ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ವಾರಾಬಂದಿ ಮಾಡದೆ ನಿರಂತರ ನೀರು ಹರಿಸಬೇಕೆಂದು ರೈತರ ಕೂಗು ಒಂದೆಡೆಯಾಗಿ ಈ ಬಗ್ಗೆ ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆದ ಬೆನ್ನಲ್ಲೆ ನೀರು ಹರಿಯುವ ಸಮಯದಲ್ಲೆ ಕಾಲುವೆಗಳಿಗೆ ನೀರು ಹರಿಯದೆ ಹಲವು ರೈತರು ನೀರಾವರಿಯಿಂದ ವಂಚಿತರಾಗಿ ಬೆಳೆಗಳು ಒಣಗುತ್ತಿರುವ ಘೋರ ಪ್ರಸಂಗವೂ ಬಂದೊದಗಿದೆ.
ಕನ್ನಡಪ್ರಭ ವಾರ್ತೆ ಕೆಂಭಾವಿ ನಾರಾಯಣಪುರ
ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ವಾರಾಬಂದಿ ಮಾಡದೆ ನಿರಂತರ ನೀರು ಹರಿಸಬೇಕೆಂದು ರೈತರ ಕೂಗು ಒಂದೆಡೆಯಾಗಿ ಈ ಬಗ್ಗೆ ಒತ್ತಾಯಿಸಿ ಹಲವು ಪ್ರತಿಭಟನೆಗಳು ನಡೆದ ಬೆನ್ನಲ್ಲೆ ನೀರು ಹರಿಯುವ ಸಮಯದಲ್ಲೆ ಕಾಲುವೆಗಳಿಗೆ ನೀರು ಹರಿಯದೆ ಹಲವು ರೈತರು ನೀರಾವರಿಯಿಂದ ವಂಚಿತರಾಗಿ ಬೆಳೆಗಳು ಒಣಗುತ್ತಿರುವ ಘೋರ ಪ್ರಸಂಗವೂ ಬಂದೊದಗಿದೆ.ನಾರಾಯಣಪುರ ಎಡದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ಬರುವ ಮುಡಬೋಳ ಶಾಖಾ (ಎಂ.ಬಿ.ಸಿ) ಕಾಲುವೆಗಳಿಗೆ ಒಂದು ವಾರದಿಂದ ನೀರು ಹರಿಯದೆ ರೈತರು ಕಂಗಾಲಾಗಿದ್ದು, ಈ ಬಗ್ಗೆ ಸೋಮವಾರ ಕೆಂಭಾವಿ ಪಟ್ಟಣದ ನಾರಾಯಣಪುರ ಕಾಲುವೆಯ ಶಹಾಪುರ ಶಾಖಾ (ಎಸ್.ಬಿ.ಸಿ) ಕಾಲುವೆಯ ಬಳಿ ಆ ಭಾಗದ ನೂರಾರು ರೈತರು ಜಮಾಯಿಸಿ ಸಂಪೂರ್ಣ ಗೇಟ್ ಬಂದ ಮಾಡಿ ನೀರಾವರಿ ಇಲಾಖೆಯ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದರು. ಶಹಾಪುರ ಕಾಲುವೆಯ ಮೂಲಕ ಎಂಬಿಸಿ ಕಾಲುವೆಗೆ ತಲುಪುವ ಕೃಷ್ಣಾ ನೀರು ಅಧಿಕಾರಿಗಳ ನಿರ್ಲಕ್ಷ ಮತ್ತು ರಾಜಕೀಯ ಒತ್ತಡದಿಂದ ಕಳೆದ ನಾಲ್ಕು ದಿನಗಳ ಹಿಂದೆಯೆ ಬಂದ್ ಮಾಡಿ ಕೇವಲ ಎಸ್.ಬಿ.ಸಿ ಕಾಲುವೆಗೆ ಹರಿಯುತ್ತಿದೆ. ಈಗ ಮತ್ತೆ ವಾರಾಬಂದಿ ಪ್ರಾರಂಭವಾಗಿದ್ದು, ನೀರು ಸಂಪೂರ್ಣ ಬಂದ್ ಆದ ಹಿನ್ನಲೆಯಲ್ಲಿ ಭತ್ತ, ಮೆಣಸಿನಕಾಯಿ, ತೊಗರಿ ಸೇರಿದಂತೆ ಹಲವು ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ ಎಂದು ರೈತರು ತಮ್ಮ ಆಕ್ರೋಶ ಹೊರಹಾಕಿದರು.
