ಸಾರಾಂಶ
ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಬುಧವಾರ 33 ಗೇಟ್‌ಗಳಿಂದ 1ಲಕ್ಷ 49 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಯಿತು.
ಹೊಸಪೇಟೆ: ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಬುಧವಾರ 33 ಗೇಟ್‌ಗಳಿಂದ 1ಲಕ್ಷ 49 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಯಿತು. ಇದರಿಂದ ಹಂಪಿಯ ಪುರಂದರದಾಸರ ಮಂಟಪ ಸೇರಿದಂತೆ ಕೆಲ ಸ್ಮಾರಕಗಳು ಮತ್ತೆ ಮುಳುಗಡೆಯಾಗಿವೆ.
ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ರಘುನಂದನ ತೀರ್ಥರ ಬೃಂದಾವನ, ಸುಗ್ರೀವ ಗುಹೆ, ಸೀತೆ ಸೆರಗು, ವಿಷ್ಣುವಿನ ದಶಾವತಾರ ಉಬ್ಬು ಶಿಲ್ಪಗಳು, ಕೋಟಿ ಲಿಂಗಗಳು ಜಲಾವೃತವಾಗಿವೆ. ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಕಾಲು ಸೇತುವೆ, ಜನಿವಾರ ಮಂಟಪಗಳು ಮುಳುಗಡೆಯಾಗಿವೆ.ಹಂಪಿಯ ಕೋದಂಡರಾಮಸ್ವಾಮಿ ದೇವಾಲಯ ಬಳಿಯೂ ನೀರು ಮತ್ತೆ ಬಂದಿದೆ. ಕಂಪಭೂಪ ಮಾರ್ಗ ಮತ್ತೆ ಬಂದ್ ಆಗಿದ್ದು, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು ಸ್ಮಾರಕಗಳ ವೀಕ್ಷಣೆಗೆ ಅಚ್ಯುತರಾಯ ದೇವಾಲಯದ ಮಾರ್ಗ ಬಳಸಲಾಗುತ್ತಿದೆ. ನದಿಯ ನೀರು ಸೀತೆ ಸೆರಗು ಬಳಿಯೂ ಹರಿಯತ್ತಿದೆ. ತುಂಗಭದ್ರಾ ಜಲಾಶಯದ 33 ಗೇಟ್‌ಗಳನ್ನು ಮತ್ತೆ ತೆರೆದಿರುವುದರಿಂದ ಜಲಾಶಯ ವೀಕ್ಷಣೆಗೂ ಜನರ ದಂಡು ಹರಿದು ಬರುತ್ತಿದೆ.