ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ನಗರ ವ್ಯಾಪ್ತಿಯ 142 ಕೆರೆಗಳ ನೀರಿನ ಗುಣಮಟ್ಟವೂ ಅತ್ಯಂತ ಕಳಪೆಯಾಗಿದ್ದು, ಸಂಸ್ಕರಿಸಿದರೂ ಕುಡಿಯಲು ಯೋಗ್ಯವಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.2025ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಕೆರೆಗಳ ನೀರನ್ನು ಸಂಗ್ರಹಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿ ತಿಂಗಳೂ ಪರೀಕ್ಷೆ ನಡೆಸಿದೆ. ಈ ಎಲ್ಲ ಕೆರೆಗಳ ನೀರು ಸಾಂಪ್ರದಾಯಿಕ ಮಾರ್ಗದಲ್ಲಿ ಸಂಸ್ಕರಿಸಿಯೂ ಕುಡಿಯಲು ಯೋಗ್ಯವಿಲ್ಲ. ಬಹುತೇಕ ಕೆರೆಗಳ ನೀರು ಕೈಗಾರಿಕಾ ಉದ್ದೇಶಕ್ಕೆ ಮಾತ್ರ ಬಳಸಬಹುದು. ಕೆಲವು ಕೆರೆಗಳಲ್ಲಿ ಮಾತ್ರ ಜಲಚರಗಳು ಮತ್ತು ಪಕ್ಷಿಗಳು ಜೀವಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸ್ಯಾಂಕಿ ಕೆರೆಯೂ ಶುದ್ಧವಿಲ್ಲ:ಉತ್ತಮವಾಗಿ ನಿರ್ವಹಣೆಯಾಗಿದೆ ಎಂದು ಹೇಳಲಾಗುವ ಮಲ್ಲೇಶ್ವರದ ಸ್ಯಾಂಕಿ ಕೆರೆಯ ನೀರು ಕೂಡ ‘ಡಿ ವರ್ಗ’ದಲ್ಲಿದೆ. ಈ ಕೆರೆಯಲ್ಲಿ ಕೇವಲ ಜಲಚರಗಳು ಮತ್ತು ಹಕ್ಕಿಗಳು ವಾಸಿಸಬಹುದು. ಸಂಸ್ಕರಿಸಿಯು ಕುಡಿಯಲು ಯೋಗ್ಯವಲ್ಲ. ಅದೇ ರೀತಿ ವಿಶ್ವನೀಡಂ ಕೆರೆ, ಮಾಚೋಹಳ್ಳಿ ಕೆರೆ, ಅಂಧ್ರಹಳ್ಳಿ ಕೆರೆ, ಮಾಧವರ ಕೆರೆ, ರಾಯಸಂದ್ರ ಕೆರೆ, ಮಹದೇವಪುರ ಕೆರೆ-2, ಚಿಕ್ಕಗುಬ್ಬಿ, ದೊಡ್ಡ ಗುಬ್ಬಿ ಕೆರೆ, ಕಣ್ಣೂರು ಕೆರೆ, ಯಲ್ಲಮಲ್ಲಪ್ಪ ಟ್ಯಾಂಕ್, ವೆಂಗಯ್ಯನ ಕೆರೆಯಲ್ಲಿ ಜಲಚರಗಳು ಹಾಗೂ ಪಕ್ಷಿಗಳು ಕೂಡ ವಾಸಯೋಗ್ಯವಿಲ್ಲ. ಕೈಗಾರಿಕಾ ಉದ್ದೇಶಗಳಿಗೆ ಮಾತ್ರ ಬಳಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯಾವ ಕೆರೆಯೂ ಎ, ಬಿ, ಸಿಗಳಲ್ಲಿ ಇಲ್ಲ:ಕೆರೆಗಳ ನೀರಿನ ಗುಣಮಟ್ಟವನ್ನು ಎ, ಬಿ, ಸಿ, ಡಿ, ಇ ಎಂದು 5 ವಿಭಾಗಗಳಲ್ಲಿ ವರ್ಗೀಕರಣ ಮಾಡಲಾಗಿದೆ. ಬೆಂಗಳೂರಿನ 142 ಕೆರೆಗಳು ಡಿ ಮತ್ತು ಇ ವರ್ಗದಲ್ಲಿವೆ. ಎ, ಬಿ ಮತ್ತು ಸಿ ವರ್ಗದಲ್ಲಿದ್ದರೆ ಆ ನೀರನ್ನು ಶುದ್ಧೀಕರಿಸಿ, ಸಂಸ್ಕರಿಸಿ ಶುದ್ಧೀಕರಿಸಿ ಕುಡಿಯಬಹುದು. ಆದರೆ, ನಗರದ ಯಾವೊಂದು ಕೆರೆಯು ಮೂರು ವರ್ಗಗಳಲ್ಲಿ ಇಲ್ಲ. ಎಲ್ಲವೂ ಡಿ ಮತ್ತು ಇ ವರ್ಗದಲ್ಲಿವೆ.
ನಿರ್ಲಕ್ಷ್ಯದಿಂದ ಕೆರೆಗೆ ಮೋರಿ
ನೀರು, ತ್ಯಾಜ್ಯ ಸೇರ್ಪಡೆನಗರದನೂರಾರು ಕೆರೆಗಳ ನೀರಿನ ಗುಣಮಟ್ಟ ಕಳಪೆಯಾಗಲು ಮೋರಿ ನೀರು ಸೇರ್ಪಡೆ, ಕೆರೆಗೆ ಎಲ್ಲ ಮಾದರಿಯ ತ್ಯಾಜ್ಯಗಳನ್ನು ಎಸೆಯುವುದು, ಕೈಗಾರಿಕಾ ಪ್ರದೇಶಗಳಿಂದ ಬಿಡುಗಡೆಯಾಗುವ ನೀರು ಸೇರ್ಪಡೆಯಾಗುವುದು ಸೇರಿದಂತೆ ಮುಂತಾದ ಕಾರಣಗಳು ಪ್ರಮುಖವಾಗಿವೆ. ಕಳೆದ ಅನೇಕ ವರ್ಷಗಳಿಂದ ಕೆರೆಗಳ ನಿರ್ವಹಣೆಯನ್ನು ನಿರ್ಲಕ್ಷ್ಯಿಸಿರುವುದು ಇಂತಹ ದುಃಸ್ಥಿತಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಬೆಂಗಳೂರಿನ ಕೆರೆ ನೀರನ್ನು ಕುಡಿಯಲು ಹಾಗೂ ಸ್ನಾನಕ್ಕೆ ಬಳಸಿ ಎಂದು ಸರ್ಕಾರ ಹೇಳಿಲ್ಲ. ಈ ಕೆರೆಗಳು ಇರುವುದು ಅಂತರ್ಜಲ ಮಟ್ಟ ಹೆಚ್ಚಿಸಲು. ತಿಪ್ಪಗೊಂಡನಹಳ್ಳಿ ಕೆರೆ ನೀರನ್ನು ಜಲಮಂಡಳಿ ಶುದ್ಧೀಕರಿಸುತ್ತಿದೆ. ಬೆಂಗಳೂರಿನ ಕೆರೆಗಳ ನೀರು ಕುಡಿಯಲು ಮತ್ತು ಸ್ನಾನ ಮಾಡಲು ಅಲ್ಲ.- ಡಿ.ಕೆ.ಶಿವಕುಮಾರ್, ಡಿಸಿಎಂ