ಸಾರಾಂಶ
ಹೊಳಲ್ಕೆರೆ ತಾಲೂಕಿನ ರಾಮಘಟ್ಟ ಗ್ರಾಮದಲ್ಲಿ ಕೆರೆ ಮತ್ತು ಕೋಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಡಾ.ಎಂ.ಚಂದ್ರಪ್ಪ.
ಚೆಕ್‌ಡ್ಯಾಂ, ಕೆರೆ ಮತ್ತು ಕೋಡಿ ಅಭಿವೃದ್ಧಿ ಕಾಮಗಾರಿಗೆ ಡಾ.ಚಂದ್ರಪ್ಪ ಭರವಸೆ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ:
ಇನ್ನು ಆರೇಳು ತಿಂಗಳಲ್ಲಿ ತಾಲೂಕಿನಾದ್ಯಂತ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.ತಾಲೂಕಿನ ರಾಮಘಟ್ಟ ಗ್ರಾಮದಲ್ಲಿ 1.6 ಕೋಟಿ ರು. ವೆಚ್ಚದಲ್ಲಿ ಮಾಗಡಿಹಳ್ಳಕ್ಕೆ ಚೆಕ್‌ಡ್ಯಾಂ, ಕೆರೆ ಮತ್ತು ಕೋಡಿ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ರೈತರಿಗೆ ವಿದ್ಯುತ್ ಸಮಸ್ಯೆಯಾಗಬಾರದೆಂದು ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 500 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ ಒಂದು ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು. ಗುಣಮಟ್ಟದ ಶಾಲಾ ಕಾಲೇಜು, ಸಿ.ಸಿ.ರಸ್ತೆ, ಹೈಟೆಕ್ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆ. ನಾನು ಮಂತ್ರಿಯಲ್ಲ. ಕೆಲಸ ಮಾಡುವ ಇಚ್ಚಾಶಕ್ತಿಯಿಟ್ಟುಕೊಂಡಿರುವ ರಾಜಕಾರಣಿ ಎಂದು ಹೇಳಿದರು.ಮುಂದಿನ ಚುನಾವಣೆ ವೇಳೆಗೆ ಮೀಸಲಾತಿ ಬದಲಾವಣೆಯಾಗಬಹುದು. ನನ್ನ ತವರು ಮನೆ ಹೊಳಲ್ಕೆರೆಯನ್ನು ಮರೆಯುವುದಿಲ್ಲ. ರಾಜ್ಯದಲ್ಲಿ ಸರ್ಕಾರ ಯಾವುದೇ ಇರಲಿ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಪಡಿಸುವ ಯೋಗ್ಯತೆಯಿಟ್ಟುಕೊಂಡಿದ್ದೇನೆ ಎಂದರು.
ಉಪಕಾರ ಮಾಡಿದವರಿಗೆ ಸಹಾಯ ಮಾಡಬೇಕೆಂಬ ಮನಸ್ಥಿತಿ ನನ್ನದು. ನೀವುಗಳು ನನಗೆ ಮತ ನೀಡಿ ಗೆಲ್ಲಿಸಿದ್ದೀರ. 5 ವರ್ಷಗಳ ಕಾಲ ನಿಮ್ಮನ್ನು ತಲೆ ಮೇಲೆ ಹೊತ್ತು ಕೆಲಸ ಮಾಡುತ್ತೇನೆ. ಯಾವುದೇ ಜಾತಿ ತಾರತಮ್ಯ ಮಾಡುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಂಡು ನಿರ್ವಂಚನೆಯಿಂದ ಕೆಲಸ ಮಾಡುತ್ತೇನೆಂದರು.ಈ ವೇಳೆ ದೇವೇಂದ್ರಪ್ಪ, ಶೇಖರಪ್ಪ, ರಾಜಪ್ಪ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ನಾಗರಾಜ್, ರುದ್ರ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.