ಎಂ.ಬಿ.ಸಿ ಕಾಲುವೆಯ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡುತ್ತಿದ್ದು, ಕಾಲುವೆಯ ನೀರನ್ನೇ ನಂಬಿ ಬದುಕುತ್ತಿರುವ ರೈತರ ಗತಿ ಏನು ಪ್ರಶ್ನೆ ಕಾಡುತ್ತಿದೆ. ಈ ಬಾರಿ ತೀವ್ರ ಬರಗಾಲ ಎದುರಿಸುತ್ತಿರುವ ರೈತರಿಗೆ ಇದ್ದ ಅಲ್ಪ ಸ್ವಲ್ಪ ಕಾಲುವೆ ನೀರನ್ನೂ ಸಮರ್ಪಕವಾಗಿ ಹರಿಯಲು ಬಿಡದ ಅಧಿಕಾರಿಗಳ ನಡೆ ತಲೆನೋವಾಗಿ ಪರಿಣಮಿಸಿದೆ.ಸೋಮವಾರ ರೈತ ಮುಖಂಡ ಮಹಾಂತಗೌಡ ಮದದ್ರಕಿ ನೇತೃತ್ವದಲ್ಲಿ ಮಾರಡಗಿ, ಚಿಗರಳ್ಳಿ, ಮುಡಬೋಳ ಸಹಿತ ಹಲವು ಭಾಗದ ನೂರಾರು ರೈತರು ಮೋಟಾರ್ ಬೈಕ್ ಮೂಲಕ ಶಹಾಪುರ ಶಾಖಾ ಕಾಲುವೆಗೆಯ ಮುಖ್ಯ ಗೇಟ್ ಬಳಿ ಆಗಮಿಸಿ ಅಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ರೈತರು ಕರೆ ಮಾಡಿದ್ದು, ಯಾವ ಅಧಿಕಾರಿಗಳೂ ಕರೆ ಸ್ವೀಕರಿಸದೇ ಸತಾಯಿಸಿದ್ದಾರೆ. ಇದಕ್ಕೆ ಬೇಸರ ವ್ಯಕ್ತಪಡಿಸಿದ ರೈತರು ಸ್ಥಳದಲ್ಲಿ ಮೂರು ಗಂಟೆ ಅವಧಿಗೆ ಕಾದು ಹಿಂದಿರುಗಿದ್ದಾರೆ. ಮುಖ್ಯ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದೆ ಹಾಗೂ ಕಾಲುವೆಯ ಕೊನೆಯ ಅಂಚಿನ ರೈತರಿಗೆ ನೀರು ಸಿಗದೆ ಬೆಳೆಗಳು ಒಣಗುವ ಹಂತಕ್ಕೆ ತಲುಪಿ ತೊಂದರೆಯಾಗುವ ಸೂಚನೆ ಎದುರಾಗಿದೆ.
ಕಾಲುವೆಗೆ ವಾರಾಬಂದಿ ಮೂಲಕ ನಿರಂತರ ನೀರು ಹರಿಸಬೇಕು ಎಂಬ ಸರ್ಕಾರದ ನಿಯಮವಿದ್ದರೂ ಕೇವಲ ಶಹಾಪೂರ ಶಾಖಾ ಕಾಲುವೆಗೆ ನೀರು ಹರಿಸಿ ನಮ್ಮ ಭಾಗದ ಮುಡಬೋಳ ಶಾಖಾ ಕಾಲುವೆಗೆ ನೀರು ಹರಿಸದೆ ಕಳೆದ ನಾಲ್ಕು ದಿನಗಳಿಂದ ಸಂಪೂರ್ಣ ಬಂದ್ ಮಾಡಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಅಧಿಕಾರಿಗಳ ನಡೆ ಅತ್ಯಂತ ಹೇಯಕೃತ್ಯವಾಗಿದ್ದು ರೈತರು ಸಿಡಿದೇಳುವ ಮೊದಲು ಸಮರ್ಪಕವಾಗಿ ನೀರು ಹರಿಸಿ ರೈತರ ಹಿತ ಕಾಪಾಡಬೇಕು ಎಂದು ಜಿಲ್ಲಾ ರೈತ ಸಂಘದ ಯುವ ಘಟಕಾಧ್ಯಕ್ಷ ಮಹಾಂತಗೌಡ ಪಾಟೀಲ್ ಮದ್ದರಕಿ ಹೇಳಿದರು.