ಕನ್ನಡಪ್ರಭ ವಾರ್ತೆ ಜಮಖಂಡಿ

ಕೃಷ್ಣಾ ನದಿಯನ್ನು ಅವಲಂಬಿಸಿರುವ ಜಮಖಂಡಿ ಕ್ಷೇತ್ರ ವ್ಯಾಪ್ತಿಯ ಸುಮಾರು 23 ಗ್ರಾಮಗಳಲ್ಲಿ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಮಂಗಳವಾರ ಗೃಹ ಕಚೇರಿ ಸಾಕ್ಷಾತ್ಕಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಟಾಸ್ಕ್‌ಫೋರ್ಸ್‌ ಮೀಟಿಂಗ್‌ ನಡೆಸಲಾಗಿದೆ. ಅಗತ್ಯವಿರುವ ಕಡೆಗೆ ಬೋರ್‌ವೆಲ್‌ ದುರಸ್ತಿ ಮಾಡುವುದು, ಟ್ಯಾಂಕರ್‌ಗಳ ಮುಖಾಂತರ ನೀರು ಸರಬರಾಜು ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಹಿಪ್ಪರಗಿ ಜಲಾಶಯದ ಗೇಟ್‌ ಮುರಿದು ಹೋದ ಕಾರಣ ಸುಮಾರು 3 ಟಿಎಂಸಿ ನೀರು ನದಿ ಪಾತ್ರಕ್ಕೆ ಹರಿದು ಹೋಗಿದೆ. ಇದರಿಂದ ಜಲಾಶಯದಲ್ಲಿ ಕೇವಲ ಡೆಡ್‌ ಸ್ಟೋರೇಜ್‌ 0.8 ಟಿಎಂಸಿ ನೀರಿದೆ. ಈ ನೀರನ್ನು ಜಾಗರೂಕತೆಯಿಂದ ಬಳಸಿದರೆ ಜಮಖಂಡಿ ನಗರಕ್ಕೆ 4 ದಿನಕ್ಕೊಮ್ಮೆ ನೀರು ಪೂರೈಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ಸೂಪರ್‌ ಎಲ್‌ ನಿನೋ ; ವಾಯು ಮಂಡಲದಲ್ಲಿ ವ್ಯಾಪಿಸಿರುವ ಸೂಪರ್‌ ಎಲ್‌ ನಿನೋ ಪರಿಣಾಮವಾಗಿ ತಾಪಮಾನದಲ್ಲಿ ಹೆಚ್ಚಳವಾಗಿದೆ. ಅಲ್ಲದೇ ಇದರ ಪರಿಣಾಮವಾಗಿ ಮಳೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ವಿಶ್ವದೆಲ್ಲೆಡೆ ಇದರ ಪರಿಣಾಮ ಉಂಟಾಗಲಿದೆ. ಆದ್ದರಿಂದ ದೇವರ ಮೊರೆ ಹೋಗಿದ್ದೇವೆ. ಮಹರಾಷ್ಟ್ರದ ಕೊಯ್ನಾ ಅಚ್ಚುಕಟ್ಟು ಪ್ರದೇಶದಲ್ಲೂ ಮಳೆ ಇಲ್ಲದ ಕಾರಣ ನೀರು ಬಿಡಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಮನವಿ ಸಲ್ಲಿಸುವುದಾಗಿ ಹೇಳಿದೆ. ಕೊಯ್ನಾದಿಂದ 10 ಟಿಎಂಸಿ ನೀರು ಬಿಟ್ಟರೆ ಇಲ್ಲಿಗೆ 3 ಟಿಎಂಸಿಯಷ್ಟು ನೀರು ಬಂದು ಸೇರುತ್ತದೆ. ಅದಕ್ಕಾಗಿ ಸರ್ಕಾರ ವೆಚ್ಚ ಭರಿಸಬೇಕಾಗುತ್ತದೆ ಎಂದು ತಿಳಿಸಿದರು.

ಮೇ 28 ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂಬ ನಿರಿಕ್ಷೆಯಲ್ಲಿದ್ದೇವೆ. ದೇವರು ಕರುಣೆ ತೋರಬೇಕಿದೆ ಎಂದ ಅವರು, ನೀರಿನಿಂದ ತೊಂದರೆಗೀಡಾದ ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ₹22 ಲಕ್ಷ ಬಿಡುಗಡೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ಕೊಳವೆಬಾವಿಗಳ ಮುಖಾಂತರ ನೀರು ಸರಬರಾಜು ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.


ರಸ್ತೆಗಳ ಅಭಿವೃದ್ಧಿ;ಕ್ಷೇತ್ರವ್ಯಾಪ್ತಿಯ ಸಾವಳಗಿ, ಕುರುಗೊಡ, ಆಲಗೂರ, ಕಡಕೊಳ, ಜಂಬಗಿ, ತುಬಚಿ ಕಾಜಿಬೀಳಗಿ ಮುಂತಾದ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ನಗರದ ಎ,ಜಿ. ದೇಸಾಯಿ ವೃತ್ತದಿಂದ ಮಾಳಿ ಪಂಪ್‌, ಡಾ,ಅಂಬೇಡ್ಕರ್ ವೃತ್ತ ದಿಂದ ಚಟ್ಟು ಸಿಂಗ್‌ ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭ ವಾಗಲಿದೆ. ಮರೆಗುದ್ದಿ ಏತ ನೀರಾವರಿ ಯೋಜನೆಯ ಮೊದಲನೆ ಹಂತದ ಟೆಂಡರ್‌ ಗಾಗಿ ₹110 ಕೋಟಿ ಮಂಜೂರಾಗಿದೆ ಎಂದು ತಿಳಿಸಿದರು. ಶ್ರೀಧರ ಕಂಬಿ ಇದ್ದರು.