ಸಾರಾಂಶ
ಕನ್ನಡಪ್ರಭ ವಾರ್ತೆ ಯಲಹಂಕ
ಐತಿಹಾಸಿಕ ಯಲಹಂಕ ಕೆರೆ ಆವರಣದಲ್ಲಿ ₹15 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ₹55 ಲಕ್ಷ ವೆಚ್ಚದಲ್ಲಿ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಭಾನುವಾರ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ಐತಿಹಾಸಿಕ ಯಲಹಂಕ ಕೆರೆ ಆವರಣದಲ್ಲಿ ಎಂಬೆಸ್ಸಿ ಸಂಸ್ಥೆಯ ಸಿಎಸ್‌ಆರ್ ಅನುದಾನದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ, ಕೆರೆಯ ಆವರಣದಲ್ಲಿ ಭದ್ರತೆ ಮತ್ತು ಅನೈತಿಕ ಚಟುವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿ.ಸಿ. ಕ್ಯಾಮೆರಾ ವನ್ನು ಲೋಕಾರ್ಪಣೆ ಮಾಡಿದ್ದೇವೆ.
ಯಲಹಂಕ ಕೆರೆ 6 ಕಿ.ಮೀ. ಉದ್ದದ ವಾಕಿಂಗ್ ಟ್ರ್ಯಾಕ್ ಹೊಂದಿರುವ ನಗರದ ಅತಿದೊಡ್ಡ ಕೆರೆಯಾಗಿದ್ದು, ಕೆರೆಯ ಆವರಣ ಮತ್ತು ಇಲ್ಲಿ ಕಲ್ಪಿಸಿರುವ ವಿವಿಧ ಸೌಲಭ್ಯಗಳನ್ನು ಸಾರ್ವಜನಿಕರು ತಮ್ಮದೆಂಬ ಭಾವನೆಯೊಂದಿಗೆ ಕಾಪಾಡಬೇಕೆಂದು ಸಲಹೆ ನೀಡಿದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಸಂಕಲ್ಪ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲವನ್ನು ಅರಳಿಸುವ ನಿಟ್ಟಿನಲ್ಲಿ ಬಿಜೆಪಿ ಬಲವರ್ಧನೆಗೆ ಶ್ರಮಿಸಲಾಗುತ್ತಿದೆ. ದೇವನಹಳ್ಳಿಯಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಲಾಗಿದೆ.
ದಕ್ಷಿಣ ಕಾಶಿ ಖ್ಯಾತಿಯ ಶಿವಗಂಗೆಯಿಂದ ಬೃಹತ್ ಕಾರ್ ರ್ಯಾಲಿಯ ಮೂಲಕ ''''ವಿಜಯ ಸಂಕಲ್ಪ ಯಾತ್ರೆಗೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಭಾನುವಾರ ಬೆಳಗ್ಗೆ ಯಲಹಂಕ ಉಪನಗರದ 80 ಅಡಿ ರಸ್ತೆಯಿಂದ 800 ಕಾರುಗಳ ಬೃಹತ್ ರ್ಯಲಿ ಹಮ್ಮಿಕೊಂಡಿದ್ದೇವೆ. ರ್ಯಾಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ.
ಇದು ರಾಜ್ಯದಲ್ಲೇ ಬೃಹತ್ ರ್ಯಾಲಿ ಎಂಬ ಖ್ಯಾತಿಗೆ ಭಾಜನವಾಗಲಿದೆ ಎಂದರು.ಜಲಸಿರಿ ಪ್ರತಿಷ್ಠಾನದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಸತೀಶ್, ಜಲಸಿರಿ ಪ್ರತಿಷ್ಠಾನದ ಸದಸ್ಯರಾದ ಬಾಬು, ಶ್ರೀನಿವಾಸಲು, ರವಿ, ಹರಿನಾಥ್, ಜಗದೀಶ್, ಚಂದ್ರು, ನರಸಿಂಹಮೂರ್ತಿ, ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ರಾಮಸಂಜೀವಯ್ಯ, ಹರ್ಷಿತ್, ಅಕ್ಷತ್, ಗುತ್ತಿಗೆದಾರರಾದ ಲೋಕೇಶ್, ಬಿ.ಸಂತೋಷ್, ಧನುಷ್ ಇದ್ದರು.