ಕನ್ನಡಪ್ರಭ ವಾರ್ತೆ ಹಿರಿಯೂರು

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 5300 ಕೋಟಿ ರು. ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಹಿರಿಯೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನೂರಾರು ರೈತರು ಗುರುವಾರ ನಗರದಿಂದ ಚಿತ್ರದುರ್ಗದವರೆಗೆ ಪಾದಯಾತ್ರೆ ಆರಂಭಿಸಿದರು.

ತಾಲೂಕಿನ ಕೆರೆಗಳ ನೀರಿಗಾಗಿ ನಗರದಲ್ಲಿ ಫೆ.4ರಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ರೈತ ಸಂಘಟನೆಯವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗಾಗಿ ಗುರುವಾರ ನಗರದಿಂದ ಪಾದಯಾತ್ರೆ ಪ್ರಾರಂಭಿಸಿದರು.

ನಗರದ ಗಾಂಧಿ ವೃತ್ತದಿಂದ ಹೊರಟ ಪ್ರತಿಭಟನಾ ಪಾದಯಾತ್ರೆ ನೆಹರೂ ಸರ್ಕಲ್, ಗುರುಭವನ ಮುಂಭಾಗದ ಮೂಲಕ ಚರ್ಚ್ ರಸ್ತೆ, ಹುಳಿಯಾರು ರಸ್ತೆ ತಲುಪಿ ಅಲ್ಲಿಂದ ಚಿತ್ರದುರ್ಗದ ಕಡೆ ನೂರಾರು ರೈತರು ನಡೆಯ ತೊಡಗಿದರು. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಹಳ್ಳಿಗಳಿಂದ ಟ್ರಾಕ್ಟರ್, ಟಾಟಾ ಎಸಿ ಮೂಲಕ ರೈತರು ಬಂದು ಪ್ರತಿಭಟನಾ ಸ್ಥಳ ತಲುಪಿದರು. ಮಹಿಳೆಯರು ಸಹ ಪಾದಯಾತ್ರೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಕಂಡುಬಂದರು.ಬಿರು ಬಿಸಿಲಿನಲ್ಲೂ ಪಾದಯಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ರೈತರು ದಾರಿಯುದ್ದಕ್ಕೂ ಕೆರೆಗಳಿಗೆ ನೀರು ಬೇಕೇ ಬೇಕು ಎಂದು ಘೋಷಣೆ ಕೂಗುತ್ತಾ ಸಾಗಿದರು. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 5300 ಕೋಟಿ ರು. ಹಣ ಬಿಡುಗಡೆ ಮಾಡಬೇಕು.

ರಾಜ್ಯಸರ್ಕಾರ ಬರುವ ಬಜೆಟ್‌ನಲ್ಲಿ 5,000 ಕೋಟಿ ರು. ಹಣ ಮೀಸಲಿಡಬೇಕು. ಐಮಂಗಲ, ಜೆಜಿ ಹಳ್ಳಿ, ಕಸಬಾ ಹೋಬಳಿಯ ಕೆರೆಗಳಿಗೆ ಮತ್ತು ಧರ್ಮಪುರ ಹೋಬಳಿಯಲ್ಲಿ ಬಿಟ್ಟು ಹೋಗಿರುವ ಕೆರೆಗಳಿಗೆ ನೀರು ತುಂಬಿಸಬೇಕು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಪಾದಯಾತ್ರೆ ಆರಂಭಿಸಿರುವ ರೈತರು ಮೊದಲ ದಿನವಾದ ಗುರುವಾರ ಸುಮಾರು 24 ಕಿಮೀ ನಡೆದು ಬುರುಜಿನರೊಪ್ಪದಲ್ಲಿ ತಂಗಲಾಗಿದೆ.


ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ಸಿದ್ದರಾಮಣ್ಣ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.