ನೀರು ಬಿಡಲಾಗುವುದು. ಎಡದಂಡೆ ನಾಲೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ. ಕೈಲಾಂಚವರೆಗೂ ನೀರು ಹರಿಯುವುದರಲ್ಲಿ ಸಂಶಯ ಇಲ್ಲ ಎಂದರು.
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.
ಇನ್ನು ಶಾಸಕ ಬಾಲಕೃಷ್ಣರವರ ಸಹಕಾರ ಮರೆಯುವಂತಿಲ್ಲ. ಮಂಚನಬೆಲೆ ಜಲಾಶಯದ ಎಡ ಮತ್ತು ಬಲ ದಂಡೆ ಕಾಲುವೆಗಳನ್ನು ನವೀಕರಣಗೊಳಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.ಮೈಸೂರು - ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ ಕಾಲುವೆ ಬಂದ್ ಮಾಡಿದ್ದು, ಅಲ್ಲಿ ಕಾಲುವೆ ಮುಂದುವರೆಸಿ ನೀರು ಹರಿಸುತ್ತೇವೆ. ಜಲಾಶಯದ ನೀರನ್ನು ಮಾಗಡಿ ಹಾಗೂ ಬಿಡದಿ ಪಟ್ಟಣಕ್ಕೂ ಕುಡಿಯುವ ಉದ್ದೇಶಕ್ಕೂ ಪೂರೈಕೆ ಮಾಡಲಾಗುತ್ತಿದೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿದ್ದು, ಆನಂತರ ಕಟ್ಟು ಪದ್ಧತಿಯಲ್ಲಿ ನಾಲೆಯಲ್ಲಿ ನೀರು ಹರಿಸಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ರಾಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ, ಉಪಾಧ್ಯಕ್ಷ ಚಿಕ್ಕಸ್ವಾಮಿ, ಕಾಂಗ್ರೆಸ್ ಮುಖಂಡರಾದ ದೊಡ್ಡವೀರಯ್ಯ, ರೈಡ್ ನಾಗರಾಜ್, ರವಿ, ಆಂಜನಪ್ಪ, ಪಾರ್ಥ, ವಸಂತ, ವಾಸು ಮತ್ತಿತರರು ಹಾಜರಿದ್ದರು.(ಒಂದು ಫೋಟೋ ಮಾತ್ರ ಸಾಕು)
16ಕೆಆರ್ ಎಂಎನ್ 1,2.ಜೆಪಿಜಿ1.ಮಂಚನಬೆಲೆ ಜಲಾಶಯದಲ್ಲಿ ಎಡದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.
2.ಎಡದಂಡೆ ನಾಲೆಯಲ್ಲಿ ನೀರು ಹರಿಯುತ್ತಿರುವುದನ್ನು ಶಾಸಕ ಇಕ್ಬಾಲ್ ಹುಸೇನ್ ವೀಕ್ಷಣೆ ಮಾಡಿದರು.