ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಲು ₹105 ಕೋಟಿ ವೆಚ್ಚದ ಯೋಜನೆ ಅನುಷ್ಠಾನವಾಗುತ್ತಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಕನ್ನಡಪ್ರಭವಾರ್ತೆ ಹೊಳಲ್ಕೆರೆ
ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಲು ₹105 ಕೋಟಿ ವೆಚ್ಚದ ಯೋಜನೆ ಅನುಷ್ಠಾನವಾಗುತ್ತಿದೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.ಹಳೆಹಳ್ಳಿ ಲಂಬಾಣಿಹಟ್ಟಿಯಿಂದ ಗಿಲಕೇನಹಳ್ಳಿ, ಗರಗ, ಮೇಕೆನಹಟ್ಟಿ ಮುಖಾಂತರ ಅಪ್ಪರಸನಹಳ್ಳಿವರೆಗೆ ಕೆಎಂಇಆರ್ ಸಿ ಯೋಜನೆಯಡಿ ₹15.48 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಿಸಿ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಟಿ.ಎಮ್ಮಿಗನೂರು, ಶಿವಗಂಗ, ತಾಳ್ಯ, ಎಚ್.ಡಿ. ಪುರ, ಕೆರೆಯಾಗಳಹಳ್ಳಿ ಕೆರೆಗಳಿಗೆ ಭದ್ರಾ ಮೇಲ್ದಂಡೆಯಡಿ ನೀರು ತುಂಬಿಸಲಾಗುವುದೆಂದು ಹೇಳಿದರು.ಮೂವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಭರಮಸಾಗರ ಶಾಸಕನಾಗಿದ್ದಾಗ ಸರ್ಕಾರದಲ್ಲಿ ಹಣವಿರಲಿಲ್ಲ. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ಐದು ವರ್ಷಗಳ ಕಾಲ ಹಗಲಿರುಳು ಶ್ರಮಿಸಿ 386 ಹಳ್ಳಿಗಲ್ಲಿ ರಸ್ತೆ ಮಾಡಿಸಿದ್ದರಿಂದ ಜನ ನನಗೆ ರಸ್ತೆ ರಾಜ ಎಂಬ ಬಿರುದು ನೀಡಿ, ಎರಡನೇ ಬಾರಿಗೂ ಚುನಾವಣೆಯಲ್ಲಿ ಗೆಲ್ಲಿಸಿದರು. ಸಾರ್ವಜನಿಕರ ಬದುಕನ್ನು ಅರ್ಥಮಾಡಿಕೊಂಡು ಕೆಲಸ ಮಾಡುವ ರಾಜಕಾರಣಿ ನಾನು. ನನ್ನ ಮೈಯಲ್ಲಿ ಒಂದು ತೊಟ್ಟು ರಕ್ತವಿರುವ ತನಕ ಗಿಲಿಕೇನಹಳ್ಳಿ ಜನರನ್ನು ಮಾತ್ರ ಮರೆಯುವುದಿಲ್ಲ ಎಂದು ಭಾವುಕರಾದರು. ಹೊಳಲ್ಕೆರೆ ಕ್ಷೇತ್ರಕ್ಕೆ 493 ಹಳ್ಳಿಗಳು ಸೇರಿದ್ದು, ಚೆನ್ನಗಿರಿ, ತರಿಕೆರೆಯ ಗಡಿವರೆಗೂ ನನ್ನ ವ್ಯಾಪ್ತಿಯಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳಾಗಿದ್ದರೂ ಈ ಹಳ್ಳಿಗಳಿಗೆ ರಸ್ತೆಯಿರಲಿಲ್ಲ. ಅದನ್ನು ಗಮನಿಸಿ ತಾಲೂಕಿನಾದ್ಯಂತ ಎಲ್ಲಾ ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆ ಮಾಡಿಸಿದ್ದೇನೆ. ರಸ್ತೆಗಳು ಎಲ್ಲಿ ಅಭಿವೃದ್ಧಿಯಾಗಿರುತ್ತವೋ ಅಂತಹ ದೇಶ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರ್ಥ ಎಂದು ಅಭಿಪ್ರಾಯಪಟ್ಟರು.
ಅದಕ್ಕಾಗಿ ಪ್ರಧಾನಿ ನರೇಂದ್ರಮೋದಿ ಹಾಗೂ ನಿತಿನ್‌ಗಡ್ಕರಿ ರಸ್ತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇಲ್ಲಿ ಪುಷ್ಕರಣಿಗೆ ಒಂದು ಹನಿ ನೀರು ಬರುತ್ತಿರಲಿಲ್ಲ. ಪೈಪ್‌ಲೈನ್ ಹಾಕಿಸಿ ನೀರು ತುಂಬಿಸಿದ್ದೇನೆ. ಸರ್ಕಾರ ಯಾವುದಾದರೂ ಇರಲಿ. ಅನುದಾನ ತರುವುದು ನನಗೆ ಗೊತ್ತಿದೆ ಎಂದು ತಿಳಿಸಿದರು.ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಶುದ್ದ ಕುಡಿಯುವ ನೀರು ತಂದು ಪ್ರತಿ ಮನೆಗೂ ಪೂರೈಸುವುದಕ್ಕಾಗಿ ಪೈಪ್‌ಲೈನ್ ಅಳವಡಿಸಲು ₹368 ಕೋಟಿ ಖರ್ಚು ಮಾಡಲಾಗುತ್ತಿದೆ. ವಿ.ವಿ. ಸಾಗರದ ಮಧ್ಯೆ ನೀರಿನಲ್ಲಿ ಐವತ್ತರಿಂದ 60 ಅಡಿ ಆಳದಲ್ಲಿ ಪೈಪ್‌ಲೈನ್ ಹಾಕಿ ಮೋಟಾರ್ ಕೂರಿಸಿ ನೀರೆತ್ತಲು ಫಿಲ್ಟರ್ ಅಳವಡಿಕೆಗೆ ₹60 ಕೋಟಿ ವ್ಯಯಿಸಲಾಗಿದೆ. ಇನ್ನು ಮೂರ‍್ನಾಲ್ಕು ತಿಂಗಳಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಣಿಗಿರೀಶ್, ಉಪಾಧ್ಯಕ್ಷರಾದ ವಿಶಾಲಮ್ಮ, ಗಂಗಾಧರಚಾರಿ, ಸದಸ್ಯರಾದ ರಾಮಪ್ಪ, ಹನುಮಂತಪ್ಪ, ಈಶ್ವರಪ್ಪ, ಗೋವಿಂದಪ್ಪ, ರಂಗಸ್ವಾಮಿ, ರಾಜಪ್ಪ, ಶಿವಣ್ಣ, ರಂಗಪ್ಪ, ಕೃಷ್ಣಮೂರ್ತಿ, ರಾಜಪ್ಪ, ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಗುತ್ತಿಗೆದಾರ ಜೈರಾಮ್, ಗಿಲಿಕೇನಹಳ್ಳಿ, ಗರಗ, ಮೇಕೇನಹಟ್ಟಿಯ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.