ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ಪುರಾತನ ಕಾಲದಿಂದಲೂ ಪಂಚಭೂತಗಳನ್ನು ದೇವರು ಎಂದು ಪೂಜಿಸುತ್ತಿದ್ದೇವೆ. ಅದರಲ್ಲಿಯೂ ನೀರು ಜೀವಜಲ ಅದು ಬೆಂಕಿ ಆಗಬಾರದು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಹೇಳಿದರು.ತಾಲೂಕಿನ ಸಖರಾಯಪಟ್ಟಣದ ಕೋಡಿ ಬಿದ್ದ ಐತಿಹಾಸಿಕ ಅಯ್ಯನಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು. ಅಯ್ಯನಕೆರೆ ಕೋಡಿ ಬಿದ್ದ ನೀರನ್ನು ಲಿಫ್ಟ್ ಮೂಲಕ ಬರ‍್ಟಿಕೆರೆಗೆ ತುಂಬಿಸುವ ಕೆಲಸವನ್ನು ಹಿಂದೆ ನಮ್ಮ ಸರಕಾರವಿದ್ದಾಗ ಯೋಜನೆಗೆ ಸುಮಾರು ₹10 ಕೋಟಿ ಮಂಜೂರಾಗಿತ್ತು. ಅದು ಈಗ ಕಾರ್ಯರೂಪಕ್ಕೆ ಬಂದಿದೆ.ಆದರೆ ವಿವಾದವಾಗಿದೆ. ಯಾವ ಕಾರಣಕ್ಕೆ ವಿವಾದವಾಯಿತೋ ಗೊತ್ತಿಲ್ಲ. ಯಾರಿಗೂ ತೊಂದರೆಯಾಗದಂತೆ ರೈತರಲ್ಲಿರುವ ಆತಂಕ ಬಗೆಹರಿಸಿ ಕಾಮಗಾರಿ ಮಾಡಬೇಕು. ಯಾರನ್ನೋ ಆತಂಕದಲ್ಲಿಟ್ಟು ಭಯದಲ್ಲಿ ಕೆಲಸ ಮಾಡುವುದು ಬೇಡ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲಾಡಳಿತ, ಸಚಿವರು, 2 ಕಡೆಯ ಶಾಸಕರು ಚರ್ಚಿಸಿ ತಿರ್ಮಾನ ಮಾಡುವುದು ಒಳಿತು. ನೀರು ಜೀವಜಲ, ಅದು ಬೆಂಕಿ ಆಗಬಾರದು. ಕೆರೆಯ ಕೆಳಭಾಗದವರಿಗೆ ಆತಂಕವಿದೆ. ಅದನ್ನು ನಿವಾರಿಸಿ ಎಷ್ಟು ನೀರನ್ನು ಯಾವಾಗ ಎಲ್ಲಿಂದ ಬಿಡಬೇಕು ಎಂಬುದನ್ನು ಮನವರಿಕೆ ಮಾಡಿ ಕರಾರು ಪತ್ರದ ಮೂಲಕ ಈ ಸಮಸ್ಯೆ ಪರಿಹರಿಸಿಕೊಡಿ ಎಂದರು.ಅಯ್ಯನಕೆರೆ ಅಭಿವೃದ್ಧಿಗೆ ನಾನು ಸಚಿವನಾಗಿದ್ದಾಗ ಸುಮಾರು ₹30 ಕೋಟಿ ಮಂಜೂರು ಮಾಡಿಸಿದ್ದು ಅದರಲ್ಲಿ ಕಾಮಗಾರಿ ಆಗಿದೆ. ಇನ್ನು ಕೆಲವು ಆಗಬೇಕಿದೆ. ಪ್ರವಾಸಿಗರ ತಾಣವಾಗಬೇಕು. ಜೊತೆಗೆ ಜೀವನಾಡಿ ಕೆರೆಯಾಗಿದ್ದು ಅದರತ್ತ ಗಮನಹರಿಸಿಬೇಕು ಎಂದರು. ಬಿಜೆಪಿ ರಾಜ್ಯಾಧ್ಯಕ್ಷರ ಸಾಲಿನಲ್ಲಿ ನೀವಿದ್ದೀರಾ ಎಂಬ ಪ್ರಶ್ನೆಗೆ ನಾನು ಆ ರೇಸಿನಲ್ಲಿಲ್ಲ. ಯಾರೇ ಅಧ್ಯಕ್ಷರಾದರೂ ನಮ್ಮ ಬೆಂಬಲ ಯಾವತ್ತೂ ಇದೆ ಎಂದರು. ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಕಲ್ಮರುಡಪ್ಪ ಮಾತನಾಡಿ, ಸಿ.ಟಿ. ರವಿ ಸಚಿವರಾಗಿದ್ದಾಗ ಅಯ್ಯನಕೆರೆ ಅಭಿವೃದ್ಧಿ ಕಂಡಿದೆ. ಇನ್ನೂ ಅಭಿವೃದ್ಧಿ ಆಗಬೇಕಿದೆ. ರೈತರು ನೀರನ್ನು ಮಿತವಾಗಿ ಬಳಸಿ, ಕೆರೆ ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ವಿಕಾಸ್ ,ಗ್ರಾಪಂ ಅಧ್ಯಕ್ಷೆ ರಾಜಮ್ಮ, ಬಿಳೇಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷ ಸ್ವಾಮಿ, ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಗೌಡ, ಜಿಪಂ ಮಾಜಿ ಅಧ್ಯಕ್ಷ ವಿಜಯಕುಮಾರ್, ಲೋಕೇಶ್ ಮಾಸ್ಟರ್, ಬಲ್ಲಾಳೇಶ್ವರ ಸೇವಾ ಸಮಿತಿ ಅಧ್ಯಕ್ಷ ಲೊಕೇಶ್, ಮಾಜಿ ಅಧ್ಯಕ್ಷ ಎಸ್. ಆರ್. ಯೋಗೀಂದ್ರ, ಮುಖಂಡರಾದ ರಾಜೀವ್, ಪ್ರಕಾಶ್, ಕೋಟೆ ರಂಗನಾಥ್, ನಂದೀಶ್ ಮದಕರಿ, ಪಾದಮನೆ ದಿನೇಶ್, ಸಖರಾಯಪಟ್ಟಣ , ಪಿಳ್ಳೇನಹಳ್ಳಿ ಗ್ರಾಪಂನ ಸದಸ್ಯರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು. 4ಕೆಕೆಡಿಯು3
ಕಡೂರು ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಅಯ್ಯನಕೆರೆಗೆ ಶಾಸಕ ಸಿ. ಟಿ. ರವಿ ಬಾಗಿನ ಅರ್ಪಿಸಿದರು. ಜೊತೆಯಲ್ಲಿ ಗ್ರಾಪಂ ಅಧ್ಯಕ್ಷರು, ಮುಖಂಡರು, ಸಾರ್ವಜನಿಕರು ಇದ್ದರು.