ಬರಿದಾಯ್ತು ನೇತ್ರಾವತಿ ನದಿ ಒಡಲು : ಕೃಷಿಕರಲ್ಲಿ ಕಳವಳ

| Published : Apr 19 2024, 01:08 AM IST / Updated: Apr 19 2024, 12:31 PM IST

ಸಾರಾಂಶ

ಒಂದೇ ದಿನ ೨.೧ ಮೀಟರ್‌ನಷ್ಟು ನೀರನ್ನು ಹರಿಯ ಬಿಡಲಾಗಿದ್ದು, ಇದರಿಂದಾಗಿ ನದಿಯ ಒಡಲು ಬರಿದಾಗಿ ಮುಖ್ಯವಾಗಿ ಕೃಷಿಕರಲ್ಲಿ ಕಳವಳ ಮೂಡಿಸಿದೆ.

 ಉಪ್ಪಿನಂಗಡಿ : ನೇತ್ರಾವತಿ ನದಿಗೆ ಅಡ್ದಲಾಗಿ ಕಟ್ಟಲಾಗಿದ್ದ ಬಿಳಿಯೂರು ಅಣೆಕಟ್ಟಿನಿಂದಾಗಿ ಸಂಗ್ರಹವಾಗಿದ್ದ ಹಿನ್ನೀರಿನಿಂದ ನೀರು ತುಂಬಿ ಕಂಗೊಳಿಸುತ್ತಿದ್ದ ನೇತ್ರಾವತಿ ನದಿಯ ಒಡಲು ಒಂದೇ ದಿನದಲ್ಲಿ ಬರಿದಾಗಿ ಜನತೆಯನ್ನು ನಿರಾಸೆಗೊಳಿಸಿದೆ.

ಒಂದೇ ದಿನ 2.1 ಮೀಟರ್‌ನಷ್ಟು ನೀರನ್ನು ಹರಿಯ ಬಿಡಲಾಗಿದ್ದು, ಇದರಿಂದಾಗಿ ನದಿಯ ಒಡಲು ಬರಿದಾಗಿ ಮುಖ್ಯವಾಗಿ ಕೃಷಿಕರಲ್ಲಿ ಕಳವಳ ಮೂಡಿಸಿದೆ.

ಬುಧವಾರದ ವರೆಗೆ ಅಣೆಕಟ್ಟಿನಲ್ಲಿ 4 ಮೀಟರ್ ವರೆಗೆ ಹಲಗೆಯನ್ನು ಅಳವಡಿಸಲಾಗಿದೆಯಾದರೂ, ವಿಪರೀತ ಬಿಸಿಲ ಧಗೆಯಿಂದಾಗಿ ನೀರು ಆವಿಯಾಗುತ್ತಿರುವುದರಿಂದ ಅಣೆಕಟ್ಟಿನಲ್ಲಿ 3.7 ಮೀಟರ್‌ವರೆಗೆ ನೀರಿನ ಸಂಗ್ರಹವಿತ್ತು. ಈ ಮಧ್ಯೆ ಮಂಗಳೂರಿಗೆ ನೀರು ಸರಬರಾಜು ಕಲ್ಪಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣಕ್ಕೆ ಎಎಂಆರ್ ಅಣೆಕಟ್ಟಿನಿಂದ ನೀರು ಬಿಡಲಾಗಿತ್ತು. ಇದರ ಪರಿಣಾಮ ಸರಪಾಡಿ ಹಾಗೂ ಕಡೇಶ್ವಾಲ್ಯಗಳಲ್ಲಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಣೆಕಟ್ಟುಗಳು ಬರಿದಾಗತೊಡಗಿತ್ತು. ಜನತೆಗೆ ನೀರು ಒದಗಿಸುವ ನಿಟ್ಟಿನಲ್ಲಿ ಬಿಳಿಯೂರು ಅಣೆಕಟ್ಟಿನಿಂದ ನೀರು ಪೂರೈಸಲು ಸಣ್ಣ ನೀರಾವರಿ ಇಲಾಖೆ ಬುಧವಾರ ಸಾಯಂಕಾಲದಿಂದ ನೀರು ಬಿಟ್ಟಿದೆ. ಪ್ರಸಕ್ತ ಬಿಳಿಯೂರು ಅಣೆಕಟ್ಟಿನಲ್ಲಿ 1.6 ಮೀಟರ್ ಎತ್ತರದ ವರೆಗೆ ಮಾತ್ರ ನೀರಿದ್ದು, ಅನಿವಾರ್ಯತೆ ಉಂಟಾದರೆ ಮುಂದಿನ ದಿನಗಳಲ್ಲಿ ಅದನ್ನೂ ಬಿಟ್ಟುಕೊಡುವ ಸ್ಥಿತಿ ಉದ್ಭವಿಸಲಿದೆ.

ಬುಧವಾರದ ವರೆಗೆ ನದಿಯಲ್ಲಿ ಸಮೃದ್ದ ಜಲರಾಶಿಯನ್ನು ಕಂಡಿದ್ದ ಕೃಷಿಕ ಸಮುದಾಯ, ಗುರುವಾರದಂದು ನದಿಯ ನೀರು ಖಾಲಿಯಾಗುತ್ತಿದ್ದಂತೆಯೇ ಕಳವಳಕ್ಕೆ ತುತ್ತಾಯಿತು. ನದಿಯಲ್ಲಿ ಕೆಲ ಮೀಟರ್‌ಗಳಷ್ಟು ಎತ್ತರದವರೆಗೆ ನೀರು ಸಂಗ್ರಹಗೊಂಡಿದ್ದರಿಂದ ಕೃಷಿಕರು ತಮ್ಮ ತಮ್ಮ ತೋಟಗಳಿಗೆ ನದಿ ದಂಡೆಯಲ್ಲೇ ಪಂಪು ಅಳವಡಿಸಿ ಕೃಷಿ ಕಾರ್ಯಗಳಿಗೆ ನೀರುಣಿಸುತ್ತಿದ್ದರು. ಆದರೆ ಇದೀಗ ಯಾವುದೇ ಪೂರ್ವ ಸೂಚನೆ ನೀಡದೆ ನದಿಯ ನೀರು ಒಮ್ಮಿಂದೊಮ್ಮೆಲೆ ಖಾಲಿಯಾಗುತ್ತಿರುರುವುದು ಚಿಂತೆಗೀಡು ಮಾಡಿದೆ.

ಗುರುವಾರ ಮಧ್ಯಾಹ್ನದಿಂದ ಅಣೆಕಟ್ಟಿನ ಗೇಟುಗಳನ್ನು ಪುನಃ ಅಳವಡಿಸಲಾಗಿದ್ದು, ಎಲ್ಲೆಡೆಯಲ್ಲೂ ನದಿಯಲ್ಲಿ ನೀರಿನ ಹರಿವು ನಿಂತಿರುವುದರಿಂದ ಮಳೆ ಬಾರದೆ ಮತ್ತೆ ನೀರಿನ ಸಂಗ್ರಹವಾಗುವ ಸಾಧ್ಯತೆ ಇಲ್ಲವಾಗಿದೆ. ಮುಂಬರುವ ದಿನಗಳಲ್ಲಿ ಮಳೆ ಸುರಿಯದೇ ಇದ್ದಲ್ಲಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಕಾಡುವ ಭೀತಿ ಮೂಡಿದೆ.

ಕುಡಿಯುವ ನೀರಿಗಾಗಿ ಅನಿವಾರ್ಯ ಕ್ರಮ: ಸಹಾಯಕ ಅಭಿಯಂತರ ಶಿವಪ್ರಸನ್ನ

ಮಂಗಳೂರಿಗೆ ಕುಡಿಯುವ ನೀರು ಒದಗಿಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಕೊರತೆ ಕಾಣಿಸಿದ್ದಕ್ಕೆ ಎ ಎಂ ಆರ್ ಅಣೆಕಟ್ಟಿನಿಂದ ನೀರು ಹರಿಸಲಾಗಿತ್ತು. ಪ್ರಸಕ್ತ ಸರಪಾಡಿ ಮತ್ತು ಕಡೆಶ್ವಾಲ್ಯ ಬಹುಗ್ರಾಮ ಕುಡಿಯುವ ಯೋಜನೆಗೆ ನೀರಲ್ಲದೆ ಸಮಸ್ಯೆ ಕಾಡಿದಾಗ ಸಮತೋಲನದ ಜಲಾಶಯವಾಗಿದ್ದ ಬಿಳಿಯೂರು ಅಣೆಕಟ್ಟಿನಿಂದ ಅನಿವಾರ್ಯವಾಗಿ ನೀರನ್ನು ಹೊರಕ್ಕೆ ಬಿಡಬೇಕಾಗಿ ಬಂತು. ಅದರ ಹೊರತಾಗಿಯೂ ಅಣೆಕಟ್ಟಿನಲ್ಲಿ ೧.೬ ಮೀಟರ್ ಎತ್ತರದಷ್ಟು ನೀರನ್ನು ಉಳಿಸಿಕೊಳ್ಳಲಾಗಿದೆ. ಮಳೆ ವಿಳಂಬವಾದರೆ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಜಕ್ರಿಬೆಟ್ಟುವಿನಲ್ಲಿ ನಿರ್ಮಾಣವಾಗುತ್ತಿರುವ ಇನ್ನೊಂದು ಅಣೆಕಟ್ಟು ಮುಂದಿನ ವರ್ಷದಿಂದ ಕಾರ್ಯನಿರ್ವಹಿಸಿದರೆ ಬಿಳಿಯೂರು ಅಣೆಕಟ್ಟಿನ ನೀರು ಈ ಪ್ರದೇಶಕ್ಕೆ ಲಭಿಸಬಹುದಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಶಿವಪ್ರಸನ್ನ ಪತ್ರಿಕೆಗೆ ತಿಳಿಸಿದ್ದಾರೆ.

ಅಗತ್ಯ ಸಮಯದಲ್ಲೇ ನೀರು ಮಾಯವಾದರೆ ಹೇಗೆ?: ನಮ್ಮೂರಿನ ನದಿಯಲ್ಲಿ ಸಮೃದ್ಧ ಜಲರಾಶಿ ಇದೆ ಎಂದು ಜನತೆ ಸಂಭ್ರಮಿಸುತ್ತಿರುವಾಗ ನದಿಯಲ್ಲಿ ರಾತ್ರಿ ಬೆಳಗಾಗುವುದರ ನಡುವೆ ನೀರು ಬರಿದಾಗುತ್ತಿದೆ ಎಂದರೆ ಜನರ ಮನಸ್ಸಿಗೆ ಯಾವ ರೀತಿ ಆಘಾತವಾಗಿರದು. ಜಿಲ್ಲೆಯ ಜನತೆಗೆ ಕುಡಿಯುವ ನೀರು ಒದಗಿಸುವುದು ಅತ್ಯಗತ್ಯ. ಆದರೆ ಎಲ್ಲ ಭಾವನೆಗಳನ್ನು ಬದಿಗೊತ್ತಿ, ಸರ್ಕಾರದ ಯೋಜನೆಯನ್ನು ಸ್ವಾಗತಿಸಿದ್ದ ಈ ಪರಿಸರದ ಜನತೆಗೆ ಮುಂದಿನ ಒಂದೂವರೆ ತಿಂಗಳ ಬಿರುಬೇಸಗೆಯಲ್ಲಿ ನೀರಿನ ಕೊರತೆ ಕಾಡಿದರೆ ಏನು ಮಾಡುವುದು ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ್ ಬಜತ್ತೂರು ಪ್ರತಿಕ್ರಿಯೆ ನೀಡಿದ್ದಾರೆ